ಭದ್ರತಾ ಲೋಪ ಪ್ರಕರಣ: ಮನೋರಂಜನ್ ಮಾಸ್ಟರ್​ವೆುೖಂಡ್?

Manoranjan d
Published on

ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ಆರು ಆರೋಪಿಗಳಲ್ಲಿ ಒಬ್ಬನಾಗಿರುವ ಮೈಸೂರಿನ ಮನೋರಂಜನ್ ಈ ಪ್ರಕರಣದ ಮಾಸ್ಟರ್​ವೆುೖಂಡ್ ಆಗಿರಬಹುದು ಎಂದು ದೆಹಲಿ ಪೊಲೀಸರ ವಿಶೇಷ ಘಟಕ ಅನುಮಾನ ವ್ಯಕ್ತಪಡಿಸಿದೆ.

ದೊಡ್ಡದೇನನ್ನಾದರೂ ಮಾಡಿ ಸರ್ಕಾರಕ್ಕೆ ಒಂದು ಸಂದೇಶ ರವಾನೆ ಮಾಡಬೇಕು ಎಂಬ ಪಿತೂರಿಯ ಹಿಂದಿನ ಸಂಚನ್ನು ಮನೋರಂಜನ್ ಹೂಡಿರಬಹುದು ಎಂಬ ಶಂಕೆ ಮೂಡಿದ್ದಾಗಿ ಮೂಲಗಳು ತಿಳಿಸಿವೆ. ಆರೋಪಿಗಳಲ್ಲೊಬ್ಬನಾಗಿರುವ ಲಲಿತ್ ಝಾ ಮಾಸ್ಟರ್​ವೆುೖಂಡ್ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಗುಂಪಿನ ಸದಸ್ಯರಿಗೆ ದೊಡ್ಡ ಕೆಲಸ ಮಾಡುವ ಪ್ರಚೋದನೆ ನೀಡಿ, ಭದ್ರತಾ ಲೋಪದ ಸಂಚು ಹೆಣೆದಿದ್ದು ಮನೋರಂಜನ್ ಎಂದು ಲಲಿತ್ ಝಾ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೆ ಇಡೀ ಪ್ರಕರಣದಲ್ಲಿ ಝಾ ಪಾತ್ರ ಕೃತ್ಯದ ನಂತರ ಸಾಕ್ಷ್ಯನಾಶಗೊಳಿಸಿದ್ದಷ್ಟೇ ಆಗಿತ್ತು ಎಂದೂ ಹೇಳಲಾಗುತ್ತಿದೆ. ಕಳೆದ ವರ್ಷ ತನಗೆ ಮತ್ತು ಇತರರಿಗೆ ಮೈಸೂರಿಗೆ ಬರಲು ವಾಟ್ಸ್​ಆಪ್ ಮೂಲಕ ಟಿಕೆಟ್ ಕಳುಹಿಸಿದ್ದು ಕೂಡ ಮನೋರಂಜನ್ನೇ ಎಂದು ಝಾ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿರುವುದು ಬೆಳಕಿಗೆ ಬಂದಿದೆ. ಸಂಸತ್​ನಲ್ಲಿ ಘಟನೆ ದಿನವೇ ಮನೋರಂಜನ್ ಮತ್ತು ಸಾಗರ್ ಶರ್ವನನ್ನು ಲೋಕಸಭೆಯಲ್ಲಿ ವಶಕ್ಕೆ ಪಡೆಯಲಾಗಿತ್ತು. ಮೈಸೂರು ಮೂಲದ ಮನೋರಂಜನ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮೊಟಕುಗೊಳಿಸಿ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ. ನಿರುದ್ಯೋಗಿಯಾಗಿದ್ದರೂ ಕಾಂಬೋಡಿಯಾ ಮುಂತಾದೆಡೆಗೆ ಹೋಗಿಬಂದಿದ್ದ ಎನ್ನಲಾಗಿದೆ.

ನಿಜವಾದ ಕಾರಣವೇನು?

ಝಾನನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆ ಬಳಿಕ ಆತನನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅಲ್ಲದೆ ಶುಕ್ರವಾರ ಎಲ್ಲ ಆರು ಆರೋಪಿಗಳಿಗೂ ವೈದ್ಯರು ಸೈಕೊಅನಾಲಿಸಿಸ್ ಕೈಗೊಂಡಿದ್ದಾರೆ. ನಿರುದ್ಯೋಗ, ರೈತರು ಮತ್ತು ಮಣಿಪುರ ಪ್ರಕರಣದಿಂದ ಬೇಸತ್ತ ತಾವು ಹೀಗೆ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದೆ. ಅದಾಗ್ಯೂ ನಿಜವಾದ ಕಾರಣ ಏನೆಂಬುದು ಇನ್ನಷ್ಟೇ ಖಚಿತವಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಹೇಳಿಕೆ ದಾಖಲು

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಭದ್ರತಾ ಲೋಪದ ಬಗ್ಗೆ ತನಿಖೆ ನಡೆಯುತ್ತಿದೆ. ವರದಿ ಸಲ್ಲಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net