ಜೆಡಿಎಸ್​ಗೆ ಸಾಲುಸಾಲು ಸವಾಲು: ಮೈತ್ರಿಗೆ ಕೆಲವು ನಾಯಕರ ಅಸಮಾಧಾನ; ಬಿಜೆಪಿ ಮುಂದೆಯೂ ಹಲವು ಅಹವಾಲು

Nikhil
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಶಾಸಕ ಮುನಿರತ್ನ ಇದ್ದರು.
Published on

ಬೆಂಗಳೂರು: ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್​ನಲ್ಲಿ ಸಾಲು ಸಾಲು ಸವಾಲು ಎದುರಾಗಿವೆ. ಪಕ್ಷದ ಶಾಸಕರು, ಮುಖಂಡರಲ್ಲೇ ಈ ಮೈತ್ರಿ ಬಗ್ಗೆ ಅಸಮಾಧಾನವಿದೆ. ಜಾತ್ಯತೀತ ಪಕ್ಷ ಎಂಬ ಕಾರಣಕ್ಕೆ ಪಕ್ಷದಲ್ಲಿದ್ದ ಮುಸ್ಲಿಂ ಮುಖಂಡರು ಒಳಗೊಳಗೆ ಕುದಿಯುತ್ತಿದ್ದು, ಇನ್ನೂ ಕೆಲವರು ಮೈತ್ರಿ ವಿರೋಧಿಸಿ ಆಕ್ರೋಶ ಕೂಡ ಹೊರ ಹಾಕಿದ್ದಾರೆ.

ಒಂದಿಬ್ಬರು ಮೈತ್ರಿ ಬೆನ್ನಲ್ಲೇ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಸಯ್ಯದ್ ಶಫೀವುಲ್ಲಾ ರಾಜೀನಾಮೆ ನೀಡಿದ್ದಾರೆ. ಸದಾ ಬಿಜೆಪಿ ವಿರುದ್ಧ ಕೆಂಡ ಕಾರುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮೈತ್ರಿ ಬಗ್ಗೆ ಮೌನವಾಗಿರುವುದು ಕೂಡ ಪಕ್ಷದಲ್ಲಿ ತಳಮಳ ಉಂಟು ಮಾಡಿದೆ. ಜೆಡಿಎಸ್ ದೆಹಲಿ ಮಾಜಿ ಪ್ರತಿನಿಧಿ ಮೋಹಿದ್ ಅಲ್ತಾಪ್, ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ನಾಸೀರ್ ಹುಸೇನ್, ಎನ್.ಬಿ.ನಬಿ ಹಾಗೂ ಅವರ ಪುತ್ರ ಒಳಗೊಂಡಂತೆ ಮುಸ್ಲಿಂ ನಾಯಕರು ಈಗಾಗಲೆ ಒಂದು ಸುತ್ತಿನ ರಹಸ್ಯ ಮಾತುಕತೆ ನಡೆಸಿದ್ದು, ಅವರೆಲ್ಲ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬಿಜೆಪಿ ಜತೆಗಿನ ಸ್ನೇಹವೂ ಕಷ್ಟ: ಬಿಜೆಪಿ ಜತೆಗಿನ ಮೈತ್ರಿ ಬಹುತೇಕ ದೆಹಲಿ ಹೈಕಮಾಂಡ್ ಹಂತದಲ್ಲೇ ಆಗಿರುವುದರಿಂದ ರಾಜ್ಯ ಬಿಜೆಪಿ ನಾಯಕರ ವಿಶ್ವಾಸಗಳಿಸುವ ಅನಿವಾರ್ಯತೆ ಜೆಡಿಎಸ್ ನಾಯಕರಿಗಿದೆ. ಒಂದನೇ ಹಂತದ ನಾಯಕರು ಸಲೀಸಾಗಿ ಮೈತ್ರಿಗೆ ಮುಗುಳು ನಗೆ ತೋರಿಸಬಹುದು. ಆದರೆ ಎರಡು ಹಾಗೂ ಮೂರು ಮತ್ತು ಕಾರ್ಯಕರ್ತರ ಹಂತದಲ್ಲಿ ಹೊಂದಾಣಿಕೆ ಸಲೀಸಲ್ಲ ಎಂಬುದು ಉಭಯ ಪಕ್ಷಗಳ ನಾಯಕರಿಗೂ ಮನವರಿಕೆಯಾಗಿದೆ.

ಕಾರ್ಯಕರ್ತರಲ್ಲೂ ಮುನಿಸು: ನೂರು ದಿನಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿ ಹೋರಾಟ ಮಾಡಿ ಈಗ ಏಕಾಏಕಿ ಬಿಜೆಪಿ ಜತೆ ಕೈಜೋಡಿಸಲು ಕಾರ್ಯಕರ್ತರು ಒಪ್ಪುತ್ತಾರೆಯೆ? ವರಿಷ್ಠರ ತಾಳಕ್ಕೆ ತಕ್ಕಂತೆ ಕಾರ್ಯಕರ್ತರು ಕುಣಿಯುತ್ತಾರೆಯೆ ಎಂಬ ಜಿಜ್ಞಾಸೆ ಜೆಡಿಎಸ್​ನಲ್ಲಿ ಮನೆ ಮಾಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರೆ ಮುಗಿಯಿತು ಎಂಬ ಸ್ಥಿತಿ ತಳ ಮಟ್ಟದಲ್ಲಿಲ್ಲ. ಸ್ಥಳೀಯ ಸಮಸ್ಯೆಗಳು, ಜಾತಿ ಸಮೀಕರಣ, ವಿಧಾನಸಭೆ ಚುನಾವಣೆಯಲ್ಲಿ ಹಣಾಹಣಿ, ಮತ್ತಿತರ ಕಾರಣಗಳಿಂದ ಕಾರ್ಯಕರ್ತರ ನಡುವೆ ಕೆಲವೇ ತಿಂಗಳಲ್ಲಿ ಬರುವ ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಕಾಣುವುದು ಸಲೀಸಲ್ಲ ಎಂಬ ಅಭಿಪ್ರಾಯ ಉಭಯ ಪಕ್ಷಗಳಲ್ಲೂ ಇದೆ.

ಪ್ರಬಲ ಸಮುದಾಯಗಳ ಮೇಲೆ ಕಣ್ಣು: ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಪ್ರಾಬಲ್ಯವಿದ್ದರೆ, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಲಿಂಗಾಯತರ ಪ್ರಾಬಲ್ಯವಿದೆ. ಹಳೇ ಮೈಸೂರು ಜಿಲ್ಲೆಗಳಲ್ಲಿ ಜೆಡಿಎಸ್​ಗೆ ಹೆಚ್ಚು ಮತಗಳು ಲಭ್ಯವಾಗಿದ್ದರೆ, ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ. ಈ ಮೈತ್ರಿಯಿಂದ ಕರ್ನಾಟಕದ ಎರಡು ಪ್ರಬಲ ಪ್ರಾಂತ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಎನ್​ಡಿಎ ಗುರಿ. ಈ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಮೈತ್ರಿಗೆ ಒಲವು ತೋರಿದ್ದಾರೆ ಎನ್ನಲಾಗಿದೆ.

ಜಾತಿ ಲೆಕ್ಕಾಚಾರ: ಎರಡು ಪ್ರಬಲ ಸಮುದಾಯಗಳು ಬಿಜೆಪಿ ಹಾಗೂ ಜೆಡಿಎಸ್ ಪರ ನಿಂತಿವೆ. ಬಹುತೇಕ ಲಿಂಗಾಯತರು ಬಿಜೆಪಿಗೆ ಬೆಂಬಲಿಸಿದರೆ, ಒಕ್ಕಲಿಗರು ಜೆಡಿಎಸ್ ಪರ ಇದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಒಂದು ವೇಳೆ, ಇವೆರಡು ಸಮುದಾಯಗಳು ಎನ್​ಡಿಎ ಮೈತ್ರಿಕೂಟವನ್ನು ಬೆಂಬಲಿಸಿದರೆ ಬಿಜೆಪಿ ಹಾಗೂ ಜೆಡಿಎಸ್​ಗೆ ಲಾಭವಾಗಲಿದೆ ಎಂಬ ವಾದವೂ ಇದೆ.

ಜೆಡಿಎಸ್​ಗೆ 3 ಇಲ್ಲವೆ 4 ಸ್ಥಾನ: ಜೆಡಿಎಸ್​ಗೆ ಮೂರು ಇಲ್ಲವೆ ನಾಲ್ಕು ಲೋಕಸಭಾ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಒಪ್ಪಿದೆ. ಆದರೆ, ಈ ಕ್ಷೇತ್ರಗಳಲ್ಲೂ ಮೈತ್ರಿ ವರ್ಕೌಟ್ ಆಗುತ್ತದೆಯೇ ಎಂಬ ಅನುಮಾನ ಒಳಗೊಳಗೇ ಬಿಜೆಪಿ ಮತ್ತು ಜೆಡಿಎಸ್ ಮುಖಂಡರಲ್ಲೂ ಇದೆ.

ಜಾತ್ಯತೀತ ನಿಲುವು ಪ್ರತಿಪಾದನೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಾಗಲಿ, ಮಾಜಿ ಸಿಎಂ ಕುಮಾರಸ್ವಾಮಿ ಅವರಾಗಲಿ ಇದುವರೆಗೆ ಜಾತ್ಯತೀತ ನಿಲುವು ಪ್ರತಿಪಾದನೆ ಮಾಡುತ್ತಲೇ ಪ್ರಾದೇಶಿಕ ಪಕ್ಷಕ್ಕೆ ಜೀವ ಕಳೆ ತುಂಬಿದ್ದರು. ಆದರೆ ಈಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಜಾತ್ಯತೀತ ಸಿದ್ಧಾಂತ ಪ್ರತಿಪಾದನೆ ಮಾಡಿ ವೋಟು ಕೇಳುವುದು ಸಾಧ್ಯವಿಲ್ಲ. ಹಾಗಾಗಿ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಯಾವುದೇ ಪಕ್ಷಗಳ ಜತೆ ಗುರುತಿಸಿಕೊಳ್ಳದ ವೋಟುಗಳನ್ನು ಗಿಟ್ಟಿಸಿಕೊಳ್ಳುವ ಸವಾಲು ಜೆಡಿಎಸ್ ಮುಂದಿದೆ.

ಬಿಎಸ್​ವೈ ನಿಖಿಲ್ ಕುಮಾರಸ್ವಾಮಿ ಭೇಟಿ

ಜೆಡಿಎಸ್-ಬಿಜೆಪಿ ಮೈತ್ರಿ ಬೆನ್ನಲ್ಲೇ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಭೇಟಿ ಬಳಿಕ ಮಾಧ್ಯಮದವರೊಂದಿಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಎನ್​ಡಿಎ ಮೈತ್ರಿ ಕೂಟದ ಜತೆ ಕೈಜೋಡಿಸಿ ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಜಂಟಿಯಾಗಿ ಚುನಾವಣೆ ಎದುರಿಸಬೇಕಿದೆ. ಜನತೆಯ ಹಿತದೃಷ್ಟಿಯಿಂದ ದೇವೇಗೌಡರು ಬಿಜೆಪಿ ಜತೆ ಮೈತ್ರಿಗೆ ತೀರ್ಮಾನ ಮಾಡಿದ್ದಾರೆ. ಯವಕನಾಗಿ, ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿ ಯಡಿಯೂರಪ್ಪ ಅವರ ಆಶೀರ್ವಾದ ಪಡೆದುಕೊಳ್ಳುವುದು ನನ್ನ ಜವಾಬ್ದಾರಿ. ಅದಕ್ಕಾಗಿ ಬಂದು ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದರು. ಬಿಜೆಪಿಯಲ್ಲಿ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ನಮ್ಮ ಕರ್ತವ್ಯ. ಸೀಟು ಹಂಚಿಕೆ ವಿಚಾರ ಮುಂದಿನ ದಿನಗಳಲ್ಲಿ ಹಿರಿಯರು ಸೇರಿ ಚರ್ಚೆ ಮಾಡುತ್ತಾರೆ ಎಂದು ಹೇಳಿದರು. ರಾಜ್ಯ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ ಎಂದು ನಾನು ಎಲ್ಲೂ ಹೇಳಿಲ್ಲ. ನನ್ನದೇ ಆದ ಜವಾಬ್ದಾರಿ ಇದೆ. ಪ್ರಾದೇಶಿಕ ಪಕ್ಷ ಉಳಿಸಬೇಕು ಎಂದು ದೇವೇಗೌಡರು, ಕುಮಾರಸ್ವಾಮಿ ಶ್ರಮಿಸುತ್ತಿದ್ದಾರೆ. ಹಲವು ಕಾರ್ಯಕರ್ತರ ಶ್ರಮದಿಂದ ಕಟ್ಟಿರುವ ಪಕ್ಷ ಜೆಡಿಎಸ್. ನಮ್ಮಂತಹ ಯುವಕರು ಮುಂದಿನ ದಿನಗಳಲ್ಲಿ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಬಿಜೆಪಿ-ಜೆಡಿಎಸ್ ಸೇರಿ 28 ಲೋಕಸಭಾ ಕ್ಷೇತ್ರ ಗೆಲ್ಲುವುದು ಗುರಿ. ಜನರ ವಿಶ್ವಾಸ ಗಳಿಸಿ 28 ಕ್ಷೇತ್ರ ಗೆಲ್ಲುತ್ತೇವೆ ಎಂದರು. ಮೈತ್ರಿ ಮಾತುಕತೆ ಸಂದರ್ಭದಲ್ಲಿ ಎಚ್.ಡಿ.ರೇವಣ್ಣ ಕುಟುಂಬದವರು ಯಾರು ಇಲ್ಲದೆ ಇರುವ ಕುರಿತ ಪ್ರಶ್ನೆಗೆ, ಈ ವಿಚಾರಕ್ಕೆ ಯಾರೂ ಗೊಂದಲ ಮಾಡಿಕೊಳ್ಳುವುದು ಬೇಡ. ರೇವಣ್ಣ ದೆಹಲಿಯಲ್ಲಿ ಇದ್ದರು. ಹೊಳೆನರಸೀಪುರದಲ್ಲಿ ಕಾರ್ಯಕ್ರಮ ಇತ್ತು. ಅದಕ್ಕೆ ಮೈತ್ರಿ ಸಂದರ್ಭದಲ್ಲಿ ಭಾಗಿಯಾಗಲು ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಮಂಡ್ಯ ಚುನಾವಣೆ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೆ ನೋಡೋಣ ಎಂದರು.

ನಿಖಿಲ್ ಕುಮಾರಸ್ವಾಮಿ ಭೇಟಿಯಲ್ಲಿ ವಿಶೇಷತೆ ಏನಿಲ್ಲ. ಸೌಹಾರ್ದಯುತ ಭೇಟಿ ಮಾಡಿದ್ದರು. ಕುಮಾರಸ್ವಾಮಿ ಅವರೂ ಕರೆ ಮಾಡಿದ್ದರು. ಮನೆಗೆ ಬಂದು ಹೋಗಿ ಎಂದು ಹೇಳಿದ್ದಾರೆ. ಸದ್ಯದಲ್ಲೇ ಅವರ ಮನೆಗೆ ಹೋಗಿ ಮಾತನಾಡಿಸಿಕೊಂಡು ಬರುತ್ತೇನೆ. ಹೇಗೂ ನಮ್ಮ ಜತೆ ಅವರು ಹೊಂದಾಣಿಕೆ ಆಗಿದ್ದಾರೆ. ನಾವೆಲ್ಲರೂ ಒಟ್ಟಾಗಿ ಹೋಗಬೇಕಿದೆ. | ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಬಿಜೆಪಿ, ಜೆಡಿಎಸ್ ಮೈತ್ರಿ ಒಳ್ಳೆಯ ಬೆಳವಣಿಗೆ. ಚುನಾವಣಾ ಮುನ್ನ ಈ ಬೆಳವಣಿಗೆ ಆಗಿದ್ದರೆ 135 ಸ್ಥಾನದಲ್ಲಿ ನಾವು ಗೆಲ್ಲುತ್ತಿದ್ದೆವು. ಈಗ ಅದಕ್ಕೆ ಸೂಕ್ತ ಸಮಯ ಬಂದಿದೆ. 28 ಕ್ಷೇತ್ರ ಗೆಲ್ಲುವ ದೃಷ್ಟಿಯಿಂದ ಪಕ್ಷದ ವರಿಷ್ಠರು, ದೇವೇಗೌಡರು ಮತ್ತು ಕುಮಾರಸ್ವಾಮಿ ಜತೆ ಚರ್ಚೆ ಮಾಡಿ ಒಟ್ಟಾಗಿ ಹೋಗುವ ನಿರ್ಧಾರ ಮಾಡಿದ್ದಾರೆ. | ಮುನಿರತ್ನ, ಶಾಸಕ

ವಿಜಯೇಂದ್ರ-ನಿಖಿಲ್ ಜೋಡೆತ್ತು: ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜೋಡೆತ್ತಿನಂತೆ ಚುನಾವಣೆಯಲ್ಲಿ ಧುಮುಕುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net