ಸಮಾಜದಲ್ಲಿ ಸೇವಾ ಮನೋಭಾವ ಹೊಂದಿರುವ ವೈದ್ಯರುಗಳ ಸೇವೆ ಅಗತ್ಯ: ಸಚಿವ ದಿನೇಶ್ ಗುಂಡೂರಾವ್.

dhee hospital
Published on

ಬೆಂಗಳೂರು: ಆರೋಗ್ಯ ಕ್ಷೇತ್ರ ವ್ಯಾಪಾರೀಕರಣವಾಗುತ್ತಿರುವ ಈ ಸಂಧರ್ಭದಲ್ಲಿ ಸಮಾಜದಲ್ಲಿ ವೆಲ್‌ನೆಸ್ ಹೆಚ್ಚಿಸಲು ಸೇವಾ ಮನೋಭಾವ ಹೊಂದಿರುವ ವೈದ್ಯರುಗಳ ಸೇವೆ ಅಗತ್ಯ ಹೆಚ್ಚಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕನಕಪುರ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ‘ ಢೀ ’ ಸುಪರ್‌ಸ್ಪೇಷಾಲಿಟಿ ಆಸ್ಪತ್ರೆಯ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಆರೋಗ್ಯ ಕ್ಷೇತ್ರದಲ್ಲಿ ಸೇವಾ ಮನೋಭಾವನೆ ಬಹಳ ಮುಖ್ಯ. ನಮ್ಮಲ್ಲಿ ಜಯದೇವ, ಕಿದ್ವಾಯಿಯಂತಹ ಅತ್ಯುತ್ತಮ ಆಸ್ಪತ್ರೆಗಳಿವೆ. ಆರೋಗ್ಯ ರಕ್ಷಣೆಯಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚಿದ್ದು, ಆರೋಗ್ಯವಂತ ಸಮಾಜ ನಿರ್ಮಿಸುವುದು ನಮ್ಮ ಗುರಿಯಾಗಿದೆ. ಇದು ಕೇವಲ ಸರ್ಕಾರದಿಂದ ಮಾತ್ರ ಸಾಧಿಸಲು ಸಾಧ್ಯವಿಲ್ಲ. ಇದಕ್ಕೆ ಸೇವಾ ಮನೋಭಾವ ಹೊಂದಿರುವಂತಹ ‘ಧೀ ’ಯಂತಹ ಖಾಸಗಿ ಆಸ್ಪತ್ರೆಗಳ ಪಾತ್ರವೂ ಪ್ರಮುಖವಾಗಿದೆ ಎಂದು ಹೇಳಿದರು.

ರೋಗ ಉಪಚರಕ್ಕು ಮುನ್ನ ರೋಗ ಬರದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಆದ್ಯತೆಯಾಗಿದೆ. ರೋಟರಿ, ವ್ಯಾಸ ಹೀಗೆ ಹಲವರು ಸ್ವಯಂ ಸೇವಾ ಸಂಸ್ಥೆಗಳ ಜೊತೆಗೂಡಿ ಸಮಾಜದ ಅಶಕ್ತ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಜನರ ಆರೋಗ್ಯ ಕಾಪಾಡಲು ಮುಂದಾಗಿರುವುದು ಸಂತಸದ ವಿಷಯವಾಗಿದ್ದು, ಡಾ. ಚಂದ್ರಶೇಖರ್ ಮುನಿಯಪ್ಪ ಅವರ ಕಾರ್ಯ ಶ್ಲಾಘನೀಯ ಎಂದ ಅವರು ಆರೋಗ್ಯ ಕ್ಷೇತ್ರ ವಾಣೀಜ್ಯೀಕರಣವಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಸೇವೆಯ ಮನೋಭಾವನೆ ಹಾಗೂ ಕೈಗೆಟಕುವ ದರದಲ್ಲಿ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ವೈದ್ಯರೇ ಸ್ಥಾಪಿಸಿದ ಆಸ್ಪತ್ರೆಗಳ ಅಗತ್ಯತೆ ಹೆಚ್ಚಾಗಿದೆ. ಸೇವಾ ಮನೋಭಾವನೆ ಇಲ್ಲದೇ ಇದ್ದಲ್ಲಿ ಉತ್ತಮ ವೈದ್ಯರು ಆಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹೃದಯಜ್ಯೋತಿ ಯೋಜನೆಯಿಂದಾಗಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದು ಪ್ರಾಣ ಉಳಿಸಿಕೊಳ್ಳುತ್ತಿದ್ದಾರೆ. ಇದುವರೆಗೂ ಸುಮಾರು 20 ಕ್ಕೂ ಹೆಚ್ಚು ಜನರು ಪ್ರಾಣಾಪಾಯದಿಂದ ಪಾರಾಗಿದ್ದು, ಈ ಯೋಜನೆಯನ್ನು ರಾಜ್ಯದ ಎಲ್ಲಾ ತಾಲ್ಲೂಕುಗಳಿಗೂ ವಿಸ್ತರಿಸಲಿದ್ದೇವೆ ಎಂದು ತಿಳಿಸಿದರು.

ರವಿಶಂಕರ್ ಗುರೂಜಿ ಮಾತನಾಡಿ , ಆರೋಗ್ಯವಂತ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಉತ್ತಮ ಶಿಕ್ಷಣ ಇದ್ದರೆ ಆರೋಗ್ಯ, ದೇಶದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಮನಸ್ಸು, ದೇಹ, ಶರೀರ, ಜೀವನ ಶೈಲಿ, ನಡೆ, ನುಡಿಯಿಂದ ಆರೋಗ್ಯ ಕಾಪಾಡಿಕೊಳ್ಳಬೇಕು. ಮುನ್ನೆಚ್ಚರಿಕೆ ತೆಗೆದುಕೊಂಡರೆ ರೋಗ ತಡೆಗಟ್ಟಬಹುದು. ದೇವರನ್ನು ನೋಡಲು ದೇವಸ್ಥಾನಕ್ಕೆ ಹೋಗಬೇಕಾಗಿಲ್ಲ. ಆಸ್ಪತ್ರೆಯಲ್ಲಿರುವ ವೈದ್ಯರು ನಿಜವಾದ ದೇವರು. ಸೇವಾ ಮನೋಭಾವದಿಂದ ಎಲ್ಲರಿಗೂ ಉತ್ತಮ ಚಿಕಿತ್ಸೆಯನ್ನು ಕಡಿಮೆ ದರದಲ್ಲಿ ಒದಗಿಸುವ ಗುರಿಯನ್ನು ಇಟ್ಟುಕೊಂಡು ಪ್ರಾರಂಭವಾಗಿರುವ ಈ ಆಸ್ಪತ್ರೆಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಆಸ್ಪತ್ರೆಯ ಸಿಇಒ ಡಾ. ಚಂದ್ರಶೇಖರ್ ಚಿಕ್ಕಮುನಿಯಪ್ಪ ಮಾತನಾಡಿ , ಸಮಾಜದ ಆರೋಗ್ಯಕ್ಕಾಗಿ ವೈದ್ಯರು ದೊಡ್ಡ ಪಾತ್ರ ನಿರ್ವಹಿಸಲಿದ್ದಾರೆ. ಜನರ ರಕ್ಷಣೆಗೆ ವೈದ್ಯಕೀಯ ಸಮೂಹ ನಿರಂತರವಾಗಿ ಶ್ರಮಿಸುತ್ತಿದೆ. ಆರೋಗ್ಯ ರಕ್ಷಣೆಗೆ ಸರ್ಕಾರದ ಜೊತೆ ಖಾಸಗಿ ವಲಯದ ಪಾತ್ರ ಮಹತ್ವದ್ದಾಗಿದೆ. ಸಮಾನ ಮನಸ್ಕ ವೈದ್ಯರು ಜೊತೆಗೂಡಿ ಈ ಆಸ್ಪತ್ರೆಯನ್ನು ಪ್ರಾರಂಭಿಸಿದ್ದೇವೆ. ರೋಗಿಗಳಿಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಸೇವೆಯನ್ನು ನೀಡುವುದು ನಮ್ಮ ಗುರಿಯಾಗಿದೆ. ರೋಟರಿ ಸಂಸ್ಥೆ, ವ್ಯಾಸ ಸಂಸ್ಥೆಯ ಜೊತೆಗೂಡಿ ಈಗಾಗಲೇ ಹಲವಾರು ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇವೆ ಎಂದರು ಶಿಕ್ಷಣ ತಜ್ಞ ಡಾ. ಗುರುರಾಜ್ ಕರಜಗಿ, ರೋಟರಿ ಫೌಂಡೇಶನ್ ನ ಏಷ್ಯಾದ ರಾಯಭಾರಿ ಹಾಗೂ ಮಹಾದಾನಿ ರವಿಶಂಕರ್ ದಕೋಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net