

ಶಿವಮೊಗ್ಗ: ಅಂಗವಿಕಲರಿಗಾಗಿ ಪ್ರತ್ಯೇಕ ಉದ್ಯೋಗ ಮೇಳ ಆಯೋಜಿಸುವ ಮೂಲಕ ಅವರೂ ವಿವಿಧ ಕ್ಷೇತ್ರಗಳಲ್ಲಿ ಸ್ವಂತ ಕಾಲ ಮೇಲೆ ನಿಂತು ದುಡಿವಂತೆ ಮಾಡುವುದಾಗಿ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.
ಕುವೆಂಪು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲೆಯಲ್ಲಿ ಅಂಗವಿಕಲರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ಮತದಾರರ ವಿಶೇಷ ನೋಂದಣಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗವಿಕಲರನ್ನು ಕೆಲಸಕ್ಕೆ ಬಾರದವರೆಂದು ನಿರ್ಧರಿಸುವುದು ಸರಿಯಲ್ಲ. ಅವರೂ ತಮ್ಮ ಸ್ವಂತ ಕಾಲ ಮೇಲೆ ನಿಂತು ದುಡಿಯುವ ಶಕ್ತಿ ಹೊಂದಿದ್ದಾರೆ. ಅದಕ್ಕೆ ಸೂಕ್ತ ವೇದಿಕೆಗಳು ಕೆಲವೊಮ್ಮೆ ಸಿಕ್ಕಿರುವುದಿಲ್ಲ. ಉದ್ಯೋಗ ಮೇಳಗಳನ್ನು ಆಯೋಜಿಸುವ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುವಂತೆ ಮಾಡಲಾಗುವುದು ಎಂದು ಹೇಳಿದರು.
ಅಂಗವಿಕಲರಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಅವರು ಆತ್ಮವಿಶ್ವಾಸದೊಂದಿಗೆ ಮಾನಸಿಕ ಸದೃಢತೆ ಬೆಳೆಸಿಕೊಳ್ಳಬೇಕಿದೆ. ಇಡೀ ಸಮಾಜ ನಿಮ್ಮ ಬಗ್ಗೆ ಅನುಕಂಪ ತೋರಿಸುವುದಕ್ಕಿಂತ ಸಹಕಾರ ನೀಡುವ ನಿಟ್ಟಿನಲ್ಲಿ ನಿಮ್ಮೊಂದಿಗೆ ಕೈಜೋಡಿಸಬೇಕು. ಆತ್ಮವಿಶ್ವಾಸದಿಂದ ಸಮಾಜದಲ್ಲಿ ಬರುವಂತಹ ಸಮಸ್ಯೆಯನ್ನು ಎದುರಿಸಿ ಮೆಟ್ಟಿ ನಿಲ್ಲಬೇಕು. ಅಂಗವಿಕಲರಿಗೆ ತಿಂಗಳಿಗೆ ಮಾಸಾಶನ ನೀಡುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕಳೆದ ವರ್ಷ ಅಲಿಂಕೋ ಯೋಜನೆಯಡಿ 1,800 ಸಾಧನ ಸಲಕರಣೆಗಳನ್ನು ನೀಡಲಾಗಿತ್ತು. 2 ತಿಂಗಳೊಳಗೆ ಮತ್ತೆ ಅವಶ್ಯವಿರುವ ಸಲಕರಣೆಗಳನ್ನು ನೀಡಲಾಗುವುದು ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎನ್.ಚಂದ್ರಪ್ಪ, ಅಂಗವಿಕಲರು ಅಬಲರಲ್ಲ ಸಬಲರು. ಅನುಕಂಪ ಬೇಡ ಅವಕಾಶ ಕೊಡಿ ಎನ್ನುವುದನ್ನು ಈಗಾಗಲೇ ವಿದ್ಯಾಭ್ಯಾಸದಲ್ಲಿ, ವೃತ್ತಿಯಲ್ಲಿ, ಎಲ್ಲ ಕ್ಷೇತ್ರದಲ್ಲಿಯೂ ತಮ್ಮ ಸಾಮರ್ಥ್ಯವೇನೆಂದು ಸಾಬೀತುಪಡಿಸಿದ್ದಾರೆ. ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇಲಾಖೆಯಿಂದ ತ್ರಿಚಕ್ರ ವಾಹನ ಯೋಜನೆ, ಸ್ವಯಂ ಉದ್ಯೋಗ ಆಧಾರ ಯೋಜನೆ, ವಿದ್ಯಾರ್ಥಿ ವೇತನ, ವಿದ್ಯಾರ್ಥಿ ಶುಲ್ಕ ಮರುಪಾವತಿ ಹೀಗೆ ವಿವಿಧ ಯೋಜನೆಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಂಗವಿಕಲರನ್ನು ಸನ್ಮಾನ ಮಾಡಲಾಯಿತು. ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಲೆಗಳಿಗೆ, ಕ್ರೀಡೆಯಲ್ಲಿ ಚಾಂಪಿಯನ್‌ಶಿಪ್ ಪಡೆದವರಿಗೆ, ದೈಹಿಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮತದಾರರ ವಿಶೇಷ ನೋಂದಣಿ ಕುರಿತು ಮಾಹಿತಿ ನೀಡಲಾಯಿತು. ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಂತೋಷ್‌ಕುಮಾರ್ ಉಪಸ್ಥಿತರಿದ್ದರು.