

ನವದೆಹಲಿ: ದೇಶಿಯವಾಗಿ ನ್ಯೂಮೋನಿಯಾ ರೋಗನಿರೋಧಕ ಚುಚ್ಚುಮದ್ದನ್ನು ಹೊಂದುವಲ್ಲಿ ಭಾರತ ಕೊನೆಗೂ ಯಶಸ್ವಿಯಾಗಿದೆ. ಇದರಿಂದಾಗಿ ದೇಶಕ್ಕೆ ಭಾರಿ ಪ್ರಮಾಣದ ವಿದೇಶಿ ವಿನಿಮಯದ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.
ಭಾರತದ ಲಸಿಕೆ ಕಾರ್ಯಕ್ರಮದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ನ್ಯುಮೋನಿಯಾ ಲಸಿಕೆ ಕೊಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಭಾರತ ಭಾರಿ ಪ್ರಮಾಣದಲ್ಲಿ ನ್ಯೂಮೋನಿಯಾ ಲಸಿಕೆಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ದೇಶದಲ್ಲೇ ಈ ಲಸಿಕೆ ಸಿದ್ಧವಾಗಲಿರುವ ಕಾರಣ ಅದರ ಆಮದು ಪ್ರಮಾಣ ಗಣನೀಯವಾಗಿ ತಗ್ಗಲಿದ್ದು, ವಿದೇಶಿ ವಿನಿಮಯದ ಉಳಿತಾಯವೂ ಆಗಲಿದೆ ಎಂದು ಹೇಳಲಾಗಿದೆ.
ಸೆರಂ ಇನ್ಸ್ಟಿಟ್ಯೂಟ್ನಲ್ಲಿ ತಯಾರಿಕೆ: ಪುಣೆ ಮೂಲದ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನ್ಯೂಮೋನಿಯಾ ಲಸಿಕೆಯನ್ನು ಸಿದ್ಧಪಡಿಸಿದೆ. ನ್ಯೂಮೋಕೋಕಲ್ ಪಾಲಿಸ್ಯಾಕ್ರೈಡ್ ಕಾಂಜುಗೇಟ್ ವ್ಯಾಕ್ಸಿನ್ ಅನ್ನು ವಾಣಿಜ್ಯಾತ್ಮಕವಾಗಿ ಉತ್ಪಾದಿಸಲು ಭಾರತೀಯ ಔಷಧ ನಿಯಂತ್ರಣ ಮಹಾಪ್ರಧಾನ ನಿಯಂತ್ರಕರು ಸೆರಂ ಇನ್ಸ್ಟಿಟ್ಯೂಟ್ಗೆ ಅನುಮತಿ ನೀಡಿದ್ದಾರೆ. ಹೀಗಾಗಿ ಈ ಚುಚ್ಚುಮದ್ದು ಈಗ ಭಾರತೀಯ ಲಸಿಕೆ ಕಾರ್ಯಕ್ರಮಕ್ಕೆ ಸೇರ್ಪಡೆಗೊಳ್ಳಲಿದೆ.
ಸ್ಟ್ರಪ್ಟಾಕೋಕಸ್ ನ್ಯೂಮೋನಿಯಾ ವೈರಾಣುವಿನಿಂದಾಗಿ 5 ವರ್ಷದೊಳಗಿನ ಮಕ್ಕಳಲ್ಲಿ ನ್ಯೂಮೋನಿಯಾ ಉಂಟಾಗುತ್ತಿತ್ತು. ಇದರಿಂದಾಗಿ ರಾಷ್ಟ್ರದಲ್ಲಿ ಶಿಶುಮರಣ ಪ್ರಮಾಣ ಹೆಚ್ಚಾಗುತ್ತಿತ್ತು. ಇದನ್ನು ತಡೆಗಟ್ಟಿ, ಮಕ್ಕಳಲ್ಲಿ ನ್ಯೂಮೋನಿಯಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನ್ಯೂಮೋಕೋಕಲ್ ಪಾಲಿಸ್ಯಾಕ್ರೈಡ್ ಕಾಂಜುಗೇಟ್ ವ್ಯಾಕ್ಸಿನ್ ತುಂಬಾ ಪರಿಣಾಮಕಾರಿಯಾಗಿದೆ.
ದೇಶಿಯವಾಗಿ ಅಭಿವೃದ್ಧಿಪಡಿಸಿದ ನ್ಯೂಮೋಕೋಕಲ್ ಲಸಿಕೆಯನ್ನು ಹೊಂದುವುದರಿಂದ ರಾಷ್ಟ್ರದಲ್ಲಿ ಶಿಶುಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯವಾಗಲಿದೆ. ಇದು ಭಾರತದ ಪಾಲಿಗೆ ಅಷ್ಟೇ ಅಲ್ಲ ವಿಶ್ವದ ಪಾಲಿಗೂ ತುಂಬಾ ಅನುಕೂಲವಾಗಲಿದೆ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ. ವಿ.ಕೆ. ಪೌಲ್ ತಿಳಿಸಿದ್ದಾರೆ.
2018ನೇ ಸಾಲಿನಲ್ಲಿ ಭಾರತದಲ್ಲಿ ನ್ಯೂಮೋನಿಯಾದಿಂದ ಅತಿಹೆಚ್ಚು ಮಕ್ಕಳು ಮೃತಪಟ್ಟಿದ್ದರು. ಯೂನಿಸೆಫ್ ಪ್ರಕಾರ 2018ರಲ್ಲಿ ಭಾರತದಲ್ಲಿ 5 ವರ್ಷದೊಳಗಿನ 1.27 ಲಕ್ಷ ಮಕ್ಕಳು ನ್ಯೂಮೋನಿಯಾಕ್ಕೆ ಬಲಿಯಾಗಿದ್ದರು. ಇದನ್ನು ತಡೆಗಟ್ಟಲು ಲಸಿಕೆ ಕಾರ್ಯಕ್ರಮಕ್ಕಾಗಿ ನ್ಯೂಮೋನಿಯಾ ಲಸಿಕೆಯನ್ನು ಪ್ರಾಮಾಣೀಕೃತ ಆಮದುಗಾರರ ಮೂಲಕ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ದೇಶಿಯವಾಗಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲು ಸೆರಂ ಇನ್ಸ್ಟಿಟ್ಯೂಟ್ಗೆ ಅನುಮತಿ ನೀಡಲಾಗಿತ್ತು.
ನಿಯಂತ್ರಕರ ಅನುಮತಿ ದೊರೆತ ಬಳಿಕ ಸೆರಂ ಇನ್ಸ್ಟಿಟ್ಯೂಟ್ ಈ ಲಸಿಕೆಯ ತಯಾರಿಕೆಗೆ ಮುಂದಾಗಿತ್ತು. ಭಾರತ ಮತ್ತು ಗಾಂಬಿಯಾದಲ್ಲಿ ಮೂರು ಹಂತಗಳಲ್ಲಿ ಮಾನವರ ಮೇಲಿನ ಪ್ರಯೋಗ ಯಶಸ್ವಿಯಾದ ಬಳಿಕ ಲಸಿಕೆಯನ್ನು ವಾಣಿಜ್ಯಾತ್ಮಕವಾಗಿ ಉತ್ಪಾದಿಸಲು ಸಂಸ್ಥೆಗೆ ಅನುಮತಿ ದೊರೆತಿದೆ.