

ಬೆಂಗಳೂರು: ಆಂಬುಲೆನ್ಸ್ ಚಾಲಕನ ಅಚಾತುರ್ಯದಿಂದ ಮೈಸೂರು ರಸ್ತೆಯ ಗುಡ್ಡದಹಳ್ಳಿ ಬಳಿ ಸರಣಿ
ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡಿದ್ದಾರೆ.
ಅಘಾತದಲ್ಲಿ ಮೂರು ಕಾರು ಮತ್ತು ಎರಡು ದ್ವಿಚಕ್ರ ವಾಹನ ಜಖಂ ಆಗಿದೆ.
ಶುಕ್ರವಾರ ರಾತ್ರಿ ೧೦.೪೫ ಕ್ಕೆ ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ ಜಂಕ್ಷನ್ ಬಳಿ ಈ ಸರಣಿ ಅಪಘಾತ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸುಮಂತ್ (೨೩)ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆ.ಆರ್ ಮಾರ್ಕೆಟ್ ಕಡೆಯಿಂದ ಗುಡ್ಡದಹಳ್ಳಿ ಮಾರ್ಗವಾಗಿ ವೇಗವಾಗಿ ಬಂದ ಆಂಬುಲೆನ್ಸ್ ಚಾಲಕ ನಿಯಂತ್ರಣ ತಪ್ಪಿ ಸಿಗ್ನಲ್ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಗಾಬರಿಯಲ್ಲಿ ಬ್ರೇಕ್ ಬದಲು ಎಕ್ಸಲರೇಟರ್ ತುಳಿದ ಪರಿಣಾಮ ಮುಂದಿದ್ದ ಮೂರು ಕಾರು ಹಾಗೂ ಎರಡು ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಕಾರಿನಲ್ಲಿದ್ದ ನಾಲ್ಕು ಗರ್ಭಿಣಿಗೆ ಹೊಟ್ಟೆಗೆ ಪೆಟ್ಟು ಬಿದ್ದಿದ್ದು, ಮಹಿಳೆ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪರಿಶೀಸಿದ ವೈದ್ಯರು ಯಾವುದೇ ಪ್ರಾಣಾಪಾಯವಿಲ್ಲ ಎಂದು ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆಂಬುಲೆನ್ಸ್‌ನಲ್ಲಿ ರೋಗಿ ಇರಲಿಲ್ಲ:
ಮೊದಲು ಆಂಬುಲೆನ್ಸ್ ಕಾರಿಗೆ ಗುದ್ದಿಗೆ ಆ ಕಾರು ಬಲಗಡೆಗೆ ತಿರುಗಿಕೊಂಡು ದ್ವಿಚಕ್ರ ವಾಹನಕ್ಕೆ ಗುದ್ದಿದೆ ನಂತರ ಚಾಲಕ ಬ್ರೇಕ್ ಬದಲು ಎಕ್ಸಲರೇಟರ್ ತುಳಿದ ಪರಿಣಾಮ ಟಿಂಬರ್ ಯಾರ್ಡ್ ಕಡೆ ಬರುತ್ತಿದ್ದ ಕಾರಿಗೆ ಗುದ್ದಿದೆ ನಂತರ ಮತ್ತೊಂದು ದ್ವಿಚಕ್ರ ವಾಹನ ಮತ್ತು ಮತ್ತೊಂದು ಕಾರಿಗೆ ಗುದ್ದಿ ಆಂಬುಲೆನ್ಸ್ ನಿಂತಿದೆ. ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಕಾಲಿಗೆ ಗಂಭೀರವಾದ ಗಾಯವಾಗಿದೆ. ಗಾಯಾಳುಗಳನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಭವಿಸಿದ್ದಾಗ ಆಂಬುಲೆನ್ಸ್‌ನಲ್ಲಿ ರೋಗಿ ಯಾರು ಇರಲಿಲ್ಲ ಆದರೆ ಕರೆ ಬಂದಿದ್ದ ಹಿನ್ನೆಲೆಯಲ್ಲಿ ವೇಗವಾಗಿ ಹೋಗುತ್ತಿದ್ದಾಗಿ ಚಾಲಕ ಹೇಳಿಕೆ ನೀಡಿದ್ದಾನೆ. ಆಂಬುಲೆನ್ಸ್ ವಾಹನವನ್ನು ಜಪ್ತಿ ಮಾಡಿ ನಂತರ ಸುಮಂತ್‌ನನ್ನು ಠಾಣೆಗೆ ಕರೆದುಕೊಂಡು ಬಂದು ಮದ್ಯಪಾನ ತಪಾಸಣೆ ನಡೆಸಲಾಗಿದ್ದು, ಆತ ಮದ್ಯ ಸೇವಿಸಿರುವುದು ಕಂಡು ಬಂದಿಲ್ಲ. ಆದರೆ ಡ್ರೈವಿಂಗ್‌ನಲ್ಲಿ ಹೆಚ್ಚಾಗಿ ಅನುಭವ ಇಲ್ಲದಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.