

ಲಕ್ಷ್ಮೇಶ್ವರ: ತಾಲೂಕಿನ 13 ಗ್ರಾಮ ಪಂಚಾಯಿತಿಯ 167 ಸದಸ್ಯ ಸ್ಥಾನಗಳಿಗೆ ಮಂಗಳವಾರ ಮತದಾನವಾಗಿದ್ದು, 81 ಮತಪೆಟ್ಟಿಗೆಗಳು ಪುರಸಭೆ ಕಲಾ ಮಹಾವಿದ್ಯಾಲಯದ ಸ್ಟ್ರಾಂಗ್ರೂಂನಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಭದ್ರವಾಗಿವೆ.
ತಾಲೂಕಿನಲ್ಲಿ ಶೇ. 78.25ರಷ್ಟು ಮತದಾನವಾಗಿದೆ. 512 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಗೋವನಾಳ ಗ್ರಾಪಂ ವ್ಯಾಪ್ತಿಯ ಗುಲಗಂಜಿಕೊಪ್ಪ ಗ್ರಾಮದ ಮತಕೇಂದ್ರ ಸಂಖ್ಯೆ 37 ರಲ್ಲಿ ಶೇ.94.56ರಷ್ಟು ಮತದಾನವಾಗಿದ್ದು, ತಾಲೂಕಿನಲ್ಲಿಯೇ ಹೆಚ್ಚು ಮತದಾನವಾದ ಕೇಂದ್ರವಾಗಿದೆ. ಶಿಗ್ಲಿಯ ಮತಕೇಂದ್ರ ಸಂಖ್ಯೆ 52-ಎ ದಲ್ಲಿ ಶೇ. 62.23ರಷ್ಟಾಗಿದ್ದು ಅತ್ಯಂತ ಕಡಿಮೆ ಮತದಾನದ ಕೇಂದ್ರವಾಗಿದೆ.
ಪು. ಬಡ್ನಿಯ ಮಾಜಿ ಶಾಸಕರ ಪುತ್ರ, ಶಿಗ್ಲಿ ತಾಪಂ ಸದಸ್ಯ, ಇಂಜಿನಿಯರ್ ಸೇರಿದಂತೆ ಇತರ ವಿಭಾಗಗಳ ಪದವೀಧರರು, ಈ ಹಿಂದೆ ಗ್ರಾಪಂಗೆ ಚುನಾಯಿತರಾಗಿದ್ದು, ಪುನರಾಯ್ಕೆ ಬಯಸಿದವರು, ಕೃಷಿ ಕೂಲಿಕಾರರು ಸೇರಿದಂತೆ ಹಲವರು ಕಣದಲ್ಲಿದ್ದಾರೆ. ಇವರೆಲ್ಲರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು ಡಿ. 30 ರಂದು ಭವಿಷ್ಯ ನಿರ್ಧಾರವಾಗಲಿದೆ.
ಈ ಮೊದಲು ಗ್ರಾಪಂ, ತಾಪಂ, ಪುರಸಭೆ ಚುನಾವಣೆಗೆ ಮಸ್ಟರಿಂಗ್- ಡಿ ಮಸ್ಟರಿಂಗ್ ಮತ್ತು ಮತ ಎಣಿಕೆ ಕಾರ್ಯ ಶಿರಹಟ್ಟಿಯಲ್ಲಿ ನಡೆಯುತ್ತಿತ್ತು. ಆದರೆ ಈಗ ಲಕ್ಷ್ಮೇಶ್ವರ ತಾಲೂಕು ಕೇಂದ್ರವಾದ ಬಳಿಕ ಇದೇ ಮೊದಲ ಬಾರಿ ಗ್ರಾಪಂ ಚುನಾವಣೆ ಪ್ರಕ್ರಿಯೆ ಲಕ್ಷ್ಮೇಶ್ವರದಲ್ಲಿ ನಡೆಯುತ್ತಿದೆ. ತಾಲೂಕಿನಲ್ಲಿ ಒಟ್ಟು 14 ಗ್ರಾಮ ಪಂಚಾಯಿತಿಗಳಿದ್ದು ಬಟ್ಟೂರ ಗ್ರಾಪಂಗೆ ಚುನಾವಣೆ ನಡೆದಿಲ್ಲ.
ಎಸ್ಪಿ ಯತೀಶ್ ಎನ್ ಅವರ ಮಾರ್ಗದರ್ಶನ ದಲ್ಲಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರದಲ್ಲಿ ಮತಪೆಟ್ಟಿಗೆ ಭದ್ರತಾ ಕೊಠಡಿಗೆ ಕಾವಲು ತಂಡ ನೇಮಿಸಲಾಗಿದೆ. ಸ್ಟ್ರಾಂಗ್ ರೂಂ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. | ವಿಕಾಸ ಲಮಾಣಿ, ಸಿಪಿಐ ಶಿರಹಟ್ಟಿ ವೃತ್ತ
ಗೆಲ್ಲುವ ಲೆಕ್ಕಾಚಾರ: ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಬೆಂಬಲಿಗರೊಂದಿಗೆ ಕಾಲಿಗೆ ಚಕ್ರಕಟ್ಟಿಕೊಂಡಂತೆ ಹಗಲೂ-ರಾತ್ರಿ ಪ್ರಚಾರದಲ್ಲಿ ತೊಡಗಿದ್ದ ಅಬ್ಯರ್ಥಿಗಳು ಚುನಾವಣೆ ನಂತರ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಸಮುದಾಯ ಭವನ, ದೇವಸ್ಥಾನ, ಕಟ್ಟೆ ಇತರ ಸ್ಥಳಗಳಲ್ಲಿ ಆತ್ಮೀಯರೊಂದಿಗೆ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಜಾತಿ, ಕುಟುಂಬ, ಬಂಧು-ಬಳಗ, ಸ್ನೇಹಿತರು, ಪಕ್ಷದವರು ಯಾರು ಬೆಂಬಲ ನೀಡಿದ್ದಾರೆ? ಯಾರು ಬೆಂಬಲಿಸಿಲ್ಲ? ಎನ್ನುವ ವಿಷಯಗಳು ಚರ್ಚೆಯಾಗುತ್ತಿವೆ.
ಗಮನಾರ್ಹ ಪ್ರಣಾಳಿಕೆ
ರೋಣ: ತಾಲೂಕಿನಲ್ಲಿ ಹಳ್ಳಿ ರಾಜಕೀಯ ರಂಗೇರುತ್ತಿದೆ. ಪಕ್ಷಗಳ ನೇರ ಪಾಲ್ಗೊಳ್ಳುವಿಕೆಗೆ ಅವಕಾಶವಿಲ್ಲದಿದ್ದರೂ ರಾಜಕೀಯ ಮುಖಂಡರಿಗೆ ಇದು ಪ್ರತಿಷ್ಠೆಯಾಗಿದೆ. ಪ್ರಚಾರ, ಮತಯಾಚನೆಯ ಭರಾಟೆಯಲ್ಲಿ ಅಭಿವೃದ್ಧಿಯ ನೈಜ ವಿಚಾರಗಳು ಗೌಣವಾಗುತ್ತಿವೆ.
ಗ್ರಾಮೀಣ ಭಾಗದಲ್ಲಿ ಬೀದಿ ದೀಪದ ವ್ಯವಸ್ಥೆ ಇದೆಯಾದರೂ ಬೆಳಕು ಸೂಸುವುದು ಅಪರೂಪ. ನೀರಿನ ಸೌಲಭ್ಯಕ್ಕಾಗಿ ಟ್ಯಾಂಕ್ ನಿರ್ವಿುಸಲಾಗಿದೆಯಾದರೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ವಸತಿ ಸೌಲಭ್ಯಕ್ಕೆ ಕಾಯುತ್ತಿರುವ ಬಡವರ ಸಂಖ್ಯೆ ಹೆಚ್ಚಾಗಿದೆ. ತಾಲೂಕಿನ ಬಹುತೇಕ ಗ್ರಾಮಗಳು ಬಹಿರ್ದೆಸೆ ಮುಕ್ತ ಗ್ರಾಮ ಎಂಬ ಹಣೆಪಟ್ಟಿ ಅಂಟಿಸಿಕೊಂಡಿವೆ. ಆದರೆ ಬಹುತೇಕ ಮನೆಗಳಿಗೆ ಇನ್ನೂ ಶೌಚಗೃಹದ ಸೌಲಭ್ಯ ಸಿಕ್ಕಿಲ್ಲ. ಈ ಎಲ್ಲ ಅಭಿವೃದ್ಧಿಯ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ ಎಂಬ ಮಾತು ಗ್ರಾಮೀಣ ಭಾಗದಲ್ಲಿ ಕೇಳಿ ಬರುತ್ತಿದೆ. ಇದಕ್ಕೆಲ್ಲ ಅಪವಾದ ಎನ್ನುವಂತೆ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಹತ್ತು ಜನ ಸಮಾನ ಮನಸ್ಕರ ತಂಡ ರೂಪಿಸಿದ ‘ನಮ್ಮ ಗ್ರಾಮ, ನಮ್ಮ ವಚನ’ ಎನ್ನುವ ಪ್ರಣಾಳಿಕೆ ಎಲ್ಲರ ಗಮನ ಸೆಳೆದಿದೆ.
‘ಹಿಂದಿನಿಂದಲೂ ಪ್ರಣಾಳಿಕೆ ಬಿಡುಗಡೆ ಮಾಡಿ, ಗ್ರಾಮದ ಕುರಿತಾಗಿ ಒಂದು ಸಮಗ್ರ ಅಭಿವೃದ್ಧಿಯ ಮುನ್ನೋಟ ನೀಡುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಸಮಾನ ಮನಸ್ಕರ ತಂಡದಿಂದ ಎರಡು ಬಾರಿ ಗ್ರಾಪಂಗೆ ಆಯ್ಕೆಯಾಗಿ ಮೂರನೇ ಬಾರಿಗೆ ಸ್ಪರ್ಧಿಸಿರುವ ಗ್ರಾಮದ ಅಭ್ಯರ್ಥಿಯೊಬ್ಬರು ತಿಳಿಸಿದರು.
2010 ರಿಂದ 12ರವರೆಗೆ ಗ್ರಾಪಂನಲ್ಲಿ ಆಡಳಿತ ನಡೆಸಿದ ಈ ಯುವಕರ ತಂಡ ಬೆಳವಣಿಕಿ ಗ್ರಾಮದಲ್ಲಿ 8 ಎಕರೆ ಜಮೀನು ಖರೀದಿಸಿ ಗ್ರಾಮ ಸಭೆಯಲ್ಲಿ ವಸತಿ ರಹಿತರನ್ನು ಗುರುತಿಸಿ 150 ಆಶ್ರಯ ಮನೆಗಳನ್ನು ಹಂಚಿದೆ. ಅಲ್ಲದೆ, ಉದ್ಯೋಗ ಖಾತ್ರಿ ಯೋಜನೆಯನ್ನು ಇಡೀ ಜಿಲ್ಲೆಯಲ್ಲಿಯೇ ಅತ್ಯುತ್ತಮವಾಗಿ ನಿರ್ವಹಿಸುವ ಮೂಲಕ ನಿತ್ಯ ಸಾವಿರಾರು ಜನರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ ಎಂದು ನಿವಾಸಿಗಳು ಹೇಳುತ್ತಾರೆ.