

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಕಿರಿಯ ಸಹೋದರ ವಿನೋದ್ ಸೆಹ್ವಾಗ್ 7 ಕೋಟಿ ರೂ. ಮೊತ್ತದ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.
ಚಂಡೀಗಢದ ಮನಿಮಜ್ರಾ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣದಲ್ಲಿ ವಿನೋದ್ ಮತ್ತು ಇನ್ನಿಬ್ಬರಾದ ವಿಷ್ಣು ಮಿತ್ತಲ್ ಮತ್ತು ಸುಧೀರ್ ಮಲ್ಹೋತ್ರಾರನ್ನು ಬಂಧಿಸಿದ್ದಾರೆ. ಈ ಮೂವರೂ ಕ್ಸಾಲ್ಟಾ ಫುಡ್ ಆಂಡ್ ಬೆವೆರೇಜಸ್ ಕಂಪನಿಯ ನಿರ್ದೇಶಕರಾಗಿದ್ದಾರೆ. ಹಿಮಾಚಲ ಪ್ರದೇಶ ಮೂಲದ ಉದ್ಯಮಿ ಕೃಷ್ಣನ್ ಮೋಹನ್ ಖನ್ನಾ ಅವರ ಕಾರ್ಖಾನೆಯ ಸರಕುಗಳನ್ನು ಖರೀದಿಸಿ ಕ್ಸಾಲ್ಟಾ ಫುಡ್ ಆಂಡ್ ಬೆವೆರೇಜಸ್ ಕಂಪನಿ ನೀಡಿದ್ದ ತಲಾ 1 ಕೋಟಿ ರೂ. ಮೊತ್ತದ 7 ಚೆಕ್ಗಳೂ ಬೌನ್ಸ್ ಆಗಿದ್ದವು. ಈ ಸಂಬಂಧ ಕೃಷ್ಣ ಮೋಹನ್ ಖನ್ನಾ ಪೊಲೀಸರಿಗೆ ದೂರು ನೀಡಿದ್ದರು. ನಂತರ ವಿನೋದ್ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗಳಿಗೂ ಹಾಜರಾಗಿರಲಿಲ್ಲ.