ಮೈಸೂರು ನಗರದ ಪ್ರಥಮ ಮಹಿಳಾ ಪೊಲೀಸ್ ಆಯುಕ್ತೆಯಾಗಿ ಸೀಮಾ ಲಾಟ್ಕರ್

seema-latkar
Published on

ಮೈಸೂರು: ನಗರದ ನೂತನ ಪೊಲೀಸ್ ಆಯುಕ್ತರಾಗಿ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿಷ್ಣುವರ್ಧನ್ ನೇಮಕಗೊ ಂಡಿದ್ದಾರೆ. ಸೀಮಾ ಲಾಟ್ಕರ್ ನಗರದ ಪ್ರಥಮ ಮಹಿಳಾ ಪೊಲೀಸ್ ಆಯುಕ್ತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 2011ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಸೀಮಾ ಲಾಟ್ಕರ್ ಅವರನ್ನು ನಗರ ಪೊಲೀಸ್ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದ್ದು, ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ರಮೇಶ್ ಅವರನ್ನು ದಾವಣಗೆರೆ ರಾಜ್ಯ ಪೂರ್ವ ವಲಯದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ನಗರ ಪೊಲೀಸ್ ಆಯುಕ್ತರಾಗಿ ಇದುವರೆಗೆ ಪುರುಷ ಅಧಿಕಾರಿಗಳೇ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಥಮ ಬಾರಿಗೆ ಮಹಿಳಾ ಅಧಿಕಾರಿಯನ್ನು ಆಯುಕ್ತರಾಗಿ ನೇಮಿಸಲಾಗಿದೆ. ಹಲವಾರು ಬಾರಿ ನಗರದ ಡಿಸಿಪಿಯಾಗಿ ಮಹಿಳಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ಆಯುಕ್ತರಾಗಿ ಸೇವೆ ಸಲ್ಲಿಸುವ ಅವಕಾಶ ಇದುವರೆಗೆ ದೊರೆತ್ತಿರಲಿಲ್ಲ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಲ್ಲಿದ್ದ ಸೀಮಾ ಲಾಟ್ಕರ್ ವರ್ಗಾವಣೆಯಿಂದ ತೆರವಾದ ಜಾಗಕ್ಕೆ 2012ನೇ ಬ್ಯಾಚಿನ ಐಪಿಎಸ್ ಅಧಿಕಾರಿ ವಿಷ್ಣುವರ್ಧನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ವಿಷ್ಣುವರ್ಧನ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ನಗರದಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net