

ಗಾಂಧಿನಗರದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಹಿರಿಯ ನಟ ದೊಡ್ಡಣ್ಣ ಪ್ರತಿಕ್ರಿಯಿಸಿದ್ದು, ಕಳೆದ ನಾಲ್ವತ್ತು ವರ್ಷದಿಂದ ನಾನು ಇದನ್ನು ನೋಡಿಯೇ ಇಲ್ಲ. ಕೆಲಸ ಇಲ್ಲದ ಹೊರಗಿನ ಕೈಗಳು ಈ ದಂಧೆಯಲ್ಲಿ ತೊಡಗಿಸಿಕೊಂಡಿರಬಹುದೇ ವಿನಃ ಕೆಲಸಕ್ಕಾಗಿ ಹಾತೋರೆಯುವ ಸಿನಿಮಾ ಮಂದಿ ಈ ಕೆಲಸ ಮಾಡಿಲ್ಲ ಎಂದಿದ್ದಾರೆ.
ಚಂದನವನದಲ್ಲಿ ಸಾಕಷ್ಟು ಮಂದಿ ಈ ಜಾಲದಲ್ಲಿ ಸಿಲುಕಿದ್ದಾರೆ ಎಂದು ಹೇಳಿಕೆ ನೀಡಿದ್ದ ಇಂದ್ರಜಿತ್ ಲಂಕೇಶ್, ಕಣ್ಮರೆಯಾದ ಚಿರು ಸರ್ಜಾ ಅವರ ಹೆಸರನ್ನೂ ಈ ಜಾಲದಲ್ಲಿ ತಳುಕು ಹಾಕಿದ್ದರು. ಆ ವಿಚಾರವನ್ನು ಖಂಡಿಸಿದ ದೊಡ್ಡಣ್ಣ, ಆ ಬಗ್ಗೆಯೂ ಮಾತನಾಡಿದ್ದಾರೆ.
‘ನಮ್ಮ ನಡುವೆ ಇಲ್ಲದ ವ್ಯಕ್ತಿಯ ಬಗ್ಗೆ ತಪ್ಪಿದ್ದರು ಮಾತನಾಡುವುದು ತಪ್ಪು. ಅಂಥ ವಿಚಾರವನ್ನು ಮಾತನಾಡಬಾರದಿತ್ತು. ನಾವೂ ಹೆಣ್ಣು ಹೆತ್ತಿದ್ದೇವೆ. ಆ ನೋವು ನಮಗೂ ಗೊತ್ತು. ಪಾಪ ಆ ಮಗು ಮೇಘನಾ ಸ್ಥಿತಿ ಏನಾಗಿರಬೇಡ. ದಯಮಾಡಿ ಆ ರೀತಿ ಇನ್ನೊಬ್ಬರ ಭಾವನೆಗಳಿಗೆ ದಕ್ಕೆ ಮಾಡಬೇಡಿ’ ಎಂದಿದ್ದಾರೆ.
ಇನ್ನು ಗಾಂಜಾ ನಂಟಿನ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು, 80ರ ದಶಕದಿಂದ ನಾವು ಸಿನಿಮಾವನ್ನೇ ದೇವರು ಎಂದು ನಂಬಿಕೊಂಡು ಬಂದಿದ್ದೇವೆ. ಸರ್ಕಾರಿ ನೌಕರಿ ಬಿಟ್ಟು, ಎರಡು ಹೊತ್ತಿನ ಅನ್ನ ಸಿಕ್ಕರೆ ಸಾಕು ಎಂದು ಈ ಗುರುಕುಲಕ್ಕೆ ಬಂದಿದ್ದೇವೆ. ಇಂಥ ಇಂಡಸ್ಟ್ರಿಯಲ್ಲಿ ಈ ರೀತಿ ನಡೆಯುತ್ತದೆ ಎಂಬುದನ್ನು ನಾನು ದೇವ್ರಾಣೆಗೂ ನಂಬುವುದಿಲ್ಲ. ಈ ಬಗ್ಗೆ ನಮಗೆ ಗೊತ್ತೂ ಇಲ್ಲ. ಚಿತ್ರರಂಗವನ್ನು ತಾಯಿಯಂತೆ ನೋಡಿದ್ದೇವೆ. ತಪ್ಪಸ್ಸು ಮಾಡಿದ್ದೇವೆ. ಇದನ್ನೇ ನಂಬಿ ಬಂದಿದ್ದೇವೆ. ದಯವಿಟ್ಟು ಕಳಂಕ ತರಬೇಡಿ. ಚಿತ್ರೋದ್ಯಮಕ್ಕೆ ಸೇರದವರು ಈ ಕೆಲಸ ಮಾಡಿದ್ದಾರೆ’ ಎಂದಿದ್ದಾರೆ.