3ನೇ ದಿನವೂ ಸೆನ್ಸೆಕ್ಸ್ ಏರಿಕೆ

sensex
Published on

ಮುಂಬೈ: ಬುಧವಾರ ಷೇರುಪೇಟೆ ತೇಜಿಯಲ್ಲಿ ಮುಂದುವರಿದಿದ್ದು, 790 ಪಾಯಿಂಟ್ ಹೆಚ್ಚಳ ಕಂಡಿದೆ. ಸೆನ್ಸೆಕ್ಸ್ 789.70 ಅಂಶ (ಶೇ. 1.61) ಏರಿಕೆ ಆಗಿದ್ದು, 49,733.84ಕ್ಕೆ ವಹಿವಾಟು ಅಂತ್ಯ ಕಂಡಿದೆ. ನಿಫ್ಟಿ 211.50 ಪಾಯಿಂಟ್ (ಶೇ. 1.44) ಹೆಚ್ಚಳ ಆಗಿದ್ದು, ದಿನ ವಹಿವಾಟು 14,864.55ಕ್ಕೆ ಕೊನೆಗೊಂಡಿದೆ. ಬಜಾಜ್ ಫೈನಾನ್ಸ್ ಷೇರು ಮೌಲ್ಯ ಶೇ. 8 ಹೆಚ್ಚಳವಾಗಿದ್ದು, ಅತ್ಯಧಿಕ ಲಾಭ ದಾಖಲಿಸಿದೆ.

ಇಂಡ್​ಸ್ಇಂಡ್ ಬ್ಯಾಂಕ್, ಬಜಾಜ್ ಫೆನ್​ಸರ್ವ್, ಐಸಿಐಸಿಐ ಬ್ಯಾಂಕ್, ಕೋಟಾಕ್, ಬ್ಯಾಂಕ್, ಎಸ್​ಬಿಐ, ಬಜಾಜ್ ಆಟೋ, ಎಚ್​ಡಿಎಫ್​ಸಿ ಬ್ಯಾಂಕ್​ಗಳು ಲಾಭಗಳಿಸಿವೆ. ಇನ್ನೊಂದೆಡೆ ನೆಸ್ಲೆ ಇಂಡಿಯಾ, ಎಚ್​ಸಿಎಲ್ ಟೆಕ್, ಎಲ್​ಆಂಡ್​ಟಿ, ಡಾ.ರೆಡ್ಡೀಸ್, ಟಿಸಿಎಸ್ ಷೇರು ಮೌಲ್ಯ ಪತನಗೊಂಡಿದೆ. ಬ್ಯಾಂಕಿಂಗ್ ಮತ್ತು ಆಟೋಮೊಬೈಲ್ ವಲಯದ ಷೇರು ಖರೀದಿಯಲ್ಲಿ ಆಸಕ್ತಿ ಹೆಚ್ಚಿದ ಕಾರಣ ಷೇರುಪೇಟೆ ಲವಲವಿಕೆಯಿಂದ ಕೂಡಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಜಿಡಿಪಿ ಶೇ.11: ಕೋವಿಡ್ ಎರಡನೆಯ ಅಲೆ ಸಂಕಷ್ಟದ ನಡುವೆಯೂ ಭಾರತದಲ್ಲಿ ಕರೊನಾ ಲಸಿಕಾ ಅಭಿಯಾನ ಭರವಸೆಯಿಂದ ಮುಂದುವರಿಯುತ್ತಿರುವುದರಿಂದ ಪ್ರಸಕ್ತ ಆರ್ಥಿಕ ವರ್ಷದ ಒಟ್ಟು ದೇಶೀಯ ಉತ್ಪನ್ನ ದರ (ಜಿಡಿಪಿ) ಶೇ. 11ಕ್ಕೆ ಮುಟ್ಟಲಿದೆ ಎಂದು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಅಂದಾಜು ಮಾಡಿದೆ.

ಆದರೆ, ಸಾಂಕ್ರಾಮಿಕದ ಹಾವಳಿ ವಿಪರೀತವಾಗಿರುವ ಕಾರಣ ಆರ್ಥಿಕ ಬೆಳವಣಿಕೆ ‘ರಿಸ್ಕ್’ನಲ್ಲಿದೆ ಎಂಬ ಎಚ್ಚರಿಕೆಯನ್ನೂ ‘ಏಷ್ಯನ್ ಅಭಿವೃದ್ಧಿ ಮುನ್ನೋಟ- 2021’ರ ವರದಿಯಲ್ಲಿ ನೀಡಿದೆ. 2022ರ ಹಣಕಾಸು ವರ್ಷದ ಅಂತ್ಯದ ಹೊತ್ತಿಗೆ ಭಾರತದ ಆರ್ಥಿಕ ಬೆಳವಣಿಗೆ ದರ ಶೇ. 7 ಏರಿಕೆ ದಾಖಲಿಸುವ ಮೂಲಕ ಶೇ. 11ರ ಆಸುಪಾಸಿಗೆ ನಿರೀಕ್ಷೆ ಇದೆ. ದಕ್ಷಿಣ ಏಷ್ಯದ ಜಿಡಿಪಿ ಶೇ. 9.5ಕ್ಕೆ ಮುಟ್ಟುವ ಸಂಭವ ಇದ್ದು, ಏಷ್ಯದ ಜಿಡಿಪಿ ಶೇ. 7.3ಕ್ಕೆ ಏರುವ ಸಾಧ್ಯತೆ ಇದೆ. ಏಷ್ಯದಲ್ಲಿ ಚೀನಾ ಆರ್ಥಿಕ ಪ್ರಗತಿ ವೇಗವಾಗಿದ್ದು, ಹಾಂಕಾಂಗ್, ಕೊರಿಯಾ ಗಣರಾಜ್ಯ, ಸಿಂಗಾಪುರಗಳಲ್ಲೂ ಆರ್ಥಿಕ ಬೆಳವಣಿಗೆ ಆಶಾದಾಯಕವಾಗಿದೆ ಎಂದು ಎಡಿಬಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net