

ಬೆಂಗಳೂರು: ನಗರ ಸಂಸ್ಕೃತಿಗಿಂತ ದೇಸಿ ಜೀವನ ಶೈಲಿ, ಹಳ್ಳಿ ಸೊಗಡಿನ ಆಹಾರ- ವಿಹಾರ- ವಿಚಾರ ಮುಂತಾದವುಗಳೇ ಮುಖ್ಯ ಎಂಬ ಪಾಠವನ್ನು ಕರೊನಾ ವೈರಸ್ ಈಗ ನಮಗೆಲ್ಲ ಕಲಿಸಿದೆ ಎಂದು ಬಿಜೆಪಿ ಹಿರಿಯ ನಾಯಕ ಬಸವರಾಜ ಪಾಟೀಲ್ ಸೇಡಂ ಅಭಿಪ್ರಾಯಪಟ್ಟಿದ್ದಾರೆ.
‘‘ಕರೊನಾ ಹಾವಳಿಯಿಂದ ಇನ್ನು 3-4 ತಿಂಗಳಲ್ಲಿ ನಮ್ಮ ದೇಶ ಸ್ವಲ್ಪಸ್ವಲ್ಪ ಹೊರಬರಬಹುದು.ಆದರೆ ಅದರ ಪರಿಣಾಮ ಇನ್ನೂ 3-4 ವರ್ಷವಾದರೂ ಇರುತ್ತದೆ. ಈ ಸಂದರ್ಭದಲ್ಲಿ ಅದು ಜನರಿಗೆ ಅನೇಕ ಪಾಠಗಳನ್ನು ಕಲಿಸುತ್ತಿದೆ’’ ಎಂದು ಬಸವ ಜಯಂತಿ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ಅವರು ತಿಳಿಸಿದ್ದಾರೆ.
‘‘ಆಗರ್ಭ ಶ್ರೀಮಂತರಿರುವ ಫ್ರಾನ್ಸ್ ಈಗ ಸರ್ವನಾಶದ ಹಾದಿಯಲ್ಲಿದೆ. ಅಮೆರಿಕ ಕೂಡ ದಯನೀಯ ಸ್ಥಿತಿಯಲ್ಲಿದೆ. ತೈಲರಾಷ್ಟ್ರವಾದ ಇರಾನ್ ಸ್ಥಿತಿಯೂ ಅದೇ ಆಗಿದೆ. ಸೂರ್ಯ ಮುಳುಗದ ಸಾಮ್ರಾಜ್ಯ ಎಂಬ ಹೆಗ್ಗಳಿಕೆ ಹೊತ್ತಿದ್ದ ಇಂಗ್ಲೆಂಡ್ ಕೂಡ ತತ್ತರಿಸಿದೆ. ಭಾರತದಲ್ಲಿ ಈ ಪೀಡೆಯಿಂದ ನಮಗೆ ಬೇಗ ಮುಕ್ತಿ ಸಿಕ್ಕರೂ ಇಡೀ ಜಗತ್ತಿಗೆ ಇದರಿಂದ ಮುಕ್ತಿ ಸಿಗುವವರೆಗೂ ನಮಗೆ ಮುಕ್ತಿ ಸಿಕ್ಕಂತಾಗುವುದಿಲ್ಲ’’ ಎಂದಿದ್ದಾರೆ.
‘‘ನ್ಯೂಯಾರ್ಕ್‌ನಲ್ಲಂತೂ ಪ್ರತಿದಿನ ಹೆಣಗಳ ರಾಶಿಯೇ ಬೀಳುತ್ತಿದೆ. ಅಲ್ಲಿನ ಪ್ರಸಿದ್ಧ ವೃತ್ತವೊಂದರಲ್ಲಿ 80 ಅಂತಸ್ತುಗಳ ಒಂದು ಹೊಟೇಲ್ ಇದೆ. ಅದರ ಮಾಲೀಕನ ಕುಟುಂಬದವರು ಒಬ್ಬೊಬ್ಬರಾಗಿ ಕರೊನಾಕ್ಕೆ ಬಲಿಯಾಗಿದ್ದಾರೆ. ಇದರಿಂದ ಮನ ನೊಂದ ಸಾವಿರಾರು ಕೋಟಿಯ ಒಡೆಯನಾದ ಆ ಹೊಟೇಲ್ ಮಾಲೀಕ ಕೂಡ ಹೊಟೇಲಿನ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾನೆ. ಈ ಸಂಕಷ್ಟ ಕಾಲದಲ್ಲಿ ಸಂಪತ್ತು ಎಂಬುದು ನಿಷ್ಪ್ರಯೋಜಕ ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ’’ ಎಂದು ಹೇಳಿದ್ದಾರೆ.
‘‘ಭಾರತದಲ್ಲಿ ಹಳ್ಳಿಗಳ ಮಹತ್ವ ಈಗ ಎಲ್ಲರಿಗೂ ಅರಿವಾಗತೊಡಗಿದೆ. ನಗರಗಳಲ್ಲಿ ವಾಸಿಸುತ್ತಿದ್ದವರು ಕರೊನಾದಿಂದಾಗಿ ಸಾವಿರಾರು ಕಿಲೋಮೀಟರ್‌ನಷ್ಟು ದೂರ ನಡೆದುಕೊಂಡೇ ತಮ್ಮ ಹಳ್ಳಿಗಳಿಗೆ ಬರುತ್ತಿದ್ದಾರೆ. ಆದರೆ ಈವರೆಗೆ ಆ ನಗರವಾಸಿಗಳನ್ನು ದೊಡ್ಡ ಸ್ಥಾನದಲ್ಲಿ ನೋಡುತ್ತಿದ್ದ ಹಳ್ಳಿಯವರು ಅವರನ್ನು ಒಳಗೆ ಬಿಟ್ಟುಕೊಳ್ಳುವುದಕ್ಕೂ ಹಿಂಜರಿಯುವಂತಾಗಿದೆ. ಎಂಥ ವಿಪರ್ಯಾಸ’’ ಎಂದಿದ್ದಾರೆ.
‘‘ಇದರ ಹಿಂದಿನ ಮರ್ಮ ತಿಳಿದು ಹೊಸ ಬದುಕಿನೆಡೆಗೆ ನಾವೆಲ್ಲ ಹೆಜ್ಜೆ ಇಡಬೇಕಾಗಿದೆ. ದೇಸಿತನವನ್ನು ರೂಢಿಸಿಕೊಳ್ಳಬೇಕಾಗಿದೆ. ನಗರವಾಸಿಗಳೂ ಇತ್ತ ಗಮನ ಹರಿಸಬೇಕಾಗಿದೆ. ದೊಡ್ಡ ದೊಡ್ಡ ಆಸ್ಪತ್ರೆಗಳೂ ಕೆಲಸಕ್ಕೆ ಬರುವುದಿಲ್ಲ ಎಂಬುದು ಈಗ ಸಾಬೀತಾಗಿದೆ. ಕೊನೆಗೂ ನಮ್ಮ ಅಡುಗೆ ಮನೆಯಲ್ಲಿರುವ ಶುಂಠಿ, ಬೆಳ್ಳುಳ್ಳಿ, ಉಪ್ಪು, ನಿಂಬೆ ಮುಂತಾದವುಗಳೇ ಪ್ರಯೋಜನಕಾರಿ ಎಂಬುದು ಮನವರಿಕೆಯಾಗುತ್ತಿದೆ. ಹಾಗಾಗಿ ನಾವೆಲ್ಲ ನಮ್ಮ ಜೀವನಶೈಲಿ, ಆಹಾರ ಶೈಲಿಯನ್ನು ಮುಂದಿನ ದಿನಗಳಲ್ಲಿ ಬದಲಿಸಿಕೊಳ್ಳಬೇಕಿದೆ. ಕೃಷಿ, ಶಾಲಾ-ಕಾಲೇಜು ಮುಂತಾದವುಗಳ ಕಾರ್ಯ ಚಟುವಟಿಕೆಯನ್ನು ಮಾರ್ಪಡಿಸಿಕೊಳ್ಳಬೇಕಾಗಿದೆ. ಕಾಯಕ, ದುಡಿಮೆಯ ಮಹತ್ವವನ್ನು ಅರಿತುಕೊಳ್ಳಬೇಕಾಗಿದೆ’’ ಎಂದು ಹೇಳಿದ್ದಾರೆ.