ಸಂಪಾದಕೀಯ | ಹಿರಿಯರಿಗೆ ಬೇಕು ಆಸರೆ

Untitled design (1)
Published on

ಭಾರತದ ಶೇಕಡ 70ರಷ್ಟು ವೃದ್ಧರು ಆರ್ಥಿಕವಾಗಿ ಪರಾವಲಂಬಿಗಳಾಗಿದ್ದು, ಜೀವನೋಪಾಯಕ್ಕಾಗಿ ನಿವೃತ್ತಿ ಬಳಿಕವೂ ಸಾಕಷ್ಟು ಜನರು ಕೆಲಸ ಮಾಡುತ್ತಿದ್ದಾರೆ ಎಂಬ ಕಹಿ ವಾಸ್ತವವನ್ನು ನೀತಿ ಆಯೋಗ, ಸಾಮಾಜಿಕ ನ್ಯಾಯ, ಸಬಲೀಕರಣ ಸಚಿವಾಲಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಹಭಾಗಿತ್ವದಲ್ಲಿ ಸಂಕಲಾ ಫೌಂಡೇಷನ್ ನಡೆಸಿದ ಅಧ್ಯಯನ ವರದಿ ಹೇಳಿದೆ. ಅನಾರೋಗ್ಯದ ಸಮಸ್ಯೆಗಳೂ ಹಿರಿಯ ನಾಗರಿಕರನ್ನು ಹೆಚ್ಚಾಗಿ ಕಾಡುತ್ತಿದ್ದು, 60 ವರ್ಷ ಮೇಲ್ಪಟ್ಟ ಶೇಕಡ 35.6ರಷ್ಟು ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ಶೇ.22ರಷ್ಟು ಜನರಲ್ಲಿ ಅಧಿಕ ರಕ್ತದೊತ್ತಡ, ಶೇ.13.2ರಷ್ಟು ಜನರಲ್ಲಿ ಮಧುಮೇಹ ಸಮಸ್ಯೆ ಕಂಡುಬರುತ್ತಿದೆ ಎಂದು ವರದಿ ವಿವರಿಸಿದ್ದು, ಆರ್ಥಿಕ ಮತ್ತು ಆರೋಗ್ಯ ಭದ್ರತೆಯನ್ನು ಖಾತ್ರಿ ಪಡಿಸಬೇಕಿದೆ.

ಇಲ್ಲಿ ಸರ್ಕಾರದ ಜವಾಬ್ದಾರಿ ಮುಖ್ಯವಾಗಿದೆ. ಚುನಾವಣೆಯ ಹೊತ್ತಲ್ಲಿ ಮತಗಳನ್ನು ಸೆಳೆಯಲು ಯಾವುದ್ಯಾವುದೋ ಯೋಜನೆಗಳನ್ನು ಘೋಷಿಸಿ, ದುಡ್ಡು ಸುರಿಯುವ ಬದಲು ಹಿರಿಯ ನಾಗರಿಕರು ನಿವೃತ್ತಿಯ ನಂತರ ನೆಮ್ಮದಿಯ ಬದುಕು ನಡೆಸುವಂಥ ವಾತಾವರಣ ಸೃಷ್ಟಿಸಬೇಕು. ಈ ನಿಟ್ಟಿನಲ್ಲಿ ಸೂಕ್ತ ಸಾಮಾಜಿಕ ಯೋಜನೆಯನ್ನು ರೂಪಿಸಬೇಕು. ಈಗ ನೀಡುತ್ತಿರುವ ಮಾಸಾಶನ ಯಾವುದಕ್ಕೂ ಸಾಕಾಗದು. ಸರ್ಕಾರಿ ನೌಕರರು ಹಾಗೂ ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿತ್ತಿರುವವರು ತಮ್ಮ ನಿವೃತ್ತಿ ಜೀವನವನ್ನು ಉತ್ತಮವಾಗಿ ನಡೆಸಲು ರಿಟೈರ್​ವೆುಂಟ್ ಪೂರ್ವದಲ್ಲೇ ಸಿದ್ಧತೆ ಆರಂಭಿಸುವುದು ಅಗತ್ಯ. ಉದ್ಯೋಗದಲ್ಲಿ ಇದ್ದಾಗಲೇ ಹೆಚ್ಚೆಚ್ಚು ಉಳಿತಾಯವನ್ನು ಮಾಡಿದ್ದಲ್ಲಿ, ನಿವೃತ್ತಿ ನಂತರ ಪರದಾಡಬೇಕಾದ ಸಂದರ್ಭ ಬರುವುದಿಲ್ಲ. ಅಲ್ಲದೆ, ಈ ನಿಟ್ಟಿನಲ್ಲಿ ಉದ್ಯೋಗದಾತರ ಜವಾಬ್ದಾರಿ ಮುಖ್ಯವಾಗಿದ್ದು ಸಿಬ್ಬಂದಿಗೆ ನಿವೃತ್ತಿ ನಂತರ ಘನತೆಯ ಬದುಕು ನಡೆಸುವಂಥ ವ್ಯವಸ್ಥೆಯನ್ನು ನಿರ್ವಿುಸಬೇಕು.

ಇತ್ತೀಚಿಗೆ ಕೆಲ ಕಂಪನಿಗಳಲ್ಲಿ ನಿವೃತ್ತಿ ಮುಂಚೆಯೇ ತರಬೇತಿ ನೀಡಲಾಗುತ್ತಿದೆ. ಇದು ಇನ್ನಷ್ಟು ವ್ಯಾಪಕಗೊಂಡಲ್ಲಿ ನಿವೃತ್ತರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆ, ಮರೆವು, ಖಿನ್ನತೆ, ಹಠಮಾರಿತನ, ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಿರಿಯ ನಾಗರಿಕರನ್ನು ನೋಡಿಕೊಳ್ಳುವುದು ಕೂಡ ಸವಾಲಾಗಿದೆ. ಹೀಗಿರುವಾಗ ಆರ್ಥಿಕ ಸಂಕಷ್ಟವು ಬಾಧಿಸುತ್ತಿದ್ದಲ್ಲಿ ಗಾಯದ ಮೇಲೆ ಬರೆ ಎಳೆದಂತೆ. ಬದಲಾದ ಜೀವನಶೈಲಿ, ಕಾರ್ಯದೊತ್ತಡ ಮುಂತಾದ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತ/ಹೃದಯಸ್ತಂಭನದಿಂದ ಅಕಾಲಿಕವಾಗಿ ಮರಣ ಹೊಂದುತ್ತಿದ್ದಾರೆ. ಆದ್ದರಿಂದ ಕಾಪೋರೇಟ್ ವಲಯದಲ್ಲಿ 45 ಅಥವಾ 50 ವರ್ಷಕ್ಕೆ ನಿವೃತ್ತಿ ಹೊಂದಿ, ಮುಂದಿನ ಸಮಯವನ್ನು ತಮ್ಮ ಹವ್ಯಾಸಗಳಿಗೆ ಮೀಸಲಿಡುವ, ಆ ಮೂಲಕ ಸಂತೃಪ್ತಿಯ ಜೀವನ ಸಾಗಿಸುವಂಥ ಟ್ರೆಂಡ್ ಹೆಚ್ಚುತ್ತಿದೆ. ಆದರೆ, ಇದು ಎಲ್ಲರಿಗೂ ಸಾಧ್ಯವಿಲ್ಲ. ಮಿತ ಆದಾಯ, ಕುಟುಂಬ ನಿರ್ವಹಣೆಯ ಜವಾಬ್ದಾರಿ, ಆರೋಗ್ಯ ಸಮಸ್ಯೆ ಹೀಗೆ ಸಾಲು-ಸಾಲು ಸವಾಲುಗಳು ಬಾಧಿಸುತ್ತವೆ.

ಪರಿಸ್ಥಿತಿ ಹೀಗಿರುವಾಗ ಹಿರಿಯ ನಾಗರಿಕರು ನಿವೃತ್ತಿ ನಂತರವೂ ಜೀವನೋಪಾಯಕ್ಕಾಗಿ ಉದ್ಯೋಗಕ್ಕೆ ತೆರಳುತ್ತಿದ್ದಾರೆ. ಆದರೆ, ಈ ಬೆಳವಣಿಗೆ ಮಾನವೀಯತೆ ದೃಷ್ಟಿಯಿಂದಲೂ ಪೂರಕವಲ್ಲ. ಹಿರಿಯ ನಾಗರಿಕರ ಆರ್ಥಿಕ ಮತ್ತು ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನಗಳು ನಡೆಯಬೇಕು ಮತ್ತು ಬಾಳಿನ ಸಂಧ್ಯಾಕಾಲದಲ್ಲಿ ನೆಮ್ಮದಿಯ ಬದುಕು ಸಾಗಿಸುವಂತಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net