

ನವದೆಹಲಿ: ಕ್ಷಣ ಕ್ಷಣಕ್ಕೂ ಕರೊನಾ ಬಿಕ್ಕಟ್ಟು ಹೆಚ್ಚುತ್ತಲೇ ಇದೆ. ಈ ನಡುವೆಯೇ ಅನೇಕ ಅಧ್ಯಯನಗಳು ಈ ವೈರಸ್ ಕುರಿತಾಗಿ ಬಿಡುಗಡೆಯಾಗುತ್ತಲೇ ಇವೆ.
ಈ ನಡುವೆಯೇ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಭಯಾನಕ ಎನ್ನುವಂಥ ಸುದ್ದಿ ನೀಡಿದೆ. ಅದೇನೆಂದರೆ ಐಐಎಸ್ಸಿ ಮಾಡಿರುವ ಸಂಶೋಧನೆಯ ಪ್ರಕಾರ ಭಾರತದಲ್ಲಿ ಬರುವ ಸೆಪ್ಟೆಂಬರ್ ಹೊತ್ತಿಗೆ ಕರೊನಾ ಇನ್ನೂ ಉಗ್ರ ಸ್ವರೂಪ ತಾಳಲಿದ್ದು, ದೇಶದಲ್ಲಿ 35 ಲಕ್ಷಕ್ಕೂ ಅಧಿಕ ಮಂದಿ ಈ ಸೋಂಕಿಗೆ ಭಾದಿತರಾಗುತ್ತಾರೆ ಎಂದು ಹೇಳಿದೆ.
ಕಳೆದ ಜೂನ್ ತಿಂಗಳಿನಿಂದ ಈ ತಿಂಗಳು ಅಂದರೆ ಜುಲೈನಲ್ಲಿ ಸೋಂಕಿತರ ಸಂಖ್ಯೆ ಹಿಂದೆಂದಿಗಿಂತಲೂ ದುಪ್ಟಟ್ಟಾಗಿದೆ. ಹೊಸದಾಗಿ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣ ಕೂಡ ದ್ವಿಗುಣವಾಗಿದೆ. ಇನ್ನು ಆಗಸ್ಟ್ ವೇಳೆಗೆ 10 ಲಕ್ಷ ಸಕ್ರಿಯ ಪ್ರಕರಣಗಳು ಇರುವ ಸಾಧ್ಯತೆ ಇದೆ ಎಂದು ಐಐಎಸ್ಸಿ ಎಚ್ಚರಿಕೆ ನೀಡಿದೆ.
ಇದೇ ವೇಳೆ ಮುಂದಿನ ವರ್ಷವೂ ಕೊರೊನಾ ಕಂಟಕ ಮುಂದುವರೆಯುವ ಸಾಧ್ಯತೆ ಇಧ್ದು, ಅಮೆರಿಕಗಿಂತಲೂ ಭಾರತದಲ್ಲಿ ಸೋಂಕು ಅತಿ ಹೆಚ್ಚು ಅನಾಹುತ ತಂದೊಡ್ಡಲಿದೆ ಅಷ್ಟೇ ಅಲ್ಲದೇ, 2021ರ ಮಾರ್ಚ್ ಅಂತ್ಯದ ವೇಳೆಗೆ ಆರು ಕೋಟಿಗೂ ಹೆಚ್ಚು ಕರೊನಾ ಸೋಂಕು ಪತ್ತೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಒಂದೇ ದಿನ ದೇಶದಲ್ಲಿ 32,695 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 9,68,876ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಂದೇ ದಿನ 606 ಮಂದಿ ಕರೊನಾಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ 9,68,876ಕ್ಕೆ ಏರಿಕೆಯಾಗಿದೆ. (ಏಜೆನ್ಸೀಸ್)