ಸಂಪಾದಕೀಯ | ನಾಡು-ನುಡಿ ಸೇವೆಯೇ ಶ್ರೇಷ್ಠ

Untitled design (5)
Published on

ಕರ್ನಾಟಕ ರಾಜ್ಯ ಸಹಸ್ರಮಾನಗಳ ಭವ್ಯ ಪರಂಪರೆ, ವೈವಿಧ್ಯಮಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಒಳಗೊಂಡಿದೆ. ಪ್ರಾಚೀನ ಕಾಲದಲ್ಲಿ ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯದಂತಹ ಮಹಾನ್ ರಾಜವಂಶಗಳು ಕನ್ನಡನಾಡಿನಲ್ಲಿ ಆಳ್ವಿಕೆ ನಡೆಸಿವೆ. ಹಂಪಿ, ಬೇಲೂರು, ಹಳೇಬೀಡು ಮುಂತಾದ ಐತಿಹಾಸಿಕ ಪ್ರಸಿದ್ಧ ಸ್ಥಳಗಳು ಇಡೀ ಜಗತ್ತಿನಲ್ಲೇ ವಾಸ್ತುಶಿಲ್ಪದ ಅದ್ಭುತಗಳೆಂದು ಪರಿಗಣಿತವಾಗಿವೆ. ಗಂಗ, ಚಾಲುಕ್ಯ, ಹೊಯ್ಸಳ ಶೈಲಿಯ ದೇವಾಲಯಗಳು ವಿಶ್ವಪರಂಪರೆಯ ತಾಣಗಳಾಗಿವೆ. ಈ ರಾಜವಂಶಗಳು ಧರ್ಮ, ಕಲೆ, ಸಂಸ್ಕೃತಿ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ನಾಡಿಗೆ ಅಪೂರ್ವ ಕೊಡುಗೆ ನೀಡಿವೆ. ಬ್ರಿಟಿಷರ ಆಳ್ವಿಕೆ ಕೊನೆಗೊಂಡ ನಂತರ, ಏಕೀಕರಣದ ಮೂಲಕ ಮೈಸೂರು, ಬಾಂಬೆ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಹೈದರಾಬಾದ್ ಸಂಸ್ಥಾನದ ಕನ್ನಡ ಭಾಷಿಕ ಭಾಗಗಳನ್ನು ಒಗ್ಗೂಡಿಸಿ ‘ಕರ್ನಾಟಕ’ ರೂಪುಗೊಂಡಿತು. ಇದು ಕನ್ನಡಿಗರ ದೀರ್ಘ ಹೋರಾಟಕ್ಕೆ ಸಿಕ್ಕ ಫಲ.

ಭಾರತದ ಪ್ರಜಾಪ್ರಭುತ್ವಕ್ಕೆ ಕರ್ನಾಟಕವು ಮಾದರಿ. ಹನ್ನೆರಡನೇ ಶತಮಾನದಲ್ಲೇ ಇಲ್ಲಿ ಪ್ರಜಾತಂತ್ರದ ತದ್ರೂಪವಾದ ‘ಅನುಭವ ಮಂಟಪ’ ಇತ್ತು. ಸಮಾನತೆ, ಮಹಿಳಾ ಪ್ರಾತಿನಿಧ್ಯ ಮುಂತಾದ ಆಧುನಿಕೋತ್ತರ ಆಶಯಗಳನ್ನು ಆಗಲೇ ಅದು ಸಾಕಾರಗೊಳಿಸಿತ್ತು. ದೇಶದ ಕಲೆ-ಸಂಸ್ಕೃತಿಗೂ ಕರ್ನಾಟಕದ ಕೊಡುಗೆ ಅನನ್ಯ. ವಿಜಯನಗರ ಅರಸರ ಕಾಲದಲ್ಲಿ ಪ್ರಾರಂಭವಾಗಿ ಮೈಸೂರರಸರ ಆಶ್ರಯದಲ್ಲಿ ವಿಜೃಂಭಿಸಿ ಈಗಲೂ ಮುಂದುವರಿದಿರುವ ದಸರೆಯಂತೂ ವಿಶ್ವಪ್ರಸಿದ್ಧ. ಕನ್ನಡ ಸಾಹಿತ್ಯದಲ್ಲಿ ಪಂಪ, ರನ್ನ, ಕುಮಾರವ್ಯಾಸ, ಕುವೆಂಪು, ಶಿವರಾಮ ಕಾರಂತ ಮುಂತಾದವರ ಕೊಡುಗೆ ಶತಮಾನಗಳ ಕಾಲ ನಿಲ್ಲುವಂಥದ್ದು. ದೇಶದಲ್ಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆಯೂ ಕನ್ನಡ ಸಾಹಿತ್ಯಕ್ಕಿದೆ.

ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ನೂರಾರು ನಾಯಕರು ರಾಜ್ಯದ ಅಭಿವೃದ್ಧಿಗೆ ಕಾರಣರಾಗಿದ್ದಾರಲ್ಲದೆ ರಾಷ್ಟ್ರ ರಾಜಕಾರಣದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಕನ್ನಡನಾಡಿನ ಈವರೆಗಿನ ಸಾಧನೆಗಳೂ ಇಲ್ಲಿ ಸ್ಮರಣೀಯ. ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಸಿದ್ಧವಾಗಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಏರೋಸ್ಪೇಸ್ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಇಸ್ರೋ, ಇನ್ಪೋಸಿಸ್, ವಿಪ್ರೋ ಮುಂತಾದ ಸಂಸ್ಥೆಗಳು ಇಲ್ಲಿಂದಲೇ ಹೊರಹೊಮ್ಮಿವೆ. ಕೃಷಿ ಕ್ಷೇತ್ರದಲ್ಲಿ ಕಾಫಿ, ರೇಷ್ಮೆ, ಮೆಣಸಿನಕಾಯಿ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಐಐಎಸ್​ಸಿ, ಐಐಎಂ ಮುಂತಾದ ಸಂಸ್ಥೆಗಳು ಮೂಡಿಸಿರುವ ಹೆಜ್ಜೆಗುರುತುಗಳು ಗಮನಾರ್ಹ. ಆರೋಗ್ಯ ಕ್ಷೇತ್ರದಲ್ಲಿ ಹಲವು ಆಸ್ಪತ್ರೆಗಳು ವಿಶ್ವದರ್ಜೆಯ ಸೇವೆ ನೀಡುತ್ತಿವೆ.

ಆದರೆ ಇನ್ನೂ ಸಾಧಿಸಬೇಕಾದ ವಿಷಯಗಳು ಬಹಳಷ್ಟಿವೆ. ನಗರ-ಗ್ರಾಮೀಣ ಸಮಾನತೆ, ಸರ್ವರಿಗೂ ಶುದ್ಧನೀರು, ಉದ್ಯೋಗ ಸೃಷ್ಟಿ, ಪರಿಸರ ರಕ್ಷಣೆ ಮುಖ್ಯ ಸವಾಲುಗಳಾಗಿವೆ. ಸಂಚಾರ ದಟ್ಟಣೆ, ಜಲವಿವಾದ, ಗಡಿ ವಿವಾದದಂತಹ ಸಮಸ್ಯೆಗಳು ಬಗೆಹರಿಯಬೇಕಾಗಿದೆ. ನೆರೆ ರಾಜ್ಯಗಳೊಂದಿಗಿನ ಸಂಬಂಧಗಳು ಸೌಹಾರ್ದಯುತವಾಗಿದ್ದರೂ ಕೆಲವೆಡೆ ಕೆಲವೊಮ್ಮೆನೆಲಜಲದ ವಿವಾದ ಭುಗಿಲೆದ್ದು ತ್ವೇಷಮಯ ಪರಿಸ್ಥಿತಿಗೆ ಕಾರಣವಾಗುತ್ತದೆ. ಸೌಹಾರ್ದಯುತ ಚರ್ಚೆಯ ಮೂಲಕ ಇವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

ಕನ್ನಡ ಭಾಷೆಯ ಉಳಿವಿನ ವಿಷಯವಂತೂ ಈಗ ನಿರ್ಣಾಯಕ ಹಂತಕ್ಕೆ ಬಂದು ನಿಂತಂತಿದೆ. ಅನ್ಯಭಾಷೆಗಳ ಪ್ರಾಬಲ್ಯ ಬೆಳೆಯುತ್ತಿರುವುದರಿಂದ ಕನ್ನಡವನ್ನು ಶಾಲಾ ಹಂತದಲ್ಲಿ ಮತ್ತು ಆಡಳಿತದಲ್ಲಿ ಉಳಿಸುವ ದೊಡ್ಡ ಹೊಣೆಗಾರಿಕೆ ಸಮಕಾಲೀನ ಸಮಾಜದ ಮೇಲಿದೆ. ಡಿಜಿಟಲ್ ಯುಗದಲ್ಲಿ ಕನ್ನಡ ಸಾಫ್ಟ್​ವೇರ್​ಗಳು, ಆಪ್​ಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಕನ್ನಡ ರಾಜ್ಯೋತ್ಸವದಂತಹ ಸಂದರ್ಭಗಳು ಭಾಷೆಯ ಏಳಿಗೆಯ ಬಗ್ಗೆ ಪುನರ್ಮನನ ಮಾಡಿಕೊಳ್ಳಲು ಅವಕಾಶ ನೀಡುತ್ತವೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳೋಣ. ನಾಡು-ನುಡಿಯ ಸೇವೆಗೆ ಕಟಿಬದ್ಧರಾಗಿರೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net