

ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿರುವ ಹಾಗೂ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್ 3 ದಿನಗಳಿಂದ ‘ಜನಾಶೀರ್ವಾದ ಯಾತ್ರೆ’ ಮೂಲಕ ರಾಜ್ಯ ಪ್ರದಕ್ಷಿಣೆ ನಡೆಸುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ನಿತ್ಯವೂ ನೂರಾರು ಕಿಮೀ ಪ್ರಯಾಣ ನಡೆಸುವುದರ ಜತೆಗೆ ರೋಡ್ ಶೋ, ವೇದಿಕೆ ಕಾರ್ಯಕ್ರಮ, ಸಂವಾದ ಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. ಈ ಸಮಯದಲ್ಲೇ, ಮೋದಿ ಸರ್ಕಾರದ ಸಾಧನೆಗಳು ಹಾಗೂ ತಮ್ಮ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
#ಕೃಷಿಕರ ಕಲ್ಯಾಣಕ್ಕಾಗಿ ನಿಮ್ಮ ಇಲಾಖೆಯಿಂದ ಏನೆಲ್ಲ ಹೊಸ ಯೋಜನೆ ಜಾರಿಗೊಳಿಸಲಾಗುತ್ತಿದೆ?
ಸದ್ಯ ನಮ್ಮ ದೇಶದ ಖಾದ್ಯ ತೈಲ ಬೇಡಿಕೆಯ ಶೇ.70 ಅನ್ನು ನಾವು ಆಮದಿನಿಂದಲೇ ಪೂರೈಸುತ್ತಿದ್ದೇವೆ. ಈ ಪರಾವಲಂಬನೆ ತಪ್ಪಿಸಿ ಸ್ವಾವಲಂಬನೆ ಸಾಧಿಸಲು ಎಣ್ಣೆಕಾಳುಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಲಾಗುವುದು. ಇದರಿಂದ ವಿದೇಶಿ ವಿನಿಮಯವೂ ಉಳಿತಾಯವಾಗುತ್ತದೆ. ಕಲಬೆರಕೆಯಿಲ್ಲದ ಎಣ್ಣೆಯೂ ಜನರಿಗೆ ದೊರೆತಂತಾಗುತ್ತದೆ.
# ಸ್ವಾಮಿನಾಥನ್ ವರದಿ ಜಾರಿಗೆ ರೈತ ಸಮುದಾಯ ಒತ್ತಾಯಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಹೆಜ್ಜೆ ಏನು?
# ಎನ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ಕೃಷಿಕರಿಗೆ ನೀಡುತ್ತಿ ರುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಮಾನದಂಡ ಪರಿಷ್ಕರಣೆಯಾಗಬೇಕು ಎನ್ನುವ ಕೂಗೆದ್ದಿದೆಯಲ್ಲ...
ಈಚೆಗಷ್ಟೇ ಅತಿವೃಷ್ಟಿ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಎನ್ಡಿಆರ್ಎಫ್ ಮಾರ್ಗಸೂಚಿ ಪರಿಷ್ಕರಿಸುವ ಬಗ್ಗೆ ಪರಿಶೀಲಿಸಲಾಗುವುದು.
# ರೈತರು ಕಾಡುಪ್ರಾಣಿಗಳ ಹಾವಳಿಯಿಂದ ಸಾಕಷ್ಟು ಕಷ್ಟ-ನಷ್ಟ ಅನುಭವಿಸುತ್ತಿದ್ದಾರೆ. ವನ್ಯಜೀವಿಗಳು-ಮಾನವ ಸಂಘರ್ಷಕ್ಕೆ ಪರಿಹಾರ ಏನು?
ಕಾಡಾನೆಗಳು ದೊಡ್ಡ ಪ್ರಮಾಣದಲ್ಲಿ ರೈತರಿಗೆ ನಷ್ಟವುಂಟು ಮಾಡುತ್ತಿವೆ. ಅವು ಅರಣ್ಯದಿಂದ ಹೊರಬರದಂತೆ ಬ್ಯಾರಿಕೇಡ್ ಅಳವಡಿಕೆ, ಕಂದಕ ನಿರ್ಮಾಣ ಹೊರತು ಬೇರೆ ಮಾರ್ಗಗಳಿಲ್ಲ. ಬೆಳೆ ನಷ್ಟ ಸಂದರ್ಭದಲ್ಲಿ ಕೃಷಿಕರಿಗೆ ಪರಿಹಾರ ಒದಗಿಸಲು ಆದ್ಯತೆ ನೀಡಲಾಗುವುದು.
# ಮರಕಡಿತಲೆ ಅನುಮತಿ ದೊರೆಯದೆ ಮಲೆನಾಡು ಭಾಗದ ಕೃಷಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮರ ಮಾರಾಟಕ್ಕೆ ಪರವಾನಗಿಗೆ ಒತ್ತಾಯಿಸುತ್ತಿದ್ದಾರಲ್ಲ...
ಹಲವು ರಾಜ್ಯಗಳಲ್ಲಿ ಮರಕಡಿತಲೆ ನಿಯಮಾವಳಿಗಳನ್ನು ಸಡಿಲಿಸಲಾಗಿದೆ. ಈ ಸಂಬಂಧ ನಾನು ರಾಜ್ಯದ ಅರಣ್ಯ ಸಚಿವರೊಂದಿಗೆ ಮಾತನಾಡಿದ್ದೇನೆ. ಇಲ್ಲಿಯೂ ರೈತರ ಭೂಮಿಯಲ್ಲಿ ಬೆಳೆದಿರುವ ಮರಗಳನ್ನು ಮಾರಾಟ ಮಾಡಿ ಅವರ ಆರ್ಥಿಕ ಅವಶ್ಯಕತೆ ಪೂರೈಸಿಕೊಳ್ಳಲು ಅವಕಾಶ ನೀಡುವ ಸಂಬಂಧ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ರ್ಚಚಿಸಲಾಗುತ್ತಿದೆ. ಶೀಘ್ರವೇ ಈ ಸಂಬಂಧ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.