

ನಂಜನಗೂಡು: ಆತ್ಮ ಸಾಕ್ಷಾತ್ಕಾರವೇ ಪರಮಾರ್ಥಗೀತೆಯಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮಗಳು ತ್ರಿವರ್ಗಕ್ಕೆ ಸೇರಿದರೆ, ಮೋಕ್ಷ ಪ್ರವರ್ಗಕ್ಕೆ ಸೇರಿದೆ. ಪರಮಾರ್ಥಗೀತೆಯು ಶುದ್ಧವಾದ ಮನಸ್ಸು, ಹೃದಯ, ಸದ್ಗುಣಗಳನ್ನು ಹೊಂದಿರುವ ವ್ಯಕ್ತಿಗೆ ಬ್ರಹ್ಮೋಪದೇಶ ಮಾಡುವುದಾಗಿರುತ್ತದೆ ಎಂದು ಬೆಳಗಾವಿ ಜಿಲ್ಲೆಯ ಘೋಡಗೇರಿ ಶಿವಾನಂದ ಮಠದ ಶ್ರೀ ಮಲ್ಲಯ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಸುತ್ತೂರಿನಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ಮಠಾಧಿಪತಿಗಳು, ಮಾತಾಜಿಗಳು, ಆಧ್ಯಾತ್ಮಿಕ ಜಿಜ್ಞಾಸುಗಳು ಹಾಗೂ ಸಾಧಕರಿಗಾಗಿ ಶ್ರೀ ನಿಜಗುಣ ಶಿವಯೋಗಿಗಳವರ ಪರಮಾರ್ಥಗೀತೆ ಕೃತಿಯ ಬಗ್ಗೆ ಏರ್ಪಡಿಸಿರುವ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ನಿಜಗುಣ ಶಿವಯೋಗಿಗಳು ನಾಡು ಕಂಡ ಅಪ್ರತಿಮ ದಾರ್ಶನಿಕರಾಗಿದ್ದು, ಅವರ ಕೃತಿಗಳಾದ ವಿವೇಕ ಚಿಂತಾಮಣಿ, ಪರಮಾರ್ಥ ಪ್ರಕಾಶಿಕೆ, ಅನುಭವಸಾರ, ಕೈವಲ್ಯ ಪದ್ಧತಿ, ಪರಮಾರ್ಥಗೀತೆಗಳು ಬದುಕಿನ ಮೌಲ್ಯಗಳನ್ನು ತಿಳಿಸುವುದಲ್ಲದೆ ಮೋಕ್ಷ ಮಾರ್ಗದ ಕಡೆಗೆ ಕೊಂಡೊಯ್ಯುವ ದಾರಿದೀಪಗಳಾಗಿವೆ ಎಂದರು.
ಪರಮಾರ್ಥಗೀತೆ ಕೃತಿಯು ಕಂದಪದ್ಯ ಹಾಗೂ ರಗಳೆಗಳಿಂದ ಕೂಡಿದ್ದು, ವಸ್ತು-ಶಕ್ತಿ-ದ್ವಿತಯಂ, ಭೂತ ಪಂಚೀಕರಣಂ, ಗುಣಭೇದ ವಿಕಾರಂ, ಪಿಂಡಾಂಡ-ಉದಯ-ವಿಭೇದ, ವಿಶ್ವ ರಚನಾಭೇದಂ, ಬಂಧ ಮೋಕ್ಷ ದ್ವಿಯಯಂ, ಸಾಧಕನ ಸ್ಥಿತಿ, ಯೋಗದ ಕ್ರಮ, ನಿಸ್ಸಂಗ ಯೋಗ, ಚತುರ್ಭೂಮಿಕಾ, ಯೋಗಿವರನ ಚರಿತಂ, ಗತಿಗಳನ್ನು ಹೊಂದಿದೆ ಎಂದು ವಿವರಿಸಿದರು.
ಮೇ 24ರವರೆಗೆ ನಡೆಯುವ ಶಿಬಿರದಲ್ಲಿ ಮೈಸೂರು, ಹಾಸನ, ಧಾರವಾಡ, ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆ, ಬೀದರ್, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಯಾದಗಿರಿ ಜಿಲ್ಲೆಗಳಿಂದ ಹಾಗೂ ಕೇರಳದ ಕಣ್ಣೂರು, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಿಂದ ಮಠಾಧಿಪತಿಗಳು, ಮಾತಾಜಿಗಳು, ಸಾಧಕರು, ಆಧ್ಯಾತ್ಮಿಕ ಜಿಜ್ಞಾಸುಗಳು ಸೇರಿದಂತೆ ಸುಮಾರು 115ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.