

ತುಮಕೂರು: ಸೇವೆ ಕಾಯಂಗೆ ಒತ್ತಾಯಿಸಿ ರಾಜ್ಯ ಮುನಿಸಿಪಲ್ ಕಾರ್ಮಿಕ ಸಂಘದ(ಸಿಐಟಿಯು) ನೇತೃತ್ವದಲ್ಲಿ ರಾಜ್ಯದೆಲ್ಲೆಡೆ ಪ್ರತಿಭಟನೆ ಆರಂಭವಾಗಿದ್ದು, ಇದರ ಎಫೆಕ್ಟ್ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೂ ತಟ್ಟಿದೆ.
ತುಮಕೂರು ಮಹಾನಗರ ಪಾಲಿಕೆ ಮುಂಭಾಗ ಗುತ್ತಿಗೆ, ಹೊರಗುತ್ತಿಗೆ, ಮುನಿಸಿಪಲ್ ಕಾರ್ಮಿಕರು ಸೋಮವಾರದಿಂದ ಪ್ರತಿಭಟನೆ ಆರಂಭಿಸಿದ್ದು, ನಗರದಲ್ಲಿ ಕಸ ವಿಲೇವಾರಿ, ಕುಡಿಯುವ ನೀರು ಸೇರಿ ಇನ್ನಿತರ ಸಮಸ್ಯೆಗಳು ಎದುರಾಗತೊಡಗಿವೆ.
ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಸಮಾನ ಕೆಲಸ ಹಾಗೂ ಸಮಾನ ವೇತನಕ್ಕೆ ಎಲ್ಲ ಕಾಯಂಮೇತರ ಮುನಿಸಿಪಲ್ ಕಾರ್ಮಿಕರು ಕಾನೂನು ಬದ್ಧವಾಗಿ ಅರ್ಹರಿದ್ದಾರೆ. ಆದರೆ ಸರ್ಕಾರ 18 ವರ್ಷಗಳಿಂದ ಬರಿ ಕನಿಷ್ಠ ವೇತನದಲ್ಲಿ ದುಡಿಸಿ ಅನ್ಯಾಯ ಮಾಡಿದೆ ಎಂದರು.
ನೀರು ಸರಬರಾಜು ನೌಕರರ ಸಮಾನ ವೇತನ ಕಡತ 8 ತಿಂಗಳಿಂದ ಧೂಳು ಹಿಡಿಯುತ್ತಿದೆ. ಹಾಗಾಗಿ, ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆಗೆ ಮುಂದಾಗಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ವಾಹನ ಚಾಲಕ ಘಟಕ, ತುಮಕೂರು ನೀರು ಸರಬರಾಜು ನೌಕರರ ಸಂಘ, ಕಸದ ವಾಹನ ಚಾಲಕರು ಮತ್ತು ಸಹಾಕರು, ಲೋಡರ್. ಕ್ಲಿನರ್‌ಗಳ ಸಂಘದವರು ಜಂಟಿಯಾಗಿ ನೀರು ಮತ್ತು ಸ್ವಚ್ಛತೆಯ ಕೆಲಸ ನಿಲ್ಲಿಸಿ ಮಹಾನಗರ ಪಾಲಿಕೆ ಎದುರು ಧರಣಿ ಅರಂಭಿಸಿದ್ದೇವೆ ಎಂದರು.
ಮೇಯರ್ ಪ್ರಭಾವತಿ ಮಾತನಾಡಿ, ಪಾಲಿಕೆ ಹಂತದಲ್ಲಿ ಈಡೇರಿಸಲು ಸಾಧ್ಯವಿರುವ ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಮುಂದಿನ ಮೂರು ದಿನದಲ್ಲಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದ ನಂತರಪ್ರತಿಭಟನೆ ಕೈಬಿಡಲಾಯಿತು.
ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಕುಮಾರ್, ಖಜಾಂಚಿ ಚಂದ್ರಪ್ಪ, ಕಾರ್ಯದರ್ಶಿ ಮಂಜುನಾಥ್ , ಕಸದ ವಾಹನ ಚಾಲಕರು ಸಹಾಕರ ಸಂಘದ ಮಂಜುನಾಥ್, ಅಂಜನಮೂರ್ತಿ,ಶ್ರೀನಿವಾಸ್ ಮೂರ್ತಿ, ಮಾರುತಿ, ವಾಹನ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ನಾಗರಾಜು, ಮಹಮದ್ ಅಜಿಮ್ ಇದ್ದರು.
ಪಾಲಿಕೆಗೆ ರಾಜ್ಯಮಟ್ಟದ ಪ್ರಶಸ್ತಿ: ತುಮಕೂರು: ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ)ದಡಿ ನಗರದ ಬೀದಿ ಬದಿ ವ್ಯಾಪಾರಸ್ಥರ ಕಲ್ಯಾಣಕ್ಕೆ ಟೊಂಕಕಟ್ಟಿ ನಿಂತಿದ್ದ ತುಮಕೂರು ಮಹಾನಗರ ಪಾಲಿಕೆಯು 2022-2023ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಸ್ತಿಯು 1.25 ಲಕ್ಷ ರೂ.,ನಗದು, ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಫಲಕವನ್ನು ಒಳಗೊಂಡಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಮಾ.8 ರಂದು ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ದಿನಾಚರಣೆ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.