ವಿದೇಶಿ ಉದ್ಯೋಗ ಅರಸಿಕೊಂಡು ಹೋಗಿ ಅರಿವಿಲ್ಲದೆ ಮಾರಾಟವಾಗಿದ್ದೆ !

N R Pura Ashok
Published on

ಬೆಂಗಳೂರು: ಮನೆಯ ಆರ್ಥಿಕ ಸಂಕಷ್ಟ ಪರಿಸ್ಥಿತಿಯ ಮಧ್ಯೆ ಸಾಮಾಜಿಕ ಜಾಲ ತಾಣದ ಮೂಲಕ ಕೆಲಸಕ್ಕೆ ಅರ್ಜಿ ಸಲ್ಲಿಸಿದೆ. ಪರಿಚಯಸ್ಥರಿಬ್ಬರು ನನ್ನನ್ನು ಕಾಂಬೋಡಿಯಾಕ್ಕೆ ಕಳುಹಿಸಿದರು. ಅಲ್ಲಿಗೆ ಕಾಲಿಡುತ್ತಿದ್ದಂತೆ ಮಧ್ಯವರ್ತಿಗಳು ನನ್ನ ಪಾರ್ಸ್‌ಪೋರ್ಟ್, ವೀಸಾವನ್ನು ಬಲವಂತವಾಗಿ ಕಿತ್ತುಕೊಂಡರು.

ಇದು, ಕಾಂಬೋಡಿಯಾದಿಂದ ಸುರಕ್ಷಿತವಾಗಿ ತಾಯ್ನಡಿಗೆ ಮರಳಿದ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕು ಮಾಗುಂಡಿ ಗ್ರಾಮದ ಅಶೋಕ್ ಎಂಬ ಯುವಕನ ಕಹಿ ಅನುಭವದ ಮೊದಲಾಂಶ.

ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿರುವ ಅನಿವಾಸಿ ಭಾರತೀಯ ಸಮಿತಿ ಕಚೇರಿಯಲ್ಲಿ ತಮ್ಮ ಅನುಭವಗಳನ್ನು ಎಳೆ ಎಳೆಯಾಗಿ ವಿವರಿಸಿದ ಅಶೋಕ್, ಪಾಸ್‌ಪೋರ್ಟ್, ವೀಸಾ ಕಿತ್ತುಕೊಂಡ

ಬಗ್ಗೆ ಕೇಳಿದರೆ ಯಾವುದೇ ಮಾಹಿತಿ ನೀಡಲಿಲ್ಲ, ನನ್ನ ಅರಿವಿಗೆ ಬಾರದಂತೆ ಚೀನಾ ದೇಶದ ಸೈಬರ್ ಹ್ಯಾಕರ್‌ಗಳಿಗೆ ನನ್ನನ್ನು ಮಾರಾಟ ಮಾಡಿದ್ದರು !.

ದೇಶ, ರಾಜ್ಯದ ನಿರುದ್ಯೋಗ ಯುವತಿ, ಯುವಕರನ್ನು ಗುರಿಯಾಗಿಸಿಕೊಂಡು ಹೊರದೇಶಗಳಿಗೆ ಕರೆಸಿ ಮಾರಾಟ ಮಾಡುವ ಜಾಲವೊಂದು ಸಕ್ರಿಯವಾಗಿದ್ದು, ಇದರ ಹಿಂದೆ ಪ್ರಭಾವಿಗಳಿರುವಂತಿದೆ ಎಂಬ ಸಂದೇಹ ವ್ಯಕ್ತಪಡಿಸಿ, ಇಂತಹ ಪ್ರಕರಣಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ವಂಚನೆ ತಡೆಗಟ್ಟಲು ಪ್ರತ್ಯೇಕ ಸಮಿತಿಗಳನ್ನು ರಚಿಸಬೇಕು ಎಂದು ಮೊರೆಯಿಟ್ಟರು.

ಡೇಟಿಂಗ್ ಆ್ಯಪ್ ನಿರ್ವಹಣೆಗೆ ಒತ್ತಡ

ಮೂರು ತಿಂಗಳು ಸತತ ಸೈಬರ್ ಹ್ಯಾಕರ್‌ಗಳು ಅತಿ ಹೆಚ್ಚು ಜನಪ್ರಿಯ ಪಡೆದಿರುವ ಡೇಟಿಂಗ್ ಆ್ಯಪ್‌ಗಳ ನಕಲಿ ಖಾತೆ ನಿರ್ವಹಿಸಲು ಸೂಚಿಸಿದರು ಆರಂಭದಲ್ಲಿ ಒಪ್ಪದಿದ್ದಾಗ ಹಲ್ಲೆ ನಡೆಸಿ, ಚಿತ್ರಹಿಂಸೆ ನೀಡುತ್ತಿದ್ದರು.

ಡೇಟಿಂಗ್ ಆ್ಯಪ್‌ಗಳಲ್ಲಿ ಯುವತಿಯರ ಚಿತ್ರಗಳನ್ನು ಬಳಸಿ ಗ್ರಾಹಕರಿಗೆ ಸಂದೇಶಗಳನ್ನು ರವಾನಿಸಬೇಕಾಗಿತ್ತು. ಅಷ್ಟೇ ಅಲ್ಲ, ಅತ್ಯಂತ ಗೌಪ್ಯವಾಗಿರಬೇಕಾದ ಪ್ರತಿಯೊಬ್ಬರ ವೈಯುಕ್ತಿಕ ಮಾಹಿತಿಯೂ ಹ್ಯಾಕರ್‌ಗಳ ಕೈಸೇರಿದೆ ಎಂದು ಅಶೋಕ್ ಆತಂಕಕಾರಿ ಮಾಹಿತಿ ಹೊರಗೆಡವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net