ವಿದ್ಯುತ್ ಸಂಪರ್ಕ ಬಿಕ್ಕಟ್ಟು ಇತ್ಯರ್ಥಕ್ಕೆ ಪ್ರತ್ಯೇಕ ಕಾನೂನು | One time settlement

Vidhanasoudha
Published on

ಬೆಂಗಳೂರು: ರಾಜ್ಯದ ನಗರ, ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ನಕ್ಷೆಗೆ ಪರವಾನಗಿ ಪಡೆಯದೆ ನಿರ್ಮಿಸಿದ ಕಟ್ಟಡಗಳಿಗೆ ವಿದ್ಯುತ್, ಕುಡಿಯುವ ಸಂಪರ್ಕ ಕಲ್ಪಿಸುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಪ್ರತ್ಯೇಕ ಕಾನೂನು ರಚಿಸಲು ಸರ್ಕಾರ ನಿರ್ಧರಿಸಿದೆ.

ಒಂದು ಬಾರಿಯ ಉಪಕ್ರಮವಾಗಿ ಅಸ್ತಿತ್ವದಲ್ಲಿರುವ ನಿಯಮಗಳಂತೆ ಗುರುತಿನ ಚೀಟಿ ಮತ್ತು ಮಾಲೀಕತ್ವದ ಪುರಾವೆಗಳನ್ನು ಪರಿಗಣಿಸಿ, (ನಿವೇಶನ ಅಥವಾ ಕಟ್ಟಡದ ವಿಸ್ತೀರ್ಣ) ವಿದ್ಯುತ್ ಸಂಪರ್ಕ ಕಲ್ಪಿಸಲು ಬಯಸಿದೆ.

ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಿಸಿದ ಇಲಾಖೆಗಳಿಂದ ಕಟ್ಟಡಗಳ ನಕ್ಷೆಗೆ ಅನುಮೋದನೆ ಪಡೆಯದೆ ನಿರ್ಮಿಸಿದ ಕಟ್ಟಡಗಳಿಗೆ ಒಂದು ಬಾರಿಯ ವಿಲೇ ಕ್ರಮ ಅನ್ವಯಿಸಿ ಪ್ರತ್ಯೇಕ ಕಾಯ್ದೆ ರಚಿಸಲು ಸೆ.18ರ ಸಚಿವ ಸಂಪುಟ ಸಭೆ ತೀರ್ಮಾನಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಅಧಿವೇಶನದಲ್ಲಿ ಮಂಡನೆ

ಜತೆಗೆ ನಿಯಮಾವಳಿಗಳನ್ನು ಉಲ್ಲಂಸುವವರಿಗೆ ದಂಡ ವಿಧಿಸಿ, ಇನ್ನು ಮುಂದೆ ಇಂತಹ ಉಲ್ಲಂಘನೆಯಾಗದಂತೆ ಕಾನೂನು/ ನಿಯಮಗಳನ್ನು ರೂಪಿಸಿ, ಸದರಿ ಕರಡು ಪ್ರಸ್ತಾವನೆ ಸಿದ್ಧಪಡಿಸಿ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸುವಂತೆ ಆಡಳಿತ ಇಲಾಖೆಗೆ ಸಚಿವ ಸಂಪುಟ ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್ ತೀರ್ಪು ಅನುಸರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನೀಡಿದ ನಿರ್ದೇಶನವಿತ್ತಿದೆ. ಇದರಿಂದಾಗಿ ಬೆಂಗಳೂರಿನ 1.30 ಲಕ್ಷಕ್ಕೂ ಹೆಚ್ಚು ಸೇರಿ ರಾಜ್ಯದಲ್ಲಿ 4.80 ಲಕ್ಷ ಕಟ್ಟಡಗಳು ನಿರ್ಮಾಣ ಪೂರ್ಣಗೊಂಡಿದ್ದು, ವಿದ್ಯುತ್ ಮತ್ತು ನೀರಿನ ಸಂಪರ್ಕ ವಂಚಿತವಾಗಿವೆ ಎಂದು ಇಂಧನ, ನಗರಾಭಿವೃದ್ಧಿ ಇಲಾಖೆಗಳ ಮೂಲಗಳು ಮಾಹಿತಿ ನೀಡಿವೆ.

ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಏನಿದೆ ?

ಸ್ವಾಧೀನಾನುಭವ ಹಾಗೂ ಆರಂಭಿಕ ಪ್ರಮಾಣಪತ್ರಗಳಿಲ್ಲದ ಕಟ್ಟಡಗಳಿಗೆ ವಿದ್ಯುತ್ ಮತ್ತು ಕುಡಿಯುವ ನೀರಿನ ಸಂಪರ್ಕ ಕೊಡಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಇಂಧನ ಇಲಾಖೆ, ಎಸ್ಕಾಂಗಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ನಿರ್ದೇಶನ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net