

ಮುಂಬೈ: ವಾರದ ಮೊದಲ ದಿನವೇ (ಸೋಮವಾರ) ಷೇರುಪೇಟೆ ಕುಸಿತಕ್ಕೆ ಸಾಕ್ಷಿಯಾಯಿತು. ಮುಂಬೈ ಷೇರು ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್ 200 ಅಂಶ ಇಳಿಕೆ ಕಂಡು (0.58%), 81,508 ಅಂಶಗಳಿಗೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರು ಸೂಚ್ಯಂಕ (ಎನ್ಎಸ್ಇ) ನಿಫ್ಟಿ 58 ಅಂಶ ಇಳಿಕೆ ಕಂಡು (0.24%) 24,619ಕ್ಕೆ ತಲುಪಿತು. ಬಿಎಸ್ಇ ಮಿಡ್ ಕ್ಯಾಪ್ 152 ಅಂಶ ಏರಿಕೆ ಕಂಡು (0.32%) 47,821 ಅಂಶಗಳಿಗೆ ದಿನದ ವಹಿವಾಟು ಕೊನೆಗೊಳಿಸಿತು. ಬಿಎಸ್ಇ ಸ್ಮಾಲ್ ಕ್ಯಾಪ್ 262 ಅಂಶ ಏರಿಕೆಯಾಗಿ, (0.46%) 57,313 ಅಂಶಗಳಿಗೆ ಸ್ಥಿರಗೊಂಡಿತು.
ಸೆನ್ಸೆಕ್ಸ್ನ 30 ಷೇರುಗಳ ಗುಚ್ಛದಲ್ಲಿ 17 ನಷ್ಟ ಅನುಭವಿಸಿದರೆ, 13 ಲಾಭ ಕಂಡವು. ನಿಫ್ಟಿಯ 50 ಷೇರುಗಳಲ್ಲಿ 30 ಷೇರುಗಳು ನಷ್ಟ ಕಂಡರೆ, 19 ಲಾಭ ಮಾಡಿಕೊಂಡವು. ಒಂದು ಷೇರು ಯಥಾಸ್ಥಿತಿ ಕಾಯ್ದುಕೊಂಡಿತು. ನಿಫ್ಟಿಯಲ್ಲಿ ವಿಪ್ರೋ (2.67%), ಲಾರ್ಸನ್ ಆಂಡ್ ಟುಬ್ರೋ (2.28%) ಹಾಗೂ ಎಸ್ಬಿಐ ಲೈಫ್ (1.33%) ಷೇರುಗಳು ಉತ್ತಮ ಲಾಭ ಗಳಿಸಿದವು. ಟಾಟಾ ಕಂಜ್ಯುಮರ್ (4.13%), ಹಿಂದುಸ್ತಾನ ಯೂನಿಲಿವರ್ (3.29%) ಹಾಗೂ ಟಾಟಾ ಮೋಟರ್ಸ್ (2.09%) ಕಂಪನಿಯ ಷೇರುಗಳು ನಷ್ಟ ಅನುಭವಿಸಿದವು.
ಎನ್ಎಸ್ಇ ಅಂಕಿ-ಅಂಶಗಳ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 1,830.31 ಕೋಟಿ ರೂ.ಗಳ ಷೇರು ಮಾರಾಟ ಮಾಡಿದರು. ದೇಶಿಯ ಸಾಂಸ್ಥಿಕ ಹೂಡಿಕೆದಾರರು 1,659.06 ಕೋಟಿ ರೂ.ಗಳ ಷೇರು ಖರೀದಿಸಿದರು.