ಪ್ರತ್ಯೇಕ ಪ್ರಕರಣ ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ: 4.10 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ

CCB
Published on

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 4.10 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾದಕವಸ್ತು ಎಂ.ಡಿ.ಎಂ.ಎ ಕ್ರಿಸ್ಟೆಲ್‌ಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಅಂದಾಜು ೪ ಕೋಟಿ ರೂ.ಬೆಲೆ ಬಾಳುವ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

ಹೆನ್ರಿ ಚುಕ್ವುಮೇಕಾ ಬಂಧಿತ ವಿದೇಶಿ ಡ್ರಗ್ ಪೆಡ್ಲರ್. ಆರೋಪಿಯು ೨೦೨೨ ರಲ್ಲಿ ಬಿಜಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ. ನಗರದ ಜಾಲಹಳ್ಳಿಯ ಸಪ್ತಗಿರಿ ಕಾಲೇಜ್ ರಸ್ತೆಯಲ್ಲಿರುವ ಮನೆಯೊಂದನ್ನು ಬಾಡಿಗೆ ಪಡೆದು ವಾಸವಾಗಿದ್ದನು. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಡ್ರಗ್ ಪೆಡ್ಲರ್, ಮಾದಕ ವಸ್ತು ಮಾರಾಟ ಮಾಡುತ್ತಿದ್ದಾನೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ. ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮನೆಯೊಂದರ ಮೇಲೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಿ ೪ ಕೆಜಿ ತೂಕದ ಎಂ.ಡಿ.ಎಂ.ಎ ಕ್ರಿಸ್ಟೆಲ್‌ಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ ೪ ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

ಆರೋಪಿ ದೆಹಲಿ ಹಾಗೂ ಮುಂಬೈ ಮೂಲದ ಹಾಗೂ ವಿದೇಶದಲ್ಲಿರುವ ಪರಿಚಯಸ್ಥ ಡ್ರಗ್ ಪೆಡ್ಲರ್‌ಗಳಿಂದ ಎಂಡಿಎಂಎ ಕ್ರಿಸ್ಟೆಲ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ, ಕೊರಿಯರ್ ಮೂಲಕ ಬೆಂಗಳೂರಿಗೆ ತರಿಸಿಕೊಂಡು, ೧ ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌ಗೆ ೮ ರಿಂದ ೧೦ ಸಾವಿರಗಳಂತೆ ಪರಿಚಯಸ್ಥ ಗ್ರಾಹಕರುಗಳಿಗೆ, ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ. ವಾಟ್ಸ್‌ಆ್ಯಪ್ ಮೂಲಕ ಲೊಕೇಷನ್ ಕಳುಹಿಸಿ ನಿರ್ದಿಷ್ಟ ಜಾಗದಲ್ಲಿ ಮಾದಕವಸ್ತು ಇಟ್ಟಿರುವುದಾಗಿ ತಿಳಿಸಿ ಆನ್‌ಲೈನ್ ಮೂಲಕ ಹಣ ಪಡೆಯುತ್ತಿದ್ದ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರಗ್ಸ್ ಸಂಗ್ರಹಣೆಗಾಗಿಯೇ ಪ್ರತ್ಯೇಕ ಮನೆ:
ದೆಹಲಿ ಹಾಗೂ ಮುಂಬೈನಿಂದ ವ್ಯವಸ್ಥಿತವಾಗಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಆರೋಪಿಯು ದಂಧೆ ಬಗ್ಗೆ ಯಾರಿಗೂ ಗೊತ್ತಾಗದಿರಲು ಕೊರಿಯರ್‌ಗಳಿಗೆ ತಾನು ವಾಸವಾಗಿದ್ದ ಕಟ್ಟಡದ ಪಕ್ಕದಲ್ಲಿದ್ದ ಮತ್ತೊಂದು ಮನೆಯ ವಿಳಾಸ ನೀಡಿದ್ದ. ಜತೆಗೆ ಡ್ರಗ್ಸ್ ಸಂಗ್ರಹಣೆಗಾಗಿಯೇ ಪ್ರತ್ಯೇಕ ಮನೆ ಮಾಡಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮನೆ ಪರಿಶೀಲಿಸಿದಾಗ ಮಾದಕವಸ್ತುಗಳು ಪತ್ತೆಯಾದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ಸಾಂನ ಡ್ರಗ್ ಪೆಡ್ಲರ್ ಬಂಧನ:
ಮತ್ತೊಂದು ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಹೊರರಾಜ್ಯದ ಡ್ರಗ್ ಪೆಡ್ಲರ್‌ನನ್ನು ಕೇಂದ್ರ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಬಾಬ್‌ಜ್ಯೋತಿ ಡೋಲೇ(೩೦) ಬಂಧಿತ. ಆರೋಪಿಯಿಂದ ಸುಮಾರು ೧೦ ಲಕ್ಷ ರೂ. ಮೌಲ್ಯದ ೫ ಕೆ.ಜಿ.೫೦೦ ಗ್ರಾಂ ತೂಕದ ಗಾಂಜಾ, ಒಂದು ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ತೂಕದ ಯಂತ್ರ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಬಾಬ್‌ಜ್ಯೋತಿ ೧೨ ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ನಗರಕ್ಕೆ ಬಂದು ಆರಂಭದಲ್ಲಿ ಸೆಕ್ಯೂರಿ ಗಾರ್ಡ್ ಕೆಲಸ ಮಾಡುತ್ತಿದ್ದ. ಬಳಿಕ ಸ್ವಿಗ್ಗಿ ಡೆಲಿವರಿ ಬಾಯ್ ಕೆಲಸವನ್ನೂ ಮಾಡುತ್ತಿದ್ದ. ಕಡಿಮೆ ಸಮಯದಲ್ಲಿ ಸುಲಭವಾಗಿ ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ಡೆಲಿವರಿ ಬಾಯ್ ಕೆಲಸ ಬಿಟ್ಟು ಮಾದಕವಸ್ತು ಮಾರಾಟ ದಂಧೆಗೆ ಇಳಿದಿದ್ದ. ಆರೋಪಿಯು ಒಡಿಸ್ಸಾದ ಬಾಲಸೂರ್‌ನಲ್ಲಿ ಪರಿಚಿತ ಪೆಡ್ಲರ್‌ಗಳಿಂದ ಕಡಿಮೆ ಬೆಲೆ ಗಾಂಜಾವನ್ನು ಖರೀದಿಸಿ, ಲಗೇಜ್‌ನೊಳಗೆ ಬಚ್ಚಿಟ್ಟುಕೊಂಡು ರೈಲಿನಲ್ಲಿ ಬೆಂಗಳೂರಿಗೆ ತರುತ್ತಿದ್ದ. ಇಲ್ಲಿ ಪರಿಚಿತ ಗಿರಾಕಿಗಳಿಗೆ ದುಬಾರಿ ಹಣಕ್ಕೆ ಗಾಂಜಾ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈತನ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net