ಸಂಬಳಕ್ಕೆ ನಡೆದ ವಾಗ್ವಾದ; ಮಾಲೀಕನ ಕತ್ತು ಸೀಳಿ ಕೊಲೆಗೈದ ಸೇವಕ

murder1
Published on

ನವದೆಹಲಿ: ಕೋವಿಡ್ ನಿಂದಾಗಿ ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದ ಕಾರಣ ಸಂಬಳದ ವಿಚಾರದಲ್ಲಿ ಡೈರಿ ಮಾಲೀಕ ಮತ್ತು ಉದ್ಯೋಗಿ ನಡುವೆ ವಾಗ್ವಾದ ನಡೆದು ಉದ್ಯೋಗಿ ಮಾಲೀಕನನ್ನು ಹತ್ಯೆ ಗೈದ ಘಟನೆ ನಡೆದಿದೆ.

ಆರೋಪಿಯನ್ನು ತಸ್ಲೀಮ್ (21) ಎಂದು ಹಾಗೂ ಕೊಲೆಯಾದ ವ್ಯಕ್ತಿಯನ್ನು ಡೈರಿ ಮಾಲೀಕ ಓಂ ಪ್ರಕಾಶ್ (45) ಎಂದು ಗುರುತಿಸಲಾಗಿದೆ.

ಕರೊನಾವೈರಸ್​​ನಿಂದಾಗಿ ವ್ಯವಹಾರ ನಷ್ಟ ಅನುಭವಿಸಿದ ಡೈರಿ ಮಾಲೀಕ ಓಂ ಪ್ರಕಾಶ್ ಮತ್ತು ಆತನ ಬಳಿ ಕೆಲಸ ಮಾಡುತ್ತಿದ್ದ ತಸ್ಲೀಮ್​​​ ಇವರಿಬ್ಬರ ಮಧ್ಯೆ ಸಂಬಳ ಕಡಿತ ವಿಚಾರವಾಗಿ ವಾಗ್ವಾದ ನಡೆದಿತ್ತು.

ಕಡಿಮೆ ಸಂಬಳಕ್ಕೆ ಕೆಲಸ ಮಾಡುವಂತೆ ಓಂ ಪ್ರಕಾಶ್ ತಸ್ಲೀಮ್​ಗೆ ಕೇಳಿಕೊಂಡಿದ್ದ. ಇದು ವಾಗ್ವಾದಕ್ಕೆ ಕಾರಣವಾಗಿತ್ತು. ಮಾತಿನ ಮಧ್ಯೆ ಓಂ ಪ್ರಕಾಶ್ ತಸ್ಲೀಮ್​​ಗೆ ಕಪಾಳಕ್ಕೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ತಸ್ಲೀಮ್ ಆತ ನಿದ್ರೆಗೆ ಜಾರಿದಾಗ ಕಟ್ಟಿಗೆಯಿಂದ ತಲೆಗೆ ಹೊಡೆದು, ಆತನ ಕತ್ತನ್ನು ಚಾಕುವಿನಿಂತ ಸೀಳಿ, ಶವವನ್ನು ಗೋಣಿ ಚೀಲದಲ್ಲಿ ತುಂಬಿ ಸಮೀಪದ ಬಾವಿಯಲ್ಲಿ ಎಸೆದಿದ್ದಾನೆ.

ತಸ್ಲೀಮ್ ಉತ್ತರ ಪ್ರದೇಶದ ಶಾಮ್ಲಿ ನಿವಾಸಿ. ಆತ ಮೊದಲು ಬಹಾದೂರ್​ಗಢದ ಹೊಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ. ಸಂಬಂಧಿಕನೊಬ್ಬನಿಂದ ಜೂನ್​​ನಲ್ಲಿ ಓಂ ಪ್ರಕಾಶ್​​ಗೆ ಪರಿಚಯವಾದ.

ಡೈರಿಯಲ್ಲಿ ಸರ್ವಂಟ್ ಆಗಿ ಕೆಲಸ ಆರಂಭಿಸಿದ ತಸ್ಲೀಮ್​​ಗೆ ಮಾಸಿಕ 15,000 ರೂ. ಮಾಸಿಕ ವೇತನ ನಿಗದಿಪಡಿಸಲಾಗಿತ್ತು.

ಮೃತ ಓಂ ಪ್ರಕಾಶ್​​ನ ಸಹೋದರ ಸಂಬಂಧಿ ಆಗಸ್ಟ್ 12 ರಂದು ವ್ಯಕ್ತಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು.

ವರದಿಯಲ್ಲಿ ತನ್ನ ಚಿಕ್ಕಪ್ಪ ಆಗಸ್ಟ್ 10 ಮತ್ತು 11 ರ ಮಧ್ಯರಾತ್ರಿಯಿಂದ ಕಾಣೆಯಾಗಿದ್ದು, ಕೊನೆಯದಾಗಿ ಆತ ಕೆಲಸದಾಳಿನೊಂದಿಗೆ ಕಾಣಿಸಿಕೊಂಡಿದ್ದ ಎಂದು ವರದಿಯಲ್ಲಿ ತಿಳಿಸಿದ್ದರು.

ಕೆಲವು ದಿನಗಳ ನಂತರ, ಬಾವಿಯಿಂದ ಕೊಳೆತ ಶವವನ್ನು ಹೊರತೆಗೆಯಲಾಯಿತು. ನಂತರ ಬಾಬಾ ಹರಿದಾಸ್ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದಾಗ, ಆರೋಪಿ ನಾಪತ್ತೆಯಾಗಿದ್ದು, ಸಂತ್ರಸ್ತನ ಮೋಟಾರ್ ಸೈಕಲ್ ಮತ್ತು ಮೊಬೈಲ್ ಅನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾನೆ ಎಂದು ತಿಳಿದುಬಂದಿತು.  ಹರಿಯಾಣದ ಶಾಮ್ಲಿ, ಪಾಣಿಪತ್ ಮತ್ತು ಇತರ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದ್ದರೂ ತಸ್ಲೀಮ್ ಪತ್ತೆಯಾಗಿರಲಿಲ್ಲ.

ಝರೋದಾ ಕಲನ್ ಪ್ರದೇಶದಲ್ಲಿ ತಸ್ಲೀಮ್ ಕಾಣಿಸಿಕೊಂಡಿದ್ದಾನೆ ಎಂಬ ಮಾಹಿತಿಯಾಧಾರದ ಮೇಲೆ ಪೊಲೀಸರು ಭಾನುವಾರ ಆತನನ್ನು ಬಂಧಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ದ್ವಾರಕಾ) ಆಂಟೊ ಅಲ್ಫೋನ್ಸ್ ಹೇಳಿದ್ದಾರೆ.

ವಿಚಾರಣೆ ವೇಳೆ ತಸ್ಲೀಮ್ ಸಂಬಳದ ವಿಚಾರದಲ್ಲಿ ಪ್ರಕಾಶ್‌ನನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ತನ್ನ ಸಂಬಳವನ್ನು ತಿಂಗಳಿಗೆ 15 ಸಾವಿರ ರೂ ಎಂದು ನಿಗದಿಪಡಿಸಲಾಗಿತ್ತು ಆದರೆ ಲಾಕ್‌ಡೌನ್‌ನಿಂದಾಗಿ ವ್ಯವಹಾರ ಕುಸಿದಿದ್ದರಿಂದ, ಕಡಿಮೆ ಸಂಬಳದಲ್ಲಿ ಕೆಲಸ ಮಾಡಲು ಪ್ರಕಾಶ್ ಕೇಳಿಕೊಂಡಿದ್ದ, ಇದು ವಾದಕ್ಕೆ ಕಾರಣವಾಯಿತು. ಆಗ ಪ್ರಕಾಶ್ ಆತನಿಗೆ ಕಪಾಳಮೋಕ್ಷ ಮಾಡಿದ್ದ,

ಪ್ರಕಾಶ್ ನಿದ್ರೆಗೆ ಜಾರಿದ ನಂತರ ಕೋಲಿನಿಂದ ಆತನ ತಲೆಗೆ ಹೊಡೆದು ಕುತ್ತಿಗೆಯನ್ನು ಚಾಕುವಿನಿಂದ ಕತ್ತರಿಸಿ ದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ಹತ್ತಿರದ ಬಾವಿಯಲ್ಲಿ ಎಸೆದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಅಪರಾಧದಲ್ಲಿ ಬಳಸಿದ ಚಾಕು, ಎರಡು ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net