ಸಂಪಾದಕೀಯ | ಸೇವಾದಕ್ಷತೆಯೂ ಹೆಚ್ಚಲಿ

ವಿಜಯವಾಣಿ (2)
Published on

ಕೇಂದ್ರ ಸರ್ಕಾರಿ ನೌಕರರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಕೇಂದ್ರ ಮುಂಗಡಪತ್ರ ಮಂಡನೆಗೆ (ಫೆಬ್ರವರಿ 1) ಕೆಲ ದಿನಗಳ ಮುಂಚೆ 8ನೇ ವೇತನ ಆಯೋಗದ ರಚನೆಯ ನಿರ್ಧಾರ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯು 8ನೇ ವೇತನ ಆಯೋಗ ರಚಿಸಲು ಸಮ್ಮತಿಸಿದೆ. 2026ರ ಜನವರಿ 1ರಿಂದ ಇದು ಅನ್ವಯವಾಗಲಿದ್ದು, ಒಂದು ಕೋಟಿಗೂ ಅಧಿಕ ಕೇಂದ್ರ ನೌಕರರು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದೆ. 8ನೇ ವೇತನ ಆಯೋಗದ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಶೀಘ್ರವೇ ನೇಮಕ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ಏಳು ಕೇಂದ್ರೀಯ ವೇತನ ಆಯೋಗಗಳು ರಚನೆಯಾಗಿವೆ. ಸಾಮಾನ್ಯವಾಗಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಈ ಪ್ರಕ್ರಿಯೆ ನಡೆಯುತ್ತದೆ. ಈ ಹಿಂದೆ 2016ರಲ್ಲಿ ರಚನೆಯಾಗಿತ್ತು. ವೇತನ ಹೆಚ್ಚಳದಿಂದಾಗಿ ಕೊಳ್ಳುವ ಶಕ್ತಿ ಮತ್ತು ಆರ್ಥಿಕತೆಯ ಬೆಳವಣಿಗೆ ಸುಧಾರಿಸಲಿದೆ. ಸರ್ಕಾರಿ ನೌಕರರ ಜೀವನದ ಗುಣಮಟ್ಟ ಕೂಡ ಹೆಚ್ಚಲಿದೆ ಎಂಬ ನಿರೀಕ್ಷೆ ತಜ್ಞರದ್ದು. ಹೆಚ್ಚುತ್ತಿರುವ ಬೆಲೆಯೇರಿಕೆ ಸಮಸ್ಯೆಯ ವಿರುದ್ಧ ಹೋರಾಡಲು ಶ್ರೀಸಾಮಾನ್ಯರ ಬಳಿ ಇತರ ಯಾವುದೇ ಅಸ್ತ್ರಗಳಿಲ್ಲ. ಹೀಗಾಗಿ, ಸಂಬಳ ಹೆಚ್ಚಳಕ್ಕಾಗಿ, ಆ ಮೂಲಕ ಖರ್ಚುಗಳನ್ನು ನಿಭಾಯಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ.

ಕಾಲಮಾನಕ್ಕೆ ತಕ್ಕಂತೆ ಸಂಬಳ, ಭತ್ಯೆಗಳು ಪರಿಷ್ಕರಣೆ ಆಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದ ಸರ್ಕಾರಿ ನೌಕರರು ಮತ್ತು ಅವರನ್ನು ಅವಲಂಬಿಸಿರುವವರ ಆರ್ಥಿಕ ಪರಿಸ್ಥಿತಿ ಕೊಂಚ ಸುಧಾರಿಸುತ್ತದೆ. ಆದರೆ, ಸಂಬಳ, ಸೌಲಭ್ಯದ ಹೆಚ್ಚಳದ ಜತೆಗೆ ಕಾರ್ಯದಕ್ಷತೆಯೂ ಹೆಚ್ಚಬೇಕು. ಸುಶಾಸನದ ಬಗ್ಗೆ ಎಷ್ಟೇ ಮಾತನಾಡಿದರೂ, ಪ್ರಧಾನಿ ನರೇಂದ್ರ ಮೋದಿಯವರೇ ಈ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದರೂ, ಪರಿಸ್ಥಿತಿಯಲ್ಲಿ ಬಹಳವೇನೂ ಸುಧಾರಣೆಯಾಗಿಲ್ಲ. ಸರ್ಕಾರಿ ಕಚೇರಿಗಳೆಂದರೆ ಜಡತ್ವ, ವಿಳಂಬದ ಕೇಂದ್ರಗಳಂತೆ ಆಗುತ್ತಿರುವುದು ಸರಿಯಾದ ಬೆಳವಣಿಗೆಯಂತೂ ಅಲ್ಲ. ಹಾಗಾಗಿಯೇ, ಜನಸಾಮಾನ್ಯರು ಸರ್ಕಾರಿ ಕಚೇರಿಗಳಿಗೆ ತೆರಳಲು ಹಿಂದೇಟು ಹಾಕುವಂಥ ಪರಿಸ್ಥಿತಿ ಇದೆ. ಹಲವು ಬಾರಿ ಎಡತಾಕಿದರೂ ಕೆಲಸ ಆಗುವುದಿಲ್ಲ ಎಂಬ ದೂರನ್ನು ಸಂಬಂಧಿತ ವ್ಯವಸ್ಥೆ ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಈಗ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ತಂತ್ರಜ್ಞಾನದ ನೆರವು ಪಡೆಯಲಾಗಿದೆ. ಆದರೂ, ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಕಾರಣ ಸಿಬ್ಬಂದಿಯಲ್ಲಿನ ಇಚ್ಛಾಶಕ್ತಿ ಕೊರತೆ. ಯಾವುದೇ ಕಾರಣ ಸಿಗದಿದ್ದಾಗ ‘ಸರ್ವರ್ ಸರಿ ಇಲ್ಲ, ಮತ್ತೆ ಬನ್ನಿ’ ಎಂಬ ಸಿದ್ಧ ಉತ್ತರ ಸರ್ಕಾರಿ ಕಚೇರಿಗಳಲ್ಲಿ ದೊರೆಯುತ್ತದೆ. ಕೆಲವು ಕಡೆ ಲಂಚದ ಹಾವಳಿಯೂ ಇದೆ ಎಂಬ ಆರೋಪ ಜನಸಾಮಾನ್ಯರದ್ದು. ಹೀಗಾಗಿ, ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು, ದಕ್ಷತೆ ಹೆಚ್ಚಿಸಲು, ಜನಸ್ನೇಹಿ ಕಾರ್ಯಶೈಲಿ ಅಳವಡಿಸಿಕೊಳ್ಳಲು ಇದು ಸಕಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net