

ಮೈಸೂರು: ಹಿರಿಯ ನಾಗರಿಕರು ಹಾಗೂ ಮನೆಯಲ್ಲಿ ಇರುವ ವಯಸ್ಸಾದವರು ಕಿರಿಯರ ಶ್ರೇಯೋಭಿವೃದ್ಧಿಗಾಗಿ ಸಲಹೆ-ಸೂಚನೆಗಳನ್ನು ಕಾಲ-ಕಾಲಕ್ಕೆ ನೀಡುತ್ತಿರುತ್ತಾರೆ. ಇಂತಹವರು ಸಮಾಜಕ್ಕೆ ಒಂದು ರೀತಿ ಆಸ್ತಿ ಇದ್ದಂತೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಲ್ಲಿ ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನದ ಅಂಗವಾಗಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶ್ರವಣ ಸಾಧನಗಳನ್ನು ವಿತರಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗಿರುವುದು ಯುವ ಪಿಳೀಗೆಯ ಕರ್ತವ್ಯವಾಗಿದೆ. ಇದರೊಂದಿಗೆ ಜನಪ್ರತಿನಿಧಿಗಳು, ಆರೋಗ್ಯ ಇಲಾಖೆಯು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.
ಹಿರಿಯ ನಾಗರಿಕರಿಗೆ ಅಗತ್ಯವಾದಂತಹ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಹಾಗೂ ಸಕಾಲಕ್ಕೆ ಒದಗಿಸುವುದು ಜನಪ್ರತಿನಿಧಿಗಳಾಗಿರುವ ನಮ್ಮಂತಹವರ ಕರ್ತವ್ಯವಾಗಿದೆ. ವಿಕಸಿತ ಭಾರತಕ್ಕಾಗಿ ಅಭಿವೃದ್ಧಿ, ಆರ್ಥಿಕ ಬೆಳವಣಿಗೆ ಮಾತ್ರವಲ್ಲದೇ ಆರೋಗ್ಯ ಕ್ಷೇತ್ರದಲ್ಲೂ ಬೆಳವಣಿಗೆ ಅಗತ್ಯ. ಆರೋಗ್ಯವಲಯವು ಉತ್ತಮವಾಗಿದ್ದರೆ ಎಲ್ಲ ವಲಯವೂ ಸರಿ ದಾರಿಯಲ್ಲಿ ಸಾಗುತ್ತವೆ. ಆದ್ದರಿಂದ ಎಲ್ಲಕ್ಕೂ ಮೂಲವಾಗಿರುವ ಆರೋಗ್ಯವನ್ನು ಚನ್ನಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದುಬಾರಿ ವೆಚ್ಚ ತಗುಲುವ ಇಂತಹ ಅತ್ಯಾಧುನಿಕ ಶ್ರವಣ ಸಾಧನಗಳನ್ನು ಖರೀದಿಸಲು ಸಾಧ್ಯವಾಗದ ಕಾರಣ ಬೇರೆಯವರೊಂದಿಗೆ ಸರಿಯಾಗಿ ಮಾತುಕತೆಯಾಡಲು ಒದ್ದಾಡುತ್ತಿದ್ದ ಹಿರಿಯ ಜೀವಗಳ ಮುಖದಲ್ಲಿ ಆಯಿಷ್ ಇಂದು ಮಂದಹಾಸ ಮೂಡಿಸುವ ಕೆಲಸ ಮಾಡಿದೆ. ಇಂತಹ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಸಂಸ್ಥೆಯ ನಿರ್ದೇಶಕಿ ಎಂ.ಪುಷ್ಪಾವತಿ ಮಾತನಾಡಿ, ಸುಖಿ ಜೀವನಕ್ಕೆ ಮಾತು ಅವಶ್ಯ. ಅದನ್ನು ಕೇಳಿಸಿಕೊಳ್ಳಲು ಕಿವಿಯಲ್ಲಿನ ನರವು ಪ್ರಾಮುಖ್ಯತೆ ವಹಿಸುತ್ತದೆ. ವಯಸ್ಸಿನ ಕಾರಣದಿಂದ ಹಿರಿಯ ನಾಗರಿಕರಲ್ಲಿ ಕಿವಿ ಕೇಳಿಸದೆ ಸಂವಹನಕ್ಕೆ ತೊಂದರೆಯಾಗುತ್ತದೆ. ಈ ವೇಳೆ ಅವರು ಒಂಟಿತನ ಅನುಭವಿಸುತ್ತಾರೆ. ಅದನ್ನು ಹೋಗಲಾಡಿಸಲು ಶ್ರವಣ ಸಾಧನ ವಿತರಿಸುತ್ತಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಆಯಿಷ್ ಸಂಸ್ಥೆಯು ಕೇಂದ್ರ ಸರ್ಕಾರದ ಸುಗಮ ಭಾರತ ಅಭಿಯಾನ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆ ವತಿಯಿಂದ ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ 240 ಹಿರಿಯ ನಾಗರಿಕರಿಗೆ ಶ್ರವಣ ಸಾಧನಗಳನ್ನು ವಿತರಿಸಿತು.ಈ ಉಪಕರಣದ ಮಾರುಕಟ್ಟೆ ಬೆಲೆ 17 ಸಾವಿರ ರೂ. ಆದರೆ ಈ ಯೋಜನೆಯ ಮೂಲಕ 500 ರೂ.ಗೆ ವಿತರಿಸಲಾಯಿತು.
ಸಂಸ್ಥೆಯ ಉಪನ್ಯಾಸಕ ಎಂ.ಸಂದೀಪ್ ಸೇರಿದಂತೆ ಹಲವರು ಹಾಜರಿದ್ದರು.