ಯುವ ಸಂಸತ್ ಸ್ಪರ್ಧೆಗೆ ಆಯ್ಕೆ ಪ್ರಕ್ರಿಯೆ: ಡಾ.ಮರವಂತೆ ಮಾಹಿತಿ

samsat
ಯುವ ಸಂಸತ್ ಸ್ಪರ್ಧೆಯ ಪೋಸ್ಟರ್‌ನ್ನು ಡಾ. ಶುಭಾ ಮರವಂತೆ, ಡಾ. ಟಿ.ಅವಿನಾಶ್, ಕೆಟಿಕೆ ಉಲ್ಲಾಸ್, ಡಾ. ಪ್ರಕಾಶ್ ಮರ‌್ಗನಳ್ಳಿ, ಡಾ. ಎಚ್.ಕೇಶವ ಬಿಡುಗಡೆ ಮಾಡಿದರು.
Published on

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಆಶಯದಂತೆ 2047ರ ವೇಳೆಗೆ ಒಂದು ಲಕ್ಷ ಜಾಗೃತ ಯುವ ನಾಯಕರನ್ನು ಗುರುತಿಸುವ ಉದ್ದೇಶದಿಂದ ಯುವ ಸಂಸತ್ ಯುವ ಧ್ವನಿಯನ್ನು ದಾಖಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಘಟಕ ಹಾಗೂ ನೆಹರು ಯುವ ಕೇಂದ್ರದ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಗಳು ನಡೆಯಲಿವೆ ಎಂದು ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ತಿಳಿಸಿದರು.

ರಾಜಕೀಯದಲ್ಲಿ ಯುವಜನರ ಪಾಲ್ಗೊಳ್ಳುವಿಕೆ ಅವಶ್ಯ. ಈ ಹಿನ್ನೆಲೆಯಲ್ಲಿ ದೇಶದ ಬಗ್ಗೆ ಯುವಜನರ ಚಿಂತನೆ ಯಾವ ರೀತಿಯಿದೆ ಎಂಬುದನ್ನು ತಿಳಿದುಕೊಳ್ಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗವಹಿಸುವ 18-25 ವರ್ಷದೊಳಗಿನವರು ಒಂದು ನಿಮಿಷದ ವಿಡಿಯೋವನ್ನು ಮೈ ಭಾರತ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕನ್ನಡ, ಇಂಗ್ಲಿಷ್, ಹಿಂದಿ ಸೇರಿ ಯಾವುದೇ ಭಾಷೆಯ ಗರಿಷ್ಠ 25 ಎಂಬಿಯ ಭಾಷಣದ ವಿಡಿಯೋ ಅಪ್ಲೋಡ್ ಮಾಡಬಹುದು. ಇದಕ್ಕೆ ಮಾ.9 ಕಡೇ ದಿನ. ವಿಡಿಯೋ ಆರಂಭದಲ್ಲಿ ಸ್ಪರ್ಧಿಯ ಹೆಸರು, ಜಿಲ್ಲೆ, ರಾಜ್ಯದ ಹೆಸರು, ನೊಡೆಲ್ ಸೆಂಟರ್ ಮಾಹಿತಿ ಇರಬೇಕು. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಅತ್ಯುತ್ತಮ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಮಾ.14 ಹಾಗೂ 15 ರಂದು ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸ್ಪರ್ಧೆ ನಡೆಸಲಾಗುವುದು. ಸ್ಪರ್ಧೆಗೆ ಆಯ್ಕೆಯಾದವರು ಅಂದು ಬೆಳಗ್ಗೆ 9.30ಕ್ಕೆ ಸ್ಥಳದಲ್ಲಿ ಹಾಜರಿರಬೇಕು ಎಂದರು.

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ 10 ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಕಳಿಸಲಾಗುವುದು. ಅಲ್ಲಿ ಮೂರು ಮಂದಿಯನ್ನು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ರಾಷ್ಟ್ರ ಮಟ್ಟದ ಅಂತಿಮ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದವರಿಗೆ ಎರಡು ಲಕ್ಷ, ದ್ವಿತೀಯ 1.50 ಲಕ್ಷ ಹಾಗೂ ತೃತೀಯ ಒಂದು ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು. ಈ ವಿದ್ಯಾರ್ಥಿಗಳು ಸಂಸತ್‌ನಲ್ಲಿ ಮಾತನಾಡುವ ಅವಕಾಶ ಪಡೆಯಲಿದ್ದಾರೆ ಎಂದು ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ಎಚ್.ಕೇಶವ, ಪ್ರಾಚಾರ್ಯ ಡಾ. ಟಿ.ಅವಿನಾಶ್, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಪ್ರಕಾಶ್ ಮರ‌್ಗನಳ್ಳಿ, ನೆಹರು ಯುವ ಕೇಂದ್ರದ ಅಧಿಕಾರಿ ಕೆಟಿಕೆ ಉಲ್ಲಾಸ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net