ಮನುಷ್ಯನಿಗೆ ಸೇವಾ ಮನೋಭಾವ ಮುಖ್ಯ

rotary confirence
ಚಿಕ್ಕಮಗಳೂರಿನ ಎಐಟಿ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ರೋಟರಿ 3182 ಜಿಲ್ಲಾ ಸಮ್ಮೇಳನವನ್ನು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಉದ್ಘಾಟಿಸಿದರು. ಕಲ್ಯಾಣ ಬ್ಯಾನರ್ಜಿ, ಬಿ.ಸಿ.ಗೀತಾ, ದೇವಾನಂದ, ಡಿ.ಎಸ್.ರವಿ, ಬಿ.ಎಂ.ಭಟ್, ಗುರುಮೂರ್ತಿ ಇತರರಿದ್ದರು.
Published on

ಚಿಕ್ಕಮಗಳೂರು: ಯಾವುದೇ ಸಂಘ ಸಂಸ್ಥೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದರೆ ಬಹುಕಾಲ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಜಾತಿ, ಧರ್ಮ, ರಾಜಕೀಯ ಎಲ್ಲವನ್ನೂ ಬಿಟ್ಟು ಸೇವೆಗೆ ಹೊರಟಾಗ ಅದಕ್ಕೊಂದು ನೆಲೆ ಬೆಲೆ ಸಿಗುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ನಗರದ ಎಐಟಿ ಬಯಲು ರಂಗಮಂದಿರದಲ್ಲಿ ಶನಿವಾರ ಬಾಳೆಹೊನ್ನೂರು, ಚಿಕ್ಕಮಗಳೂರು ಮತ್ತು ರೋಟರಿ ಕಾಫಿಲ್ಯಾಂಡ್ ಆಶ್ರಯದಲ್ಲಿ ಆಯೋಜಿಸಿದ್ದ ಮೂರು ದಿನಗಳ ರೋಟರಿ 3182 ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಅವಶ್ಯವಿರುವವರಿಗೆ ನಮ್ಮ ಸಂಸ್ಥೆ ಅಗತ್ಯ ಸೇವೆ ಒದಗಿಸುತ್ತಿದೆ ಎಂದರು.
ಅಂತಾರಾಷ್ಟ್ರೀಯ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕಲ್ಕತ್ತಾದ ಕಲ್ಯಾಣ ಬ್ಯಾನರ್ಜಿ ಮಾತನಾಡಿ, ಪೌಲ್‌ಹ್ಯಾರೀಸ್ ಸ್ನೇಹಕ್ಕಾಗಿ ಆರಂಭಿಸಿದ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದೆ. ವಿಭಿನ್ನ ವೃತ್ತಿ ಮತ್ತು ಸ್ವಭಾವದ ಒಳ್ಳೆಯ ಸ್ನೇಹಿತರು ಒಟ್ಟಾಗಿ ಕಲಿತು ಒಂದಷ್ಟು ಸೇವಾ ಕಾರ್ಯ ಮನುಕುಲಕ್ಕೆ ಸಲ್ಲಿಸುವ ಅಪೂರ್ವ ವೇದಿಕೆಯೆ ರೋಟರಿ ಎಂದು ಹೇಳಿದರು.
ಸಂತೋಷ, ಸೇವೆ, ಕಠಿಣ ಪರಿಶ್ರಮ, ಒಳ್ಳೆಯ ಜೀವನ ನಮ್ಮದಾಗಬೇಕು. ಪೋಲಿಯೋನಂತಹ ಮಾರಿಯನ್ನು ಹೊರಗಟ್ಟುವಲ್ಲಿ ರೋಟರಿಯ ನೆರವು ಮರೆಯಲಾಗದು. ಭೂಕಂಪ, ಪ್ರವಾಹ ಸೇರಿದಂತೆ ಜನಸಮುದಾಯ ಸಂಕಷ್ಟದ ಸಂದರ್ಭಗಳಲ್ಲಿ ರೋಟರಿಯ ನೆರವು ಹಿರಿದು ಎಂದರು.
ರೋಟರಿ ಅಂತಾರಾಷ್ಟ್ರೀಯ ಅಧ್ಯಕ್ಷರ ಸಮ್ಮೇಳನ ಪ್ರತಿನಿಧಿ ಗುಜರಾತಿನ ಸಂತೋಷ್ ಪ್ರಧಾನ್ ಮಾತನಾಡಿ, ವಿಶ್ವದ 200ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಿಸಿರುವ ರೋಟರಿ ಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿದೆ. ರೋಟರಿ ಫೌೌಂಡೇಷನ್ ವಿಶ್ವದ ಅತಿದೊಡ್ಡ ನೆರವು ಸಂಸ್ಥೆಯಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ರೋಟರಿ ಜಿಲ್ಲಾ ರಾಜ್ಯಪಾಲೆ ಬಿ.ಸಿ.ಗೀತಾ ಮಾತನಾಡಿ, ಚಿಕ್ಕಮಗಳೂರಿನಲ್ಲಿ ಪ್ರಥಮ ಬಾರಿಗೆ ರೋಟರಿ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ದಾಖಲೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಚುನಾಯಿತ ಜಿಲ್ಲಾ ಗವರ್ನರ್ ದೇವಾನಂದ, ಡಿಜಿಎನ್ ಪ್ರತಿನಿಧಿ ಕೆ.ಪಾಲಾಕ್ಷ, ಜಿಲ್ಲಾ ಕೌನ್ಸಿಲರ್ ಡಿ.ಎಸ್.ರವಿ, ಬಿ.ಎಂ.ಭಟ್, ಕಾರ್ಯದರ್ಶಿ ಗುರುಮೂರ್ತಿ, ಬಾಳೆಹೊನ್ನೂರು ರೋಟರಿ ಅಧ್ಯಕ್ಷ ಎ.ಆರ್.ಸುರೇಂದ್ರ, ಚಿಕ್ಕಮಗಳೂರು ರೋಟರಿ ಅಧ್ಯಕ್ಷ ಶ್ರೀವತ್ಸ ನಟರಾಜ್, ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ತನೂಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net