

Shefali Jariwala: ಕನ್ನಡ ಚಿತ್ರರಂಗದ ನಟ, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ಹುಡುಗರು' ಚಿತ್ರದಲ್ಲಿ 'ತೊಂದ್ರೆ ಇಲ್ಲ ಪಂಕಜಾ' ಹಾಡಿಗೆ ಜಬರ್ದಸ್ತ್ ಹೆಜ್ಜೆ ಹಾಕಿದ್ದ ಬಾಲಿವುಡ್ ಬೆಡಗಿ ಶೆಫಾಲಿ ಜರಿವಾಲಾ (42) ನಿನ್ನೆ (ಜೂ.27) ತಡರಾತ್ರಿ ಹಠಾತ್ ಹೃದಯಾಘಾತಕ್ಕೆ ಕೊನೆಯುಸಿರೆಳೆದಿದ್ದಾರೆ.
ನಟಿ ಮತ್ತು ರೂಪದರ್ಶಿಯಾಗಿದ್ದ ಶೆಫಾಲಿ, ನಿನ್ನೆ ರಾತ್ರಿ ನಿಧನರಾಗಿದ್ದಾರೆ. ನಟಿಯ ಅಕಾಲಿಕ ಮರಣಕ್ಕೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಶೆಫಾಲಿ ಮತ್ತು ಅವರ ಪತಿ ಪರಾಗ್ ತ್ಯಾಗಿ ಮುಂಬೈನ ಅಂಧೇರಿ ಲೋಖಂಡ್ವಾಲಾ ಪ್ರದೇಶದ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ನಟಿ ಸಾಯುವ ಮುನ್ನ ಅವರನ್ನು ನೋಡಿದ್ದ ಸೆಕ್ಯೂರಿಟಿ ಗಾರ್ಡ್ ಶತ್ರುಘ್ನ, ಏನಾಯಿತು ಎಂಬುದರ ಬಗ್ಗೆ ತಮ್ಮ ಹೇಳಿಕೆಯನ್ನು ನೀಡಿದ್ದಾರೆ.
"ಸಮಯ ಸುಮಾರು ರಾತ್ರಿ 10:30 ಆಸುಪಾಸು. ಅವರ ಪತಿ ಶೆಫಾಲಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಅದಕ್ಕೂ ಮೊದಲು, ರಾತ್ರಿ 9 ಗಂಟೆ ಸುಮಾರಿಗೆ, ಅವರ ಪತಿ ಪರಾಗ್ ತ್ಯಾಗಿ ಬೈಕ್ನಲ್ಲಿ ಅಪಾರ್ಟ್ಮೆಂಟ್ಗೆ ಆಗಮಿಸಿದರು. ಈ ವೇಳೆ ನಾನೇ ಅವರಿಗೆ ಗೇಟ್ ಓಪನ್ ಮಾಡಿದೆ. ನಿನ್ನೆ ಸಂಜೆಯಷ್ಟೇ, ಶೆಫಾಲಿ ಮತ್ತು ಪರಾಗ್ ಅವರು ಸೊಸೈಟಿ ಕಾಂಪೌಂಡ್‌ನಲ್ಲಿ ತಮ್ಮ ಶ್ವಾನದೊಂದಿಗೆ ಓಡಾಡುತ್ತಿದ್ದರು. ಇದಕ್ಕೂ ಮುನ್ನ ಈ ವಾರದ ಆರಂಭದಲ್ಲಿ ದಂಪತಿಗಳನ್ನು ಒಟ್ಟಿಗೆ ನೋಡಿದ್ದೆ" ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿದ್ದಾರೆ.
ಹೃದಯಾಘಾತದ ಬೆನ್ನಲ್ಲೇ ಶೆಫಾನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಪತಿ ಪರಾಗ್ಗೆ ದೃಢಪಡಿಸಿದ್ದಾರೆ. ನಟಿಯ ಮೃತದೇಹವನ್ನು ಇದೀಗ ಮರಣೋತ್ತರ ಪರೀಕ್ಷೆಗಾಗಿ ಮುಂಬೈನ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ,(ಏಜೆನ್ಸೀಸ್).