

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಹವಾಮಾನ ಬದಲಾವಣೆಯಿಂದ ರಾಜ್ಯದಲ್ಲಿ ಆಗುವ ಅಪಾಯವನ್ನು ತಗ್ಗಿಸಲು ಎರಡು ಪ್ರತ್ಯೇಕ ನೀತಿಗಳನ್ನು ತರುವ ಬಗ್ಗೆ ಚಿಂತನೆ ನಡೆಸಿರುವ ರಾಜ್ಯ ಸರ್ಕಾರ, ಅರಣ್ಯದಲ್ಲಿನ ಬದಲಾವಣೆಗಳ ಬಗ್ಗೆ ಅಧ್ಯಯನಕ್ಕೆ ಮುಂದಾಗಿದೆ.
ಹವಾಮಾನ ಬದಲಾವಣೆಯಿಂದಾಗುವ ಜಾಗತಿಕ ತಾಪಮಾನದಿಂದ ಭೀಕರ ಪರಿಣಾಮಗಳನ್ನು ತಗ್ಗಿಸುವುದು ಹಾಗೂ ತಡೆಗಟ್ಟುವುದಕ್ಕೆ ಹೊಂದಿಕೊಳ್ಳಲು ಸಂಬಂಧಿಸಿದಂತೆ ಎರಡು ನೀತಿಗಳನ್ನು ತರುವುದು ಸರ್ಕಾರದ ಉದ್ದೇಶವಾಗಿದೆ. ತಜ್ಞರು ಸಹ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಸಲಹೆ ನೀಡಿದ್ದಾರೆ. ಹವಾಮಾನ ಬದಲಾವಣೆಯಲ್ಲಿ ಆಗುತ್ತಿರುವ ಪರಿಣಾಮಗಳು ಕರ್ನಾಟಕದ ಪಾಲಿಗೆ ಸಾಕಷ್ಟು ತೊಂದರೆಯನ್ನು ಮುಂದಿನ ದಿನಗಳಲ್ಲಿ ಮಾರಕವಾಗಿರಲಿವೆ. ಆದ್ದರಿಂದಲೇ ಸರ್ಕಾರ ಜಾಗತಿಕ ತಾಪಮಾನವನ್ನು ತಗ್ಗಿಸುವುದಕ್ಕೆ ಪ್ರಯತ್ನಗಳನ್ನು ನಡೆಸಲು ಮುಂದಾಗಿದೆ.
ಎಷ್ಟಿದೆ ಅರಣ್ಯ ಪ್ರದೇಶ?: ರಾಜ್ಯದ ಭೂ ಪ್ರದೇಶ 1,19,791 ಚದುರ ಕಿ.ಮೀ.ಗಳಿದೆ. ಅದರಲ್ಲಿ ಅರಣ್ಯ ಪ್ರಮಾಣ ಶೇ.22.61 ಇದೆ. ಇದರಲ್ಲಿ ಪ್ಲಾಂಟೇಶನ್ ಸಸ್ಯಗಳು ಇವೆ. ಅದನ್ನು ಹೊರತುಪಡಿಸಿದರೆ ಶೇ.19 ಇರಬಹುದೆಂಬ ಅಂದಾಜಿದೆ. ಕೇಂದ್ರ ಅರಣ್ಯ ನೀತಿಯ ಪ್ರಕಾರ, ಶೇ.33 ಇರಬೇಕು. ಆದ್ದರಿಂದ ರಾಜ್ಯ ಸರ್ಕಾರ 2030ರ ವೇಳೆಗೆ ಅರಣ್ಯದ ಪ್ರಮಾಣವನ್ನು ಶೇ.25 ಹೆಚ್ಚು ಮಾಡಲೇಬೇಕಾಗಿದೆ. ಗ್ರಾಮ ಅರಣ್ಯ ರಾಜ್ಯದಲ್ಲಿ 49 ಚದುರ ಕಿಮೀ ಮಾತ್ರ ಇದ್ದು, ಅದನ್ನು 2030ರ ವೇಳೆಗೆ 100 ಚದುರ ಕಿಮೀಗೆ ಹೆಚ್ಚಿಸಬೇಕಾಗಿದೆ. ವರ್ಗೀಕರಿಸದ ಅರಣ್ಯ 1,00,24 ಚದುರ ಕಿಮೀ ಇದೆ. ಅದನ್ನು 15 ಸಾವಿರ ಚದುರ ಕಿಮೀಗೆ ಜಾಸ್ತಿ ಮಾಡಬೇಕಾಗಿದೆ. ಸಂರಕ್ಷಿತ ಅರಣ್ಯ 3,540 ಚದುರ ಕಿಮೀ ಇದ್ದು, ಅದನ್ನು ಕನಿಷ್ಠ 5 ಸಾವಿರ ಚದುರ ಕಿಮೀಗೆ ವಿಸ್ತರಿಸಬೇಕಾಗಿದೆ. ಮೀಸಲು ಅರಣ್ಯ 29,688 ಚದುರ ಕಿಮೀ ಇದ್ದು, ಅದು 35 ಸಾವಿರ ಚದುರ ಕಿಮೀಗೆ ಹೆಚ್ಚಾಗಬೇಕಾಗಿದೆ.
ಅಧ್ಯಯನ ಆರಂಭ: ರಾಜ್ಯದ ಅರಣ್ಯ ಪ್ರದೇಶದಲ್ಲಿರುವ ಒಂದು ಎಕರೆಯಲ್ಲಿ 1960ರಿಂದ ಆಗಿರುವ ಬದಲಾವಣೆಗಳ ಬಗ್ಗೆ ಅಧ್ಯಯನ ಮಾಡಲು ಸರ್ಕಾರ ಸಮಿತಿ ರಚನೆ ಮಾಡಿದೆ. ಒಂದು ಎಕರೆಯಲ್ಲಿ ಎಷ್ಟು ಮರಗಳಿವೆ. ಅವುಗಳ ಉತ್ಪಾದಕತೆ ಎಷ್ಟು, ಆರ್ಥಿಕ ಲಾಭ ಎಷ್ಟಾಗಿದೆ? ಹೀಗೆ ವಿವಿಧ ವಿಷಯಗಳಲ್ಲಿ ಅಧ್ಯಯನ ನಡೆಯಲಿದೆ. ಜೈವಿಕ ಚಕ್ರ, ಜೀವ ವೈವಿಧ್ಯ, ಹವಾಮಾನ ಬದಲಾವಣೆ ಮೇಲೆ ತುಲನಾತ್ಮಕ ಪರಿಣಾಮಗಳ ಬಗ್ಗೆಯೂ ಸಮಿತಿ ವರದಿ ನೀಡಲಿದೆ. ಕಾಡು ಯಾವ ರೀತಿಯಲ್ಲಿ ಬದಲಾಗಿದೆ ಎಂಬುದನ್ನು ಸಹ ಸಮಿತಿ ಗುರುತಿಸಲಿದೆ. ಆಗ ಅರಣ್ಯ ಬೆಳೆಸುವ ಬಗ್ಗೆ ಸರ್ಕಾರ ಸ್ಪಷ್ಟ ನೀತಿಯನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.
ರಿಯಲ್ ಎಸ್ಟೇಟ್ಗೆ ನೀತಿ: ಯಾವುದೇ ಖಾಸಗಿ ಬಡಾವಣೆಗಳು ನಿರ್ವಣವಾಗುವಾಗ ಮತ್ತು ಮನೆಗಳನ್ನು ಕಟ್ಟುವಾಗ ಮರ ನೆಡುವುದನ್ನು ಕಡ್ಡಾಯ ಮಾಡಬೇಕಾಗಿದೆ. 40*60 ನಿವೇಶನಕ್ಕೆ ಮೇಲ್ಪಟ್ಟ ನಿವೇಶನಗಳಲ್ಲಿ ಇಂತಿಷ್ಟು ಮರಗಳು ಇರಲೇಬೇಕೆಂದು ಷರತ್ತು ವಿಧಿಸಿ ಅನುಮತಿ ನೀಡಬೇಕೆಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸರ್ಕಾರ ಸಹ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಮೂಲಗಳು ಹೇಳುತ್ತವೆ. ಇಲ್ಲದಿದ್ದರೆ ಕಾಂಕ್ರೀಟ್ ಕಾಡು ಆಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಹಾನಿ ಎಷ್ಟಾಗಿದೆ?: ರಾಜ್ಯದ ಅರಣ್ಯದಲ್ಲಿ ನಡೆದಿರುವ ಹಾನಿಯ ಪ್ರಮಾಣ ಸುಮಾರು 4,000 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ. 2018-19ರಲ್ಲಿ 5993.64 ಹೆಕ್ಟೇರ್ ಬೆಂಕಿಗೆ ಆಹುತಿಯಾಗಿದೆ. 2019-20ರಲ್ಲಿ 17,911 ಹೆಕ್ಟೇರ್, 2020-21ರಲ್ಲಿ 6,364 ಹೆಕ್ಟೇರ್ ಬೆಂಕಿಯಿಂದ ಸುಟ್ಟು ಹೋಗಿದೆ.
ಎನ್ಜಿಟಿ ಏನು ಹೇಳಿದೆ?: ರಾಷ್ಟ್ರೀಯ ಹಸಿರು ನ್ಯಾಯಪೀಠ ಇತ್ತೀಚಿಗೆ ನೀಡಿರುವ ವರದಿ ಪ್ರಕಾರ, ಶಾಖೋತ್ಪನ್ನ ಘಟಕಗಳ ಸಂಖ್ಯೆ ಕಡಿಮೆ ಮಾಡಿ, ನವೀಕರಿಸುವ ಇಂಧನಗಳ ಕಡೆ ಹೆಚ್ಚಿನ ಗಮನ ನೀಡುವಂತೆ ಹೇಳಿದೆ. ಸರ್ಕಾರ ಆ ನಿಟ್ಟಿನಲ್ಲಿ ಗಮನ ನೀಡುವ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ.
ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲಾಗುವ ಪರಿಣಾಮ ಗಳನ್ನು ತಡೆಗಟ್ಟುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಅದಕ್ಕಾಗಿ ತಗ್ಗಿಸುವಿಕೆ ಮತ್ತು ಹೊಂದಿಕೊಳ್ಳುವ ಬಗ್ಗೆ ಪ್ರತ್ಯೇಕ ನೀತಿಗಳನ್ನು ತರುವುದು ಬಹಳ ಒಳ್ಳೆಯ ಕೆಲಸವಾಗಿದೆ. ಸರ್ಕಾರ ಕೂಡಲೇ ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಬೇಕಾಗಿದೆ.
| ಪ್ರೊ. ಕೃಷ್ಣರಾಜ್ ಸದಸ್ಯರು, ಕರ್ನಾಟಕ ಅರಣ್ಯ ಬದಲಾವಣೆ ಅಧ್ಯಯನ ಸಮಿತಿ
ಖಾಸಗಿ ಅರಣ್ಯ ಒತ್ತು: ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು 75 ಎಕರೆಯಲ್ಲಿ ಖಾಸಗಿ ಅರಣ್ಯ ಅಭಿವೃದ್ಧಿ ಮಾಡಿದ್ದಾರೆ. ರಾಜ್ಯ ದಲ್ಲಿಯೂ ಖಾಸಗಿ ಅರಣ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಅದಕ್ಕೆ ಪ್ರೋತ್ಸಾಹ ಧನ ನೀಡುವಂತಾ ಗಬೇಕು ಎಂಬ ಸಲಹೆ ತಜ್ಞರಿಂದ ಬಂದಿದೆ.