ಭೌತಿಕ ಸಂಪತ್ತಿಗಿಂತ ನಿಸ್ವಾರ್ಥ ಸೇವೆಯೇ ಮಿಗಿಲು

TTH (6)
ಮೃಗವಧೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ತೀರ್ಥಹಳ್ಳಿ: ಲೌಕಿಕವಾದ ಜೀವನದಲ್ಲಿ ಗಳಿಸಿದ ಆಸ್ತಿ ಮತ್ತು ಸಂಪತ್ತಿಗಿಂತ ಭಗವಂತನ ಸೇವಾರ್ಥವಾಗಿ ಸಮಾಜಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆ ಹೆಚ್ಚು ಮೌಲಿಕವಾಗಿದೆ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಪುರಾಣ ಪ್ರಸಿದ್ಧ ತಾಲೂಕಿನ ಮೃಗವಧೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಉಮಾ ಸಹಿತ ಮಲಹಾನಿಕರೇಶ್ವರ ಸ್ವಾಮಿಯ ಜೀರ್ಣೋದ್ಧಾರ ಪುನರಷ್ಟಬಂಧ ಪ್ರತಿಷ್ಠಾಪನಾ ಮತ್ತು ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ನೆರವೇರಿಸಿ ಆಶೀರ್ವಚನ ನೀಡಿದರು.

ದೇವರನ್ನು ಆಶ್ರಯಿಸಿದವರಿಗೆ ಅನುಗ್ರಹ ದೊರೆಯುತ್ತದೆ. ನಮ್ಮಲ್ಲಿರುವ ಜನ, ಧನ ಮತ್ತು ಬುದ್ಧಿಬಲದ ಶಕ್ತಿ ಒಳ್ಳೆಯ ಕೆಲಸಗಳಿಗೆ ವಿನಿಯೋಗವಾಗಬೇಕು. ದೇವರಿಗೆ ಪಂಡಿತ-ಪಾಮರ ಎಂಬ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದರು.

ಜೀವಜಲವಾದ ನದಿಯ ನೀರು ಭಗವಂತನ ಅನುಗ್ರಹದಂತೆ ನಿರಂತರವಾಗಿ ಹರಿಯುತ್ತಲೇ ಇರುತ್ತದೆ. ನೀರನ್ನು ತರಲು ಹೋದ ವ್ಯಕ್ತಿ ಬಳಿಯಿರುವ ಪಾತ್ರೆಯ ಅಳತೆಯಂತೆ ಪುಣ್ಯ ಸಂಪಾದನೆ ಆಗುತ್ತದೆ. ಅಂತೆಯೇ ಈ ಪ್ರಪಂಚದಲ್ಲಿ ಆಸ್ತಿ, ಹಣ, ಐಶ್ವರ್ಯ ಸಂಪಾದನೆಗಿಂತ ಭಗವಂತನ ಆರಾಧನೆ ಮೂಲಕ ಗಳಿಸುವ ಪುಣ್ಯ ಸಂಪಾದನೆ ಇನ್ನೊಂದು ಜನ್ಮಕ್ಕೂ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಲೌಕಿಕವಾದ ಎಲ್ಲ ಸಂಪತ್ತನ್ನು ಯಾರು ಬೇಕಾದರೂ ಲಪಟಾಯಿಸಬಹುದು. ಆದರೆ ಪುಣ್ಯ ಸಂಚಯವನ್ನ ಯಾರಿಂದಲೂ ಅಪಹರಿಸಲಾಗದು ಎಂಬ ಅರಿವು ನಮಗಿರಬೇಕು. ಧರ್ಮಾಚರಣೆಗೆ ಲೌಕಿಕ ಕೆಲಸವನ್ನು ತೊರೆಯಬೇಕಾದ ಅಗತ್ಯವಿಲ್ಲ ಮತ್ತು ದಿನವಿಡೀ ಧ್ಯಾನದಲ್ಲೇ ಕುಳಿತಿರಬೇಕೆಂಬ ನಿಯಮವಿಲ್ಲ. ಆದರೆ ಲೌಕಿಕ ಮತ್ತು ವ್ಯಾವಹಾರಿಕ ಬದುಕನ್ನ ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಧಾರ್ಮಿಕ ಕೇಂದ್ರಗಳಿಗೆ ಬರುವಾಗ ಲೌಕಿಕವಾದ ವಿಚಾರಗಳನ್ನು ಹೊರಗಿಟ್ಟು ಬರಬೇಕು ಎಂದು ತಿಳಿಸಿದರು.

ದೇವಸ್ಥಾನದ ವ್ಯವಸ್ಥಾಪನಾ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರಮನೆ ಕೇರಿ ಉದಯಶಂಕರ್, ಧರ್ಮದರ್ಶಿಗಳಾದ ಶಿವಕುಮಾರ್, ಚಿದಂಬರ್, ರವೀಂದ್ರ, ಎಂ.ಕೆ.ನಾಗೇಶ್, ಶ್ರೀಧರಕುಮಾರ್ ಉಡುಪ, ಜಯದೇವ ಭಟ್, ಅನುಪಮಾ, ಗೀತಾ, ಜಯಂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net