ಬೀಜ, ಗೊಬ್ಬರದ ದರಪಟ್ಟಿ ದಾಸ್ತಾನು ಪ್ರದರ್ಶಿಸಲು ಸೂಚನೆ

29-RNR-05
Published on

ರಾಣೆಬೆನ್ನೂರ: ಬೀಜ, ರಸಗೊಬ್ಬರ ಮಾರಾಟಗಾರರು ಅಂಗಡಿಗಳ ಎದುರು ಬೀಜದ ದರಪಟ್ಟಿ ಮತ್ತು ದಾಸ್ತಾನು ವಿವರ ಪ್ರದರ್ಶನ ಮಾಡಬೇಕು. ಇಲ್ಲವಾದರೆ ವ್ಯಾಪಾರಸ್ಥರ ಪರವಾನಗಿಯನ್ನು 15 ದಿನಗಳ ಕಾಲ ಅಮಾನತ್ತು ಗೊಳಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಎಚ್ಚರಿಸಿದರು.
ನಗರದ ಸಹಾಯಕ ಕೃಷಿ ಇಲಾಖೆ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಬೀಜ, ಗೊಬ್ಬರ ಹಾಗೂ ಕೃಷಿ ಪರಿಕರಗಳ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಅವರು, ದರಪಟ್ಟಿ ಹಾಗೂ ದಾಸ್ತಾನು ವಿವರ ಪ್ರದರ್ಶನ ಮಾಡದ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದರು.
ಮುಂಗಾರು ಹಂಗಾಮಿನಲ್ಲಿ ಕೃಷಿ ಪರಿಕರ ಮಾರಾಟಗಾರರು ಗುಣಮಟ್ಟದ ಎಲ್ಲ ತರಹದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರಿಗೆ ಸರಿಯಾದ ಸಮಯಕ್ಕೆ ಮತ್ತು ಸರ್ಕಾರ ನಿಗದಿಪಡಿಸಿದ ಮಾರಾಟದ ಬೆಲೆಗೆ ಮಾರಾಟ ಮಾಡಬೇಕು. ಕೃಷಿ ಪರಿಕರ ಮಾರಾಟಗಾರರು ಪಿ.ಓ.ಎಸ್‌ನಲ್ಲಿ ಇರುವ ರಸಗೊಬ್ಬರದ ದಾಸ್ತಾನನ್ನು ತಮ್ಮ ಭೌತಿಕ ದಾಸ್ತಾನಿಗೆ ತಕ್ಕಂತೆ ನಿರ್ವಹಿಸಬೇಕು. ಟಾಪ್-20 ಯೂರಿಯಾ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.
ಕೃಷಿ ಪರಿಕರ ಮಾರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ಅಧಿಕಾರಿಗಳು ಸೂಚಿಸಿದಂತೆ ಕೃಷಿ ಪರಿಕರಗಳ ದರಪಟ್ಟಿ, ದಾಸ್ತಾನು ವಿವರಗಳನ್ನು ರೈತರಿಗೆ ಕಾಣಿಸುವಂತೆ ಪ್ರದರ್ಶಿಸಬೇಕು. ಅಧಿಕಾರಿಗಳು ಹೇಳಿದ ಮಾತಿಗೆ ಬದ್ಧರಾಗಿರಬೇಕು ಎಂದರು.
ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ, ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ಸಹಾಯಕ ಕೃಷಿ ನಿರ್ದೇಶಕ (ವಿಚಕ್ಷಣದಳ) ಶಿವಲಿಂಗಪ್ಪ, ಕೃಷಿ ತಾಂತ್ರಿಕ ಅಧಿಕಾರಿ ಶಿವಾನಂದ ಹಾವೇರಿ, ಅರವಿಂದ ಎಂ., ವಿರೇಶ ಜೆ.ಎಂ., ಜಗದೀಶ ಬಣಕಾರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net