

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ 24 ಗಂಟೆಗಳ ಅವಧಿಯಲ್ಲಿ ಪ್ರತ್ಯೇಕ ಕಡೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಡೀಸೆಲ್ ಖಾಲಿಯಾಗಿ ನಿಂತಿದ್ದ ಬೊಲೆರೋ ವಾಹನಕ್ಕೆ ಹಿಂದಿನಿಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಬೊಲೆರೋ ವಾಹನ ಚಾಲಕ ಮೃತಪಟ್ಟಿದ್ದಾನೆ. ಮತ್ತೊಬ್ಬ ಗಾಯಗೊಂಡಿದ್ದಾನೆ.
ತಮಿಳುನಾಡು ಮೂಲದ ಹರೀಶ್ (31) ಮೃತ ಚಾಲಕ. ಮತ್ತೊಂದು ವಾಹನದ ಚಾಲಕ ಮಾದೇಶ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸೋಮವಾರ ರಾತ್ರಿ 11.40ರಲ್ಲಿ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೊಲೆರೋ ಚಾಲಕ ಹರೀಶ್, ಮಡಿವಾಳದಿಂದ ತಮಿಳುನಾಡಿನ ಹೊಸೂರಿನತ್ತ ಹೊರಟ್ಟಿದ್ದ. ಡೀಸೆಲ್ ಖಾಲಿಯಾಗಿ ಮೇಲ್ಸೇತುವೆಯಲ್ಲಿ ವಾಹನ ಆಫ್ ಆಗಿತ್ತು. ಹರೀಶ್ ವಾಹನದಿಂದ ಕೆಳಗೆ ಇಳಿದು ಹಿಂಬದಿಗೆ ಬಂದಿದ್ದಾನೆ. ಮತ್ತೊಂದು ವಾಹನ ಚಾಲಕ ಮಾದೇಶ್, ರಸ್ತೆಯಲ್ಲಿ ವಾಹನ ನಿಂತಿರುವುದನ್ನು ಕಂಡು ತನ್ನ ವಾಹನವನ್ನು ಪಕ್ಕಕ್ಕೆ ಹಾಕಿ ಹರೀಶ್ ಬಳಿಗೆ ಬಂದಿದ್ದಾನೆ.
ಡೀಸೆಲ್ ಖಾಲಿಯಾಗಿರುವುದಾಗಿ ಹರೀಶ್ ಹೇಳಿದ್ದಾನೆ. ಹಗ್ಗ ಕಟ್ಟಿ ಎಳೆದೊಯ್ಯುವ ಬಗ್ಗೆ ಇಬ್ಬರು ಚರ್ಚಿಸುತ್ತಿದ್ದಾಗ ಮಾದೇಶ್ ಬೊಲೆರೋ ವಾಹನ ಮುಂಭಾಗ ಹಗ್ಗ ಕಟ್ಟಲು ಪರಿಶೀಲಿಸಲು ತೆರಳಿದ್ದಾನೆ. ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕ್ಯಾಂಟರ್ ಏಕಾಏಕಿ ಹರೀಶ್ ಸಹಿತ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಹರೀಶ್ ಮತ್ತು ಮಾದೇಶ್ ಗಾಯಗೊಂಡಿದ್ದಾರೆ. ಇತರೆ ವಾಹನ ಚಾಲಕರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಹರೀಶ್, ತೀವ್ರ ರಕ್ತಸ್ರಾವವಾಗಿ ಮಾರ್ಗ ಮಧ್ಯೆ ಮೃತಪಟ್ಟಿದ್ದ. ಈ ಸಂಬಂಧ ಕ್ಯಾಂಟರ್ ಚಾಲಕ ಮನ್ಸೂರ್ ಎಂಬಾತನನ್ನು ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನ ಟ್ಯಾಂಕರ್‌ಗೆ ಗುದ್ದಿ ಸವಾರ ಸಾವು :
ನೀರಿನ ಟ್ಯಾಂಕರ್ ವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದಾನೆ.
ಹೊಸರೋಡ್ ನಿವಾಸಿ ಮೋಹನ್ (32) ಮೃತ ಸವಾರ. ಸೋಮವಾರ ಮಧ್ಯಾಹ್ನ 12.35ರಲ್ಲಿ ಕೂಡ್ಲುಗೇಟ್ ಸಿಗ್ನಲ್ ಸಮೀಪ ಅಪಘಾತ ಸಂಭವಿಸಿದೆ. ಗಾರ್ಮೆಂಟ್ ಉದ್ಯೋಗಿ ಮೋಹನ್ ಸೋಮವಾರ ವೇಗವಾಗಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ, ಮುಂದೆ ಹೋಗುತ್ತಿದ್ದ ನೀರಿನ ಟ್ಯಾಂಕರ್‌ಗೆ ಗುದ್ದಿದ ಪರಿಣಾಮ ತಲೆ, ಮುಖಕ್ಕೆ ಗಂಭೀರವಾಗಿ ಗಾಯವಾಗಿತ್ತು. ಚಿಕಿತ್ಸೆ ಫಲಿಸದೆ ರಾತ್ರಿ ಸವಾರ ಮೋಹನ್ ಮೃತಪಟ್ಟಿದ್ದಾರೆ. ಅಪಘಾತ ಸಂಬಂಧ ನೀರಿನ ಟ್ಯಾಂಕರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಹುಳಿಮಾವು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣಕ್ಕೆ ಆಪತ್ತು ತಂದ ಮದ್ಯ ಸೇವನೆ :
ದ್ವಿಚಕ್ರ ವಾಹನದಿಂದ ಆಯ ತಪ್ಪಿ ಸವಾರರು ಬಿದ್ದ ಪರಿಣಾಮ ಹಿಂಬದಿ ಸವಾರನ ಮೇಲೆ ನೀರಿನ ಟ್ಯಾಂಕರ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪಶ್ಚಿಮ ಬಂಗಾಳ ಮೂಲದ ರಾಹುಲ್ ಸಾಹೀಸ್ (19) ಮೃತ ಹಿಂಬದಿ ಸವಾರ. ದ್ವಿಚಕ್ರ ವಾಹನದಲ್ಲಿ ಸವಾರ ರಘು ಮತ್ತು ಹಿಂಬದಿ ಸವಾರ ರಾಹುಲ್ ಸೋಮವಾರ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೈಲ್ಸ್ ಕೆಲಸ ಮಾಡುತ್ತಿದ್ದ ರಘು ಮತ್ತು ರಾಹುಲ್, ದ್ವಿಚಕ್ರ ವಾಹನದಲ್ಲಿ ಬೆಳಗ್ಗೆ 8.20ರಲ್ಲಿ ರಾಜರಾಜೇಶ್ವರಿನಗರ ಕಡೆಗೆ ಹೊರಟ್ಟಿದ್ದರು. ಮಾರ್ಗ ಮಧ್ಯೆ ಚೌಡೇಶ್ವರಿನಗರ ಜಂಕ್ಷನ್‌ನಲ್ಲಿ ಚಕ್ರ ಸ್ಕಿಡ್ ಆಗಿ ಸವಾರರು ಬಿದ್ದಿದ್ದಾರೆ. ರಸ್ತೆ ಎಡಭಾಗಕ್ಕೆ ಬಿದ್ದ ರಾಹುಲ್ ಮೇಲೆ ಹಿಂದಿನಿಂದ ಬರುತ್ತಿದ್ದ ನೀರಿನ ಟ್ಯಾಂಕರ್ ಚಕ್ರ ಉರುಳಿದೆ. ಬಲಭಾಗಕ್ಕೆ ಬಿದ್ದ ಸವಾರ ರಘು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮದ್ಯ ಸೇವಿಸಿ ರಘು, ದ್ವಿಚಕ್ರ ವಾಹನ ಚಲಾಯಿಸಿದ್ದ. ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹಿಂಬದಿ ಸವಾರ ರಾಹುಲ್ ಮದ್ಯ ಸೇವಿಸಿರಲಿಲ್ಲ. ಕುಡಿದು ವಾಹನ ಚಲಾಯಿಸುತ್ತಿದ್ದ ರಘು ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಅಪಘಾತ ಎಸೆಗಿದ ನೀರಿನ ಟ್ಯಾಂಕರ್ ಚಾಲಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಜಾಮೀನು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಾಜಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾದಚಾರಿ ಸಾವು :
ರಸ್ತೆ ದಾಟುತ್ತಿದ್ದಾಗ ಸೇಲ್ಸ್ ಎಕ್ಸಿಕ್ಯೂಟಿವ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನ್ನಪ್ಪಿದ್ದಾನೆ.
ಕಾವಲ್ ಭೈರಸಂದ್ರ ನಿವಾಸಿ ಸಂತೋಷ್ (22) ಮೃತ ಪಾದಚಾರಿ. ಶಾಪಿಂಗ್ ಮಾಲ್‌ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಸಂತೋಷ್ ಸೋಮವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಹೆಣ್ಣೂರು ಮತ್ತು ಬಾಗಲೂರು ರಸ್ತೆ ದಾಡುವಾಗ ಅತೀ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದ್ದಾನೆ. ಗುದ್ದಿದ ರಭಸಕ್ಕೆ ಸಂತೋಷ್‌ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಲಿಸದೆ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಹೆಣ್ಣೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.