

ಬರ್ಲಿನ್: ತಾಲಿಬಾನ್ ಆಡಳಿತಕ್ಕೆ ಸಿಲುಕಿರುವ ಅಫ್ಘಾನಿಸ್ತಾನ ಸಂಕಷ್ಟಕ್ಕೆ ಒಳಗಾಗಿದೆ. ಹಸಿವಿನಿಂದ ಕಂಗೆಟ್ಟಿರುವ ಆಫ್ಘನ್ನರು ತಮ್ಮ ಮಕ್ಕಳನ್ನೇ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಗೆ ತಲುಪಿದ್ದಾರೆ ಎಂದು ವಿಶ್ವ ಸಂಸ್ಥೆಯ ವಿಶ್ವ ಆಹಾರ ಯೋಜನೆಯ ಮುಖ್ಯಸ್ಥ ಡೇವಿಡ್ ಬೇಸ್ಲೆ ಹೇಳಿದ್ದಾರೆ.
ಅಫ್ಘಾನಿಸ್ತಾನ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕರೊನಾ ಸಂಕಷ್ಟದ ಹೊಡೆತಕ್ಕೂ ಒಳಗಾಗಿದೆ. ದಶಕಗಳ ಆಂತರಿಕ ಸಂಘರ್ಷದಿಂದಾಗಿ ಆರ್ಥಿಕತೆಯೂ ಕುಸಿದಿದೆ. ಒಟ್ಟು ಜನಸಂಖ್ಯೆಯ ಅರ್ಧ ಭಾಗ ಅಂದಾಜು 24 ದಶಲಕ್ಷ ಜನರು ಹಸಿವಿನಿಂದ ಕಂಗಾಲಾಗಿದ್ದಾರೆ. ದೇಶದ 97% ಜನಸಂಖ್ಯೆ ಈ ವರ್ಷದ ಕೊನೆಯೊಳಗೆ ಬಡತನಕ್ಕೆ ಜಾರಲಿದೆ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯ ಈಗ ನೆರವಿನ ಹಸ್ತ ಚಾಚವೇಕು ಎಂದು ಬೇಸ್ಲೆ ಮನವಿ ಮಾಡಿದ್ದಾರೆ. ಜರ್ಮನಿಯ ಸರ್ಕಾರಿ ಸ್ವಾಮ್ಯದ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಡಷೆ ವೆಲ್ಲೆಗೆ ನೀಡಿದ ಸಂದರ್ಶನದಲ್ಲಿ ಬೇಸ್ಲೆ, ಅಫ್ಘಾನಿಸ್ತಾನ ಜಗತ್ತಿನ ಬಡ ರಾಷ್ಟ್ರಗಳಲ್ಲಿ ಒಂದು. 4 ಕೋಟಿ ಜನರ ಪೈಕಿ 2.3 ಕೋಟಿ ಜನ ಹಸಿವಿನಿಂದ ಕಂಗಾಗಲಾಗಿದ್ದಾರೆ. ಅಫ್ಘನ್ಗೆ ಹೋಗಿದ್ದಾಗ ಒಬ್ಬ ಮಹಿಳೆ ತಮ್ಮ ಸಮೀಪ ಬಂದು ಬದುಕಿನ ಬವಣೆಯನ್ನು ಹೇಳಿದ್ದಳು. ಆಕೆ ತನ್ನ ಮಗಳನ್ನೇ ಇನ್ನೊಂದು ಕುಟುಂಬಕ್ಕೆ ಮಾರಾಟ ಮಾಡಿ ತನ್ನ ಕುಟುಂಬದ ಇತರೆ ಸದಸ್ಯರ ಹೊಟ್ಟೆ ಹೊರೆಯಬೇಕಾದ ಸ್ಥಿತಿ ಎದುರಾಗಿರುವುದನ್ನು ವಿವರಿಸಿದ್ದಳು. ಇದು ಒಬ್ಬಳ ವ್ಯಥೆ ಅಲ್ಲ. ಅಲ್ಲಿ ಅನೇಕರ ವ್ಯಥೆಯೂ ಇದುವೇ. ಜಗತ್ತಿನ ಶ್ರೀಮಂತ ರಾಷ್ಟ್ರಗಳು ಈಗ ಮಾನವೀಯ ನೆಲೆಯಲ್ಲಿ ಅಲ್ಲಿನ ಜನರ ನೆರವಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಭಾರತದಿಂದ ವೈದ್ಯಕೀಯ ನೆರವು: ಸಂಕಷ್ಟಕ್ಕೆ ಒಳಗಾಗಿರುವ ಆಫ್ಘನ್ಗೆ 3 ಟನ್ಗಳಷ್ಟು ಜೀವರಕ್ಷಕ ಔಷಧಗಳು ಸೇರಿ ವೈದ್ಯಕೀಯ ಸವಲತ್ತುಗಳ ನೆರವನ್ನು ಕಳುಹಿಸಿದೆ. ನಾಲ್ಕು ಬ್ಯಾಚುಗಳಲ್ಲಿ ಈ ನೆರವು ಅಲ್ಲಿಗೆ ರವಾನೆಯಾಗಿದೆ. ಮಾನವೀಯ ನೆಲೆಯಲ್ಲಿ ಇದನ್ನು ನಿರ್ವಹಿಸಲಾಗಿದೆ. ಇದಕ್ಕೂ ಮೊದಲು, ಡಬ್ಲ್ಯುಎಚ್ಒ ಮತ್ತು ಕಾಬೂಲ್ನ ಇಂದಿರಾ ಗಾಂಧಿ ಚಿಲ್ಡ ›ನ್ ಹಾಸ್ಪಿಟಲ್ಗೆ 5 ಲಕ್ಷ ಕೋವಿಡ್ 19 ಲಸಿಕೆ ಮತ್ತು ಜೀವ ರಕ್ಷಕ ಔಷಧಗಳನ್ನು ಕಳುಹಿಸಲಾಗಿತ್ತು ಎಂದು ಭಾರತದ ವಿದೇಶಾಂಗ ಸಚಿವಾಲಯ ಶನಿವಾರ ತಿಳಿಸಿದೆ.