

ಬೆಂಗಳೂರು : ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೋಟೆಲ್ ಸಿಬ್ಬಂದಿ ಹಾಗೂ ಭೀಕ್ಷುಕನನ್ನು ಕೊಲೆ ಮಾಡಲಾಗಿದೆ.
ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ವೃದ್ಧ ಭೀಕ್ಷುಕನನ್ನು ಇಬ್ಬರು ಅಪ್ರಾಪ್ತರು ಹತ್ಯೆಗೈದಿರುವ ಘಟನೆ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ೭೦ ವರ್ಷ ವಯಸ್ಸಿನ ವೃದ್ಧ ಭೀಕ್ಷುಕನನ್ನು ಹತ್ಯೆ ಮಾಡಲಾಗಿದ್ದು, ಕೃತ್ಯ ಎಸಗಿದ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರನ್ನು ವಶಕ್ಕೆ ಪಡೆಯಲಾಗಿದೆ.
ಬಾಣಸವಾಡಿ ಲಿಂಗರಾಜುಪುರ ಸಮೀಪದ ವೃದ್ಧ ಭೀಕ್ಷುಕ ಚಿಂದಿ ಆಯುತ್ತ, ಭೀಕ್ಷೆ ಬೇಡುತ್ತ ಜೀವನ ನಡೆಸುತ್ತಿದ್ದ. ಎಲ್ಲೆಂದರಲ್ಲಿ ಮಲಗುತ್ತಿದ್ದರು. ಖರ್ಚಿಗೆ ಆಗುವಷ್ಟು ಹಣ ಅವರ ಬಳಿ ಇರುತ್ತಿತ್ತು. ವೃದ್ಧ ಹಣ ಎಣಿಸುತ್ತಿದ್ದದ್ದನ್ನು ಅಪ್ರಾಪ್ತರು ಹಲವು ಬಾರಿ ನೋಡಿದ್ದರು. ಬುಧವಾರ ತಡರಾತ್ರಿ ೨ ಗಂಟೆ ಸುಮಾರಿಗೆ ಮಲಗಿದ್ದ ವೃದ್ಧನ ಬಳಿ ಹೋಗಿದ್ದು, ಮದ್ಯ ಕುಡಿಯಲು ಹಣ ಕೇಳಿದ್ದಾರೆ. ಆಗ ಹಣ ನೀಡಲು ವೃದ್ಧ ನಿರಾಕರಿಸಿದ್ದರು. ಇದೇ ವಿಚಾರಕ್ಕೆ ಗಲಾಟೆ ಶುರುವಾಗಿತ್ತು. ಅಪ್ರಾಪ್ತರು, ವೃದ್ಧನ ತಲೆಗೆ ಕಲ್ಲುಗಳಿಂದ ಹೊಡೆದು ಹಣ ಕಸಿದುಕೊಂಡು ಪರಾರಿಯಾಗ್ದಿದಾರೆ. ತೀವ್ರ ಗಾಯಗೊಂಡು ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದರು. ಕೃತ್ಯದ ನಂತರ ಪರಾರಿಯಾಗಿದ್ದರು. ಮರುದಿನ ಮೃತದೇಹ ನೋಡಿದ್ದ ಸ್ಥಳೀಯರು ಮಾಹಿತಿ ನೀಡಿದ್ದರು. ಬಳಿಕ ಸ್ಥಳ ಪರಿಶೀಲಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೋಟೆಲ್ ಸಿಬ್ಬಂದಿ ಹತ್ಯೆ:
ಮತ್ತೊಂದು ಪ್ರಕರಣದಲ್ಲಿ ಮದ್ಯದ ಅಮಲಿನಲ್ಲಿ ಸಹೋದ್ಯೋಗಿಗಳೇ ಯುವಕನನ್ನು ದೊಣ್ಣೆಯಿಂದ ಹೊಡೆದು ಕೊಲೆಗೈದಿದ್ದಾರೆ.
ಮಂಡ್ಯ ಮೂಲದ ಆನಂದ್(೩೦)ಕೊಲೆಯಾದವ. ಈ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮಂಡ್ಯ ಮೂಲದ ಆನಂದ್, ಕೆಲ ವರ್ಷಗಳಿಂದ ಬೆಂಗಳೂರಿಗೆ ಬಂದಿದ್ದು, ಬೇಗೂರಿನಲ್ಲಿರುವ ಹೋಟೆಲ್‌ವೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದಾನೆ. ಈತ ವಾಸವಾಗಿದ್ದ ಕೋಣೆಯಲ್ಲೇ ಇತರೆ ಇಬ್ಬರು ಸಹೋದ್ಯೋಗಿಗಳು ಇದ್ದರು. ಗುರುವಾರ ರಾತ್ರಿ ಪಾರ್ಟಿ ಮಾಡಲು ಹುಳಿಮಾವು ಬಳಿಯ ಬೆಟ್ಟದ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಮೂವರ ನಡುವೆ ಜಗಳ ನಡೆದಿದೆ. ಆಗ ಇಬ್ಬರು ಆರೋಪಿಗಳು ಆನಂದ್‌ಗೆ ದೊಣ್ಣೆಯಿಂದ ಹೊಡೆದು ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.