

ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಲಭ್ಯವಿದ್ದರೂ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಶಿಫಾರಸು ಮಾಡುತ್ತಿರುವ ಸಂಬಂಧ ದೂರುಗಳಿದ್ದ ಹಿನ್ನೆಲೆಯಲ್ಲಿ ಪರಿಶೀಲಿಸಿದರು. ನಂತರ, ಮಾತನಾಡಿ ಯಾವ ಕಾರಣಕ್ಕಾಗಿ ಶಿಫಾರಸ್ಸು ಮಾಡಲಾಗುತ್ತಿದೆ ಎಂದು ಸ್ಪಷ್ಟವಾಗಿ ನಮೂದಿಸಬೇಕು. ವಾರಕ್ಕೊಮ್ಮೆ ತಜ್ಞವೈದ್ಯರೊಂದಿಗೆ ಸಭೆ ನಡೆಸಿ ಶಿಫಾರಸ್ಸು ಮಾಡುವ ಪ್ರಕರಣಗಳು ಹೆಚ್ಚಾಗದಂತೆ ನೋಡಿಕೊಳ್ಳಿ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅನಿಲ್ ಕುಮಾರ್ ಗೆ ಸೂಚನೆ ನೀಡಿದರು.
ರಾಜ್ಯದಿಂದ ಮತ್ತು ಜಿಲ್ಲಾ ಕೇಂದ್ರದಿಂದ ಕಾಲಕಾಲಕ್ಕೆ ಬರುವ ಸಲಹೆ ಸೂಚನೆಗಳ ಫಲಕಗಳನ್ನು ಎಲ್ಲಾ ಕಡೆ ಪ್ರದರ್ಶಿಸುವಂತೆ ಸೂಚನೆ ನೀಡಿದರು.
ಎಬಿಆರ್‌ಕೆ ಯೋಜನೆ ಅಡಿಯಲ್ಲಿ ಸಾಕಷ್ಟು ಅನುಕೂಲ ಪಡೆದುಕೊಳ್ಳಲು ಅವಕಾಶವಿದ್ದು, ಅದನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚಿಸಿದರು. ನಂತರ ತುರ್ತು ಚಿಕಿತ್ಸಾ ಘಟಕ, ಹೆರಿಗೆ ವಾರ್ಡ್ ಮತ್ತು ಬಾಣಂತಿಯರ ಆರೈಕೆ ಕೇಂದ್ರ ಪರಿಶೀಲಿಸಿದರು.
ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಿಗೂ ಭೇಟಿ ನೀಡಲಾಗುತ್ತಿದೆ. ಅದರಂತೆ ಪಟ್ಟಣದ ಆಸ್ಪತ್ರೆಯನ್ನು ಸಹ ಈ ದಿನ ಪರಿಶೀಲಿಸಲಾಗುತ್ತಿದೆ. ಕೆಲವು ಆಡಳಿತಾತ್ಮಕ ಸಮಸ್ಯೆಗಳಿವೆ ಅದನ್ನು ಬಗೆಹರಿಸಲಾಗುತ್ತಿದೆ. ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ , ನಿಯಮದ ಪ್ರಕಾರ ಅಂತವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕ್ಷೇತ್ರದ ಶಾಸಕ ಹಾಗೂ ಸಚಿವರು ಆದ ಕೆ.ವೆಂಕಟೇಶ್ ಅವರಿಂದ ನೀಡುತ್ತಿರುವ ಸಲಹೆ ಸೂಚನೆಗಳನ್ನು ಪಡೆದು ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ವಿಜಯ್ ಕುಮಾರ್, ಡಾ.ಶೋಭಾ, ಡಾ.ಸುನೀಲ್ ಕುಮಾರ್ ಮತ್ತಿತರರು ಹಾಜರಿದ್ದರು.
ಗುಂಪುಗಾರಿಕೆ ಆರೋಪ: ಆಸ್ಪತ್ರೆಯಲ್ಲಿ ಪ್ರಭಾರ ನರ್ಸಿಂಗ್ ಅಧೀಕ್ಷಕರನ್ನುಬದಲಾಯಿಸಿರುವ ಕಾರಣ ಎರಡು ಗುಂಪುಗಳಾಗಿರುವ ನರ್ಸಿಂಗ್ ಸಿಬ್ಬಂದಿ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಈ ಹಿಂದೆ ಆರೋಗ್ಯ ರಕ್ಷಾ ಸಮಿತಿ ಸದಸ್ಯೆಯಾಗಿದ್ದ ಮಹಿಳೆಯೊಬ್ಬರು ಪದೇಪದೆ ಆಸ್ಪತ್ರೆ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುವ ಮೂಲಕ ಅನಾವಶ್ಯಕವಾಗಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯರೊಬ್ಬರು ದೂರಿದರು.