

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಬಿಜೆಪಿಯ ಇಮೇಜ್ ಹೆಚ್ಚಿಸುವುದಕ್ಕೆ ಪೂರಕವಾಗಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಪಕ್ಷದ ವರಿಷ್ಠರು ಹಾಗೂ ಸಂಘ ಪರಿವಾರದ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಟ್ಟಪ್ಪಣೆ ಮಾಡಿದ್ದಾರೆ. ಮುಂದಿನ ಒಂದು ವರ್ಷಗಳ ಕಾಲ ಬಿಜೆಪಿ ಪಾಲಿಗೆ ಅತ್ಯಂತ ಕಠಿಣ ದಿನಗಳಾಗಿವೆ. ಸಾಕಷ್ಟು ಸವಾಲು ಎದುರಾಗಲಿದೆ. ಆದ್ದರಿಂದಲೇ ಪಕ್ಷದ ಇಮೇಜ್ ಹೆಚ್ಚಿಸುವುದಕ್ಕೆ ಆದ್ಯತೆ ನೀಡಲು ಕೆಲವೊಂದು ಸಲಹೆಗಳು ಪಕ್ಷ ಹಾಗೂ ಸಂಘದ ಕಡೆಯಿಂದ ಬಂದಿವೆ ಎಂದು ಮೂಲಗಳು ಖಚಿತಪಡಿಸಿವೆ.
ಇದುವರೆಗೂ ಸರ್ಕಾರ ಇಟ್ಟಿರುವ ಹೆಜ್ಜೆ ಇಮೇಜ್ ಹೆಚ್ಚಿಸುವುದಕ್ಕೆ ನಿರೀಕ್ಷೆಯಷ್ಟು ಸಾಧ್ಯವಾಗಿಲ್ಲವೆಂಬುದು ಪಕ್ಷದ ಹಾಗೂ ಸಂಘದ ಮುಖಂಡರ ಅಭಿಪ್ರಾಯವಾಗಿದೆ. ಆದ್ದರಿಂದಲೇ ಏನೇನು ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೂ ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಸಾಧ್ಯವಾಗಿಲ್ಲ. ಪ್ರತಿ ಬಾರಿ ಆಪರೇಷನ್ ಕಮಲ ಮೂಲಕವೇ ಅಧಿಕಾರ ನಡೆಸಲಾಗಿದೆ. 2023ರಲ್ಲಿ ಸ್ವಂತ ಶಕ್ತಿಯಿಂದ ಸರ್ಕಾರ ರಚನೆ ಮಾಡಬೇಕು ಎಂಬುದು ಪಕ್ಷದಲ್ಲಿ ನಡೆದಿರುವ ಚರ್ಚೆ. ಅದಕ್ಕೆ ಪೂರಕವಾಗಿ ಸರ್ಕಾರ ಜನರಿಗೆ ಹತ್ತಿರವಾಗಬೇಕು ಎಂಬ ಅಭಿಪ್ರಾಯ ಬಂದಿದೆ.
ಸವಾಲು ಏಕೆ?: ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಸಾಲು ಸಾಲು ಚುನಾವಣೆಗಳು ಬರಲಿವೆ. ವಿಧಾನಪರಿಷತ್, ಜಿಪಂ, ತಾಪಂ, ಬಿಬಿಎಂಪಿ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದರೆ ಮಾತ್ರ ವಿಧಾನಸಭೆ ಚುನಾವಣೆ ಸುಲಭವಾಗಿ ಎದುರಿಸಬಹುದು. ಈ ಎಲ್ಲ ಚುನಾವಣೆಗಳಲ್ಲಿಯೂ ಪಕ್ಷದ ಸಾಧನೆ ಸರ್ಕಾರದ ಇಮೇಜಿನ ಮೇಲೆ ನಿಂತಿರುತ್ತದೆ ಎಂಬುದು ಪಕ್ಷ ಹಾಗೂ ಸಂಘದ ಮುಖಂಡರ ಸಲಹೆ ಎಂದು ಹೇಳಲಾಗುತ್ತಿದೆ. ವಿಧಾನಸಭೆ ಚುನಾವಣೆಗಳು ಕೇಂದ್ರ ನಾಯಕರು ಅಥವಾ ಕೇಂದ್ರ ಸರ್ಕಾರದ ಸಾಧನೆಗಳಿಗಿಂತ ರಾಜ್ಯ ಸರ್ಕಾರದ ಸಾಧನೆಗಳನ್ನು ಹೆಚ್ಚಾಗಿ ಬಿಂಬಿಸಬೇಕಾಗುತ್ತದೆ. ಅದಕ್ಕಾಗಿಯೇ ಸರ್ಕಾರ ಜನರಿಗೆ ಹತ್ತಿರವಾಗುವ ರೀತಿಯ ಕಾರ್ಯಕ್ರಮಗಳು ಬೇಕಾಗುತ್ತವೆ ಎಂದು ಸೂಚನೆ ನೀಡಿದ್ದಾರೆ. ಸಂಘಟನೆ ಕಡೆಯಿಂದ ಪ್ರತಿಪಕ್ಷಗಳನ್ನು ಕಟ್ಟಿ ಹಾಕುವುದಕ್ಕೆ ಪೂರಕವಾಗಿ ಬೇಕಾದ ತಂತ್ರಗಳನ್ನು ಮಾಡಲಾಗುತ್ತದೆ. ಜತೆಗೆ ಸರ್ಕಾರ ಇಡುವ ಹೆಜ್ಜೆಗಳು ಮುಖ್ಯವಾಗುತ್ತವೆ.
ಸರ್ಕಾರ ಹಾಗೂ ಪಕ್ಷದ ಇಮೇಜ್ ವೃದ್ಧಿಯಾಗಲು ಕೂಡಲೇ ಒಂದಷ್ಟು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಜನರಲ್ಲಿ ಸರ್ಕಾರದಿಂದ ಒಂದಷ್ಟು ಕೆಲಸಗಳು ನಡೆಯುತ್ತಿವೆ ಎಂಬ ಭಾವನೆ ಮೂಡುವಂತಾಗಬೇಕು. ಮುಂದಿನ ಬಜೆಟ್ ತನಕ ಕಾಯದೆ ಈಗಿನಿಂದಲೇ ಕಾರ್ಯಕ್ರಮಗಳನ್ನು ರೂಪಿಸಿ. ಕಾರ್ಯರೂಪಕ್ಕೆ ತನ್ನಿ. ಎಲ್ಲ 224 ಕ್ಷೇತ್ರಗಳಲ್ಲಿಯೂ ಕಾಮಗಾರಿಗಳು ಜನರ ಕಣ್ಣಿಗೆ ಕಾಣುವ ರೀತಿಯಲ್ಲಿ ಹಮ್ಮಿಕೊಳ್ಳಿ. ಸಿಎಂ ಪ್ರತಿ ಜಿಲ್ಲೆಗೂ ಪ್ರವಾಸ ಮಾಡಬೇಕು. ಅದೇ ರೀತಿಯಲ್ಲಿ ಸಚಿವರು ಹಳ್ಳಿಹಳ್ಳಿಗೂ ತಮ್ಮ ಇಲಾಖೆಯನ್ನು ತೆಗೆದುಕೊಂಡು ಹೋಗಬೇಕು. ಕಂದಾಯ ಸಚಿವ ಆರ್. ಅಶೋಕ್ ಅವರು ಜಿಲ್ಲಾಧಿಕಾರಿ ನಡಿಗೆ ಹಳ್ಳಿ ಕಡೆಗೆ ಎಂಬ ಕಾರ್ಯಕ್ರಮ ತಂದಿರುವ ರೀತಿಯಲ್ಲಿ ಇತರೆ ಇಲಾಖೆಗಳು ಆ ಪ್ರಯತ್ನ ಮಾಡಬೇಕು. ಪ್ರಮುಖವಾಗಿ ಆರೋಗ್ಯ, ಆಹಾರ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಕೃಷಿ, ತೋಟಗಾರಿಕೆ ಹೀಗೆ ವಿವಿಧ ಪ್ರಮುಖ ಇಲಾಖೆಗಳ ಅಧಿಕಾರಿ ಮತ್ತು ಸಚಿವರು ಹಳ್ಳಿಗಳ ಕಡೆ ನಡೆಯುವಂತಾಗಲಿ. ಜನರಲ್ಲಿ ಆಗ ಸರ್ಕಾರದ ಬಗ್ಗೆ ವಿಶ್ವಾಸ ಮೂಡುತ್ತದೆ. ಬಹುತೇಕ ಸಚಿವರು ಎಲ್ಲ ಜಿಲ್ಲೆಗಳಿಗೂ ಹೋಗಿಲ್ಲ. ಕೇವಲ ತಮ್ಮ ಕ್ಷೇತ್ರ ಅಥವಾ ಉಸ್ತುವಾರಿ ಜಿಲ್ಲೆಗೆ ಸೀಮಿತವಾಗಿದ್ದಾರೆ. ವಿಧಾನಸೌಧದಲ್ಲಿಯೂ ಇರುವುದಿಲ್ಲವೆಂಬ ದೂರುಗಳಿವೆ. ಕೂಡಲೇ ಆ ಕೆಟ್ಟ ನಡವಳಿಕೆಗೆ ಕಡಿವಾಣ ಹಾಕಲೇಬೇಕು ಎಂಬ ಸೂಚನೆ ನೀಡಿದ್ದಾರೆ. ಶಾಸಕರಿಗೆ ಕೆಲಸಗಳನ್ನು ಮಾಡಿಕೊಡಬೇಕು. ಇಲ್ಲದಿದ್ದರೆ ಅವರು ಜನರ ವಿಶ್ವಾಸ ಗಳಿಸುವುದು ಕಷ್ಟವಾಗುತ್ತದೆ. ಅಧಿಕ ವರ್ಗಾವಣೆ ಸರ್ಕಾರದ ಇಮೇಜ್ ಕಡಿಮೆ ಮಾಡುತ್ತದೆ. ಮುಂದಿನ ಸಾರ್ವತ್ರಿಕ ಚುನಾವಣೆವರೆಗೂ ವರ್ಗಾವಣೆಗೆ ಕೈ ಹಾಕಬೇಡಿ ಎಂಬ ಸಲಹೆಯೂ ಬಂದಿದೆ ಎಂದು ಮೂಲಗಳು ಹೇಳಿವೆ.
ಮುಖ್ಯಮಂತ್ರಿ ತವರು ಜಿಲ್ಲೆ ಹಾನಗಲ್ ಕ್ಷೇತ್ರದ ಸೋಲು, ಮುಂದಿನ ಚುನಾವಣೆಗಳಿಗೆ ಸಿದ್ಧತೆ, ಪಕ್ಷದ ಸಂಘಟನೆ, 4 ತಂಡಗಳಲ್ಲಿ ಹಮ್ಮಿಕೊಂಡಿರುವ ಜನ ಸ್ವರಾಜ್ ಯಾತ್ರೆ ಸೇರಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಬಿಜೆಪಿ ಮುಖಂಡರ ಪ್ರಮುಖ ಸಭೆ ಮಂಗಳವಾರ ನಡೆಯಲಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ಸಿಂಗ್ ನೇತೃತ್ವದಲ್ಲಿ ಪದಾಧಿಕಾರಿಗಳು, ಕೋರ್ ಕಮಿಟಿ, ವಿವಿಧ ಮುಖಂಡರ ಸಭೆಗಳು ಇಡೀ ದಿನ ನಡೆಯಲಿವೆ. ಯಾವುದೇ ಚುನಾವಣೆಯ ಫಲಿತಾಂಶದ ಬಗ್ಗೆ ಇದುವರೆಗೂ ಆತ್ಮಾವಲೋಕನ ನಡೆದಿಲ್ಲ. ಇದೇ ಮೊದಲ ಬಾರಿಗೆ ಹಾನಗಲ್ ಸೋಲನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ಈ ವಿಚಾರದಲ್ಲಿ ಚರ್ಚೆ ನಡೆಯಲಿದೆ. ಈ ಸೋಲು ಪಕ್ಷಕ್ಕೆ ಒಂದು ರೀತಿ ಮುಜುಗರವನ್ನುಂಟು ಮಾಡಿದೆ. ಮುಂದಿನ ಚುನಾವಣೆಗಳ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ತೆಗೆದುಕೊಳ್ಳುವ ಬಗ್ಗೆ ನಿರ್ಧಾರವಾಗಲಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಹಾನಗಲ್ ಸೋಲಿನ ಕುರಿತು ಹೈಕಮಾಂಡ್ ಈಗಾಗಲೆ ರಾಜ್ಯ ಘಟಕ ಹಾಗೂ ಮುಖ್ಯಮಂತ್ರಿಯಿಂದ ಪ್ರತ್ಯೇಕ ವರದಿ ಪಡೆದಿದೆ. ಮಂಗಳವಾರದ ಸಭೆಯ ನಂತರ ಅರುಣ್ಸಿಂಗ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಮತ್ತೊಂದು ವಿಸõತ ವರದಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಭವಿಷ್ಯದ ಚುನಾವಣೆಗಳಿಗೆ ಸಿದ್ಧತೆ ಆರಂಭ, ಸಂಘಟನೆ ಚುರುಕುಗೊಳಿಸುವ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಬಿಬಿಎಂಪಿ, ವಿಧಾನಪರಿಷತ್ಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ಚುನಾವಣೆ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿ ರಣತಂತ್ರವನ್ನು ರೂಪಿಸಲಾಗುತ್ತದೆ.
ಜನವರಿಯಲ್ಲಿ ವಿಧಾನಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಮೇಲ್ಮನೆಯಲ್ಲಿ ಶಕ್ತಿ ವೃದ್ಧಿಸಿಕೊಳ್ಳಬೇಕಾಗಿದೆ. ಬಹುತೇಕ ಪಕ್ಷದ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಜೆಡಿಎಸ್ನಿಂದ ಬಿಜೆಪಿ ಸೇರಲು ಉದ್ದೇಶಿಸಿರುವ ವಿಧಾನಪರಿಷತ್ ಸದಸ್ಯರಿಗೆ ಟಿಕೆಟ್ ನೀಡುವುದಕ್ಕೆ ಸಂಬಂಧಿಸಿದಂತೆಯೂ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ. ಜನ ಸ್ವರಾಜ್ ಯಾತ್ರೆಯಲ್ಲಿ ಪ್ರಸ್ತಾಪಿಸಬೇಕಾದ ಸಂಗತಿಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕೇವಲ ಊಹೆ. ಕಾಂಗ್ರೆಸ್ ಇಂತಹ ವದಂತಿಗಳನ್ನು ಹಬ್ಬಿಸುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಬದಲಾವಣೆಯ ಪ್ರಶ್ನೆಯೇ ಇಲ್ಲ. ಪಕ್ಷದ ಸಂಘಟನೆ ಸದೃಢಗೊಳಿಸುವುದು, ಮುಂದಿನ ಚುನಾವಣೆಗಳ ಬಗ್ಗೆ ಮಂಗಳವಾರದ ಸಭೆಯಲ್ಲಿ ರ್ಚಚಿಸಲಾಗುವುದು.
| ಅರುಣ್ ಸಿಂಗ್ ಬಿಜೆಪಿ ರಾಜ್ಯ ಉಸ್ತುವಾರಿ