

ನಂಜನಗೂಡು: ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಶ್ರೀ ಗುರುಮಲ್ಲೇಶ್ವರ ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷೆಯಾಗಿ ಸತತ ಮೂರನೇ ಬಾರಿಗೆ ನಂದಿನಿ ಮಹೇಶ್ ಪುನಾರಾಯ್ಕೆ ಆಗಿದ್ದಾರೆ.
ಕಚೇರಿಯಲ್ಲಿ ಭಾನುವಾರ ಅಧ್ಯಕ್ಷೆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಂದಿನಿ ಮಹೇಶ್ ಹಾಗೂ ರೇಣುಕಾ ಬಸವಣ್ಣ ಸ್ಪರ್ಧಿಸಿದ್ದರು. ಒಟ್ಟು 11 ನಿರ್ದೇಶಕರನ್ನು ಹೊಂದಿರುವ ಸಂಘದಲ್ಲಿ ನಂದಿನಿ ಮಹೇಶ್ ಅವರಿಗೆ 9 ಮತಗಳ ಲಭಿಸುವ ಮೂಲಕ ಅಧ್ಯಕ್ಷೆಯಾಗಿ ಹ್ಯಾಟ್ರಿಕ್ ಜಯ ಸಾಧಿಸಿದರು.
ಇನ್ನು ಸಂಘದ ಉಪಾಧ್ಯಕ್ಷೆಯಾಗಿ ಭ್ರಮರಾಂಭ ಶಿವಕುಮಾರ್, ನಿರ್ದೇಶಕರಾಗಿ ಕೋಮಲ ಮಹಾಲಿಂಗಸ್ವಾಮಿ, ಉಷಾ, ಗುಣವತಿ, ಭಾಗ್ಯ, ಚೈತ್ರಾ, ಶ್ರೀಧರಿ, ರೇಣುಕಾ, ವಸುಂಧರಾ, ರೇಣುಕಾ ಬಸವಣ್ಣ ಆಯ್ಕೆ ಆಗಿರುವುದಾಗಿ ಚುನಾವಣಾಧಿಕಾರಿ ಪವನ್‌ಕುಮಾರ್ ತಿಳಿಸಿದ್ದಾರೆ.
ಇನ್ನು ಮೂರನೇ ಬಾರಿಗೆ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ನಂದಿನಿ ಮಹೇಶ್ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ಕುಟುಂಬವನ್ನು ಮುನ್ನಡೆಸುವಂತಾಗಬೇಕು ಎಂಬ ಆಶಯದೊಂದಿಗೆ ಕಳೆದ 10 ವರ್ಷದ ಹಿಂದೆ ತೆರೆದ ಶ್ರೀ ಗುರುಮಲ್ಲೇಶ್ವರ ವಿವಿಧೋದ್ದೇಶ ಮಹಿಳಾ ಸೌಹಾರ್ದ ಸೊಸೈಟಿಯು ಪ್ರತಿವರ್ಷ ಲಾಭದತ್ತ ಮುನ್ನಡೆಯುತ್ತಿದ್ದು, ಈ ವರ್ಷ 8.76 ಲಕ್ಷ ರೂ. ಲಾಭ ಗಳಿಸಿದೆ. ಮುಂದಿನ ಐದು ವರ್ಷದ ಅವಧಿಯಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದು ಭರವಸೆ ನೀಡಿದರು.
ಕಳೆದ 10 ವರ್ಷಗಳ ಹಿಂದೆ ಮಹಿಳೆಯರು ತಮ್ಮ ಕುಟುಂಬವನ್ನು ಮುನ್ನಡೆಸುವ ನಿಟ್ಟಿನಲ್ಲಿ ಆರ್ಥಿಕವಾಗಿ ಸಬಲರಾಗಬೇಕು ಎಂಬ ಕನಸಿನೊಂದಿಗೆ ತೆರೆಯಲಾದ ಈ ಸೊಸೈಟಿಯಲ್ಲಿ ಸಾವಿರಾರು ಮಹಿಳೆಯರು ಷೇರುದಾರರಾಗಿ ಸಾಲವನ್ನು ಪಡೆಯುತ್ತ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತಿದೆ. ಇದರಿಂದ ಮಹಿಳೆಯರಿಗೂ ಆರ್ಥಿಕ ಶಿಸ್ತು ಹಾಗೂ ಹಣ ಉಳಿತಾಯ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಲು ಸಹಕಾರಿ ಆಗಿದೆ ಎಂದರು.
ಸೊಸೈಟಿಯು ಕೇವಲ ಆರ್ಥಿಕ ವ್ಯವಹಾರವನ್ನಷ್ಟೇ ಮಾಡದೇ ಸಾಮಾಜಿಕ, ಆರೋಗ್ಯ ಹಾಗೂ ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಾಗೃತ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಿದೆ. ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿರುವ ಆತ್ಮತೃಪ್ತಿ ನಮಗಿದೆ. ಇನ್ನು ಸಂಘಕ್ಕೆ ಈಗಾಗಲೇ ಮಹದೇಶ್ವರ ಲೇಔಟ್ ಬಳಿ ನಿವೇಶನವನ್ನು ಮುಡಾದಿಂದ ಖರೀದಿ ಮಾಡಲಾಗಿದ್ದು, ಮುಂದಿನ ಆಡಳಿತ ಮಂಡಳಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವ ಮೂಲಕ ಸ್ವಂತ ಕಾರ್ಯಾಲಯ ಹೊಂದಲು ಮುಂದಿನ ಅವಧಿಯಲ್ಲಿ ಕ್ರಮ ವಹಿಸಲಾಗುವುದು ಎಂದರು.