

ಗೋಣಿಕೊಪ್ಪಲು: ಜಾತಿ, ಧರ್ಮ, ವರ್ಣ ಭೇದಗಳಾಚೆ ನಿಂತು, ನಿಸ್ವಾರ್ಥದಿಂದ ಸಮಾಜ ಸೇವೆಗೆ ಮುಂದಾಗಿ ಎಂದು ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದರು.
ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೊನ್ನಂಪೇಟೆ ತಾಲೂಕು ರೆಡ್‌ಕ್ರಾಸ್ ಸೊಸೈಟಿ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಮಾನವೀಯ ಮೌಲ್ಯಗಳ ಸೇವೆಗಳಿಗೆ ಒಳಪಟ್ಟಿದೆ. ಜಾತಿ, ಧರ್ಮಗಳಿಲ್ಲದ ರಕ್ತದ ಮಹತ್ವವನ್ನು ಅರಿತು ಹೆಚ್ಚು ರಕ್ತದಾನದ ಪ್ರಾಮುಖ್ಯತೆಗೆ ಒತ್ತು ನೀಡಿದೆ. ಈ ಉದ್ದೇಶ ಅರಿತು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನೂತನ ಪದಾಧಿಕಾರಿಗಳಿಂದ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಲೋಪಮುದ್ರಾ ಆಸ್ಪತ್ರೆಯ ಮುಖ್ಯಸ್ಥ ಅಮೃತ್ ನಾಣಯ್ಯ ಮಾತನಾಡಿ, ಪ್ರತಿದಿನ ಹೆಚ್ಚಾಗುತ್ತಿರುವ ಅನಾಹುತ, ಅಪಘಾತಗಳಿಂದ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ತಾಲೂಕಿನಲ್ಲಿ ರಕ್ತದಾನ ಘಟಕವನ್ನ ಪ್ರಾರಂಭಿಸಿದರೆ ಉತ್ತಮ ಕಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳದ ವ್ಯವಸ್ಥೆಯನ್ನು ಮಾಡಲಾಗುವುದು. ಅದರ ಆದೇಶ ಇನ್ನಿತರ ವ್ಯವಸ್ಥೆಯನ್ನು ರೆಡ್ ಕ್ರಾಸ್ ಸಂಸ್ಥೆ ಮುಂದುವರಿಸಿದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಕೊಡಗು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿ ನೊಂದವರಿಗೆ ಸ್ಪಂದಿಸುವ ಕಾರ್ಯ ಕೊಡಗಿನಲ್ಲಿ ಕೊರೊನಾ ಸಂದರ್ಭದಲ್ಲಿ ಅತ್ಯುತ್ತಮ ಗುರಿಯಾಗಿ ಸಮಾಜವನ್ನು ತಲುಪಿದೆ. ಅಂತಹ ಸೇವೆಯನ್ನು ಮುಂದುವರಿಸುವ ಉದ್ದೇಶದೊಂದಿಗೆ ತಾಲೂಕು ಘಟಕಗಳನ್ನ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.
ತಾಲೂಕು ಘಟಕದ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಮೋಹನ್‌ಕುಮಾರ್, ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಉಮಾಕಾಂತ್ ಉಪಸ್ಥಿತರಿದ್ದರು.
ಪದಾಧಿಕಾರಿಗಳ ವಿವರ: ತಾಲೂಕು ಘಟಕದ ಸಭಾಪತಿ ಬಿ.ಎನ್.ಪ್ರಕಾಶ್, ಉಪಸಭಾಪತಿ ಪಾರುವಂಗಡ ದಿಲನ್, ಕಾರ್ಯದರ್ಶಿ ಚಂದನ್‌ಕಾಮತ್, ಸಹಕಾರ್ಯದರ್ಶಿ ಎಂ.ಎಂ.ನಾಗೇಶ್, ಖಜಾಂಚಿ ರಾಜಶೇಖರ್, ನಿರ್ದೇಶಕರಾಗಿ ಡಾ.ಅಮೃತ್ ನಾಣಯ್ಯ, ಎ.ಕೆ.ಗಣೇಶ್‌ಕುಮಾರ್, ಪಿ.ಎಸ್.ಶರತ್‌ಕಾಂತ್ , ಕೆ.ಕೆ.ಸುನಿಲ್, ಮಾದಪ್ಪ ಜಗದೀಶ್ ಜೋಡುಬೀಟಿ, ಗಣೇಶ್ ರೈ, ಕೆ.ಬಿ.ಸಂಜೀವ್, ಎಚ್.ಆರ್.ಸತೀಶ್, ಎನ್.ಆರ್.ಅಮೃತ್‌ರಾಜ್, ಪ್ರಮೋದ್ ಕಾಮತ್, ಕೆ.ಕೆ.ತನ್ವೀರ್, ಸೋಮಯ್ಯ, ಸೋಮಣ್ಣ, ಬಿ.ಎಂ.ಚೇತನ್, ಟಿ.ಜೆ.ಅಂತೋನಿ, ಅಬ್ದುಲ್ ಜಲೀಲ್, ಅಜಿತ್, ಸಂಜೀವ್ ಆಯ್ಕೆಯಾದರು.