ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು; ಮಹಿಳೆಯರ ಜೀವಕ್ಕೆಲ್ಲಿದೆ ಗ್ಯಾರಂಟಿ: ಆರ್​.ಅಶೋಕ

dk (9) (1)
Published on

ಬೆಂಗಳೂರು: ಕಳೆದ ಮೂರ್ನಾಲ್ಕು ತಿಂಗಳುಗಳಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಬಾಣಂತಿ ಮಹಿಳೆಯರು ಹಾಗು ನವಜಾತ ಶಿಶುಗಳ ಸಾವು ರಾಜ್ಯ ಕಾಂಗ್ರೆಸ್​​ ಸರ್ಕಾರದ ಹೃದಯಹೀನತೆ, ಕ್ರೂರತೆಯನ್ನು ಎತ್ತಿ ತೋರಿಸುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಅಶೋಕ್​, ಬಣ ಬಡಿದಾಟ, ಕುರ್ಚಿ ಕಿತ್ತಾಟದಲ್ಲಿ ಸದಾ ಮಗ್ನವಾಗಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು, ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ಹೋಗುವ ಬಡ ಕುಟುಂಬಗಳ ಹೆಣ್ಣುಮಕ್ಕಳು ಜೀವಂತವಾಗಿ ಮನೆಗೆ ವಾಪಸ್ಸು ಬರುವ ಗ್ಯಾರೆಂಟಿ ಇಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯವೇ ತಲೆ ತಗ್ಗಿಸುವಂತಾಗಿದೆ; ವಿಜಯೇಂದ್ರ

ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವುಗಳ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದರೂ ಮೊನ್ನೆಯಷ್ಟೇ ನಡೆದ ಬೆಳಗಾವಿಯ ಚಳಿಗಾಲದ ಅಧಿವೇಶನದ ನಂತರವೂ ಸಾವುಗಳು ನಿಲ್ಲುತ್ತಿಲ್ಲವೆಂದರೆ ಸರ್ಕಾರದ ಅಸಡ್ಡೆತನ ನಾಡಿನ ಬಡ ಕುಟುಂಬಗಳ ತಾಯಂದಿರ ಪ್ರಾಣಗಳಿಗೆ ಸಂಚಕಾರ ತಂದೊಡ್ಡಿದೆ ಎಂದರೆ ತಪ್ಪಾಗಲಾರದು ಎಂದು ಬಿಜೆಪಿ ರಾಜ್ಯಧ್ಯಕ್ಷ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲೇ 29 ಬಾಣಂತಿಯರು ಹಾಗೂ 1 ವರ್ಷದಲ್ಲಿ 322 ನವಜಾತ ಶಿಶುಗಳು ಮೃತಪಟ್ಟಿದ್ದರು. ಇದೀಗ ಕಳೆದ 5 ದಿನಗಳ ಅಂತರದಲ್ಲಿ ಇಬ್ಬರು ತಾಯಂದಿರು ಸಾವಿಗೀಡಾಗಿರುವ ಘಟನೆ ನಿಜಕ್ಕೂ ರಾಜ್ಯವೇ ತಲೆ ತಗ್ಗಿಸುವಂತಾಗಿದೆ ಎಂದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ರಾಜ್ಯ ಸರ್ಕಾರ ಈ ಕೂಡಲೇ ಪ್ರಕರಣದ ಗಂಭೀರತೆಯನ್ನು ಅರಿತು ಉನ್ನತ ತನಿಖೆಗೆ ವಹಿಸಿ, ಬಾಣಂತಿಯರ ಸಾವಿಗೆ ಕಾರಣ ತಿಳಿದು ಬಡ ಕುಟುಂಬಗಳ ತಾಯಂದಿರ ಪ್ರಾಣ ಉಳಿಸುವ ನಿಟ್ಟಿನಲ್ಲಿ ತತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net