ವರ್ಷದ ಮೊದಲ ದಿನವೇ ಲೋಕಾ ಬಲೆಗೆ ಬಿದ್ದ ಸೆಕ್ಷನ್ ಅಧಿಕಾರಿ !

kotrappa and aravind
ಲೋಕಾಯುಕ್ತ ಬಲೆಗೆ ಬಿದ್ದ ಸೆಕ್ಷನ್ ಅಧಿಕಾರಿ ಟಿ.ಕೊಟ್ರಪ್ಪ ಮತ್ತು ಲೈಟ್ ಮಜದೂರ್ ಅರವಿಂದ್ .
Published on

ಶಿವಮೊಗ್ಗ: ಭದ್ರಾವತಿ ತಾಲೂಕಿನ ಗೋಂಧಿ ಬಲದಂಡೆ ನಾಲೆಯಲ್ಲಿ ಶಿಲ್ಟ್ ತೆಗೆದ ಕಾಮಗಾರಿ ಬಿಲ್ ಅನ್ನು ಮಂಜೂರು ಮಾಡಲು ಗುತ್ತಿಗೆದಾರನಿಂದ 1.20 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಿ.ಬಿ.ಹಳ್ಳಿಯ ಕರ್ನಾಟಕ ನೀರಾವರಿ ನಿಗಮದ ಸೆಕ್ಷನ್ ಅಧಿಕಾರಿ ಟಿ.ಕೊಟ್ರಪ್ಪ ಮತ್ತು ಲೈಟ್ ಮಜದೂರ್ ಅರವಿಂದ್ ಎಂಬುವರು ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ.

ಬಳ್ಳಾರಿಯ ಕಾಕರ್ಲ ತೋಟದ ನಿವಾಸಿ, ಗುತ್ತಿಗೆದಾರ ವಿ.ರವಿ ಎಂಬುವರು ದೂರು ನೀಡಿದ್ದರು. ಲೋಕೋಪಯೋಗಿ ಇಲಾಖೆಯ ಕ್ಲಾಸ್-2 ಗುತ್ತಿಗೆದಾರನಾಗಿರುವ ರವಿ ಅವರು ಭದ್ರಾ ಯೋಜನಾ ವೃತ್ತದ ಕರ್ನಾಟಕ ನೀರಾವರಿ ನಿಗಮ ನಿಯಮಿತದಲ್ಲಿ ಬಿಆರ್‌ಪಿ ವ್ಯಾಪ್ತಿಯ ಗೋಂಧಿ ಬಲದಂಡೆ ನಾಲೆಯಲ್ಲಿ ಶಿಲ್ಟ್ ತೆಗೆಯುವ ಕಾಮಗಾರಿ ಟೆಂಡರ್ ಪಡೆದಿದ್ದರು.

2023ರ ಡಿಸೆಂಬರ್‌ನಲ್ಲಿ ಇ-ಟೆಂಡರ್ ಆಗಿದ್ದು ಎರಡು ಕಾಮಗಾರಿಗಳ ಒಟ್ಟು ಮೊತ್ತ ಜಿಎಸ್‌ಟಿ ಸೇರಿ 9,16,999 ರೂ. ಆಗಿತ್ತು. ಡಿಸೆಂಬರ್‌ನಲ್ಲೇ ಕೆಲಸ ಆರಂಭಿಸಿ 2024ರ ಜನವರಿ ಅಂತ್ಯದೊಳಗೆ ಶಿಲ್ಟ್ ತೆಗೆಯುವ ಕಾಮಗಾರಿ ಪೂರ್ಣಗೊಳಿಸಿದ್ದರು. ರವಿ ಅವರು ಕಾಮಗಾರಿಯ ಬಿಲ್ ಮಂಜೂರು ಮಾಡುವಂತೆ ಹಲವು ಬಾರಿ ಕಚೇರಿಗೆ ತೆರಳಿ ಮನವಿ ಮಾಡಿದ್ದರು. ಆದರೂ ಬಿಲ್ ಮಂಜೂರು ಮಾಡಿರಲಿಲ್ಲ.

2024ರ ಡಿಸೆಂಬರ್ 27ರಂದು ಡಿ.ಬಿ.ಹಳ್ಳಿಯ ಕರ್ನಾಟಕ ನೀರಾವರಿ ನಿಗಮದ ಕಚೇರಿಗೆ ತೆರಳಿ ಕಚೇರಿಯಲ್ಲಿದ್ದ ಸೆಕ್ಸನ್ ಅಧಿಕಾರಿ ಟಿ.ಕೊಟ್ರಪ್ಪ ಅವರನ್ನು ಭೇಟಿ ಮಾಡಿ ಕಾಮಗಾರಿಯ ಬಿಲ್ ಅನ್ನು ಮಂಜೂರು ಮಾಡುವಂತೆ ಪುನಃ ಕೇಳಿದ್ದರು. ಆಗ ಬಿಲ್ ಮಂಜೂರು ಮಾಡಲು ಟಿ.ಕೊಟ್ರಪ್ಪ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಕೇಳಿದ್ದನ್ನು ರವಿ ಅವರು ಮೊಬೈಲ್‌ನಲ್ಲಿ ವಾಯ್ಸ ರೇಕಾರ್ಡ್ ಮಾಡಿಕೊಂಡು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಬುಧವಾರ ಸಂಜೆ 4.30ಕ್ಕೆ ಸೆಕ್ಸನ್ ಅಧಿಕಾರಿ(ಪ್ರಭಾರ ಎಇಇ) ಟಿ.ಕೊಟ್ರಪ್ಪ ಮತ್ತು ಕಚೇರಿಯ ಲೈಟ ಮಜದೂರ್ ಅರವಿಂದ್ ಅವರಯ 1.20 ಲಕ್ಷ ರೂ. ಲಂಚವನ್ನು ಕಚೇರಿಯಲ್ಲೇ ಸ್ವೀಕರಿಸಿದ್ದು ಇಬ್ಬರನ್ನೂ ಲೋಕಾಯುಕ್ತ ಅಧಿಕಾರಿಗಳು ಟ್ರಾೃಪ್ ಮಾಡಿದ್ದಾರೆ. ಲಂಚದ ಹಣ ಜಪ್ತಿ ಮಾಡಿ ಇಬ್ಬರನ್ನೂ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವೀರಬಸಪ್ಪ ಎಲ್.ಕುಸಲಾಪುರ ಅವರು ತನಿಖೆ ಕೈಗೊಂಡಿದ್ದಾರೆ.

ಶಿವಮೊಗ್ಗದ ಲೋಕಾಯುಕ್ತ ಎಸ್‌ಪಿ ಎಂ.ಎಚ್.ಮಂಜುನಾಥ ಚೌದರಿ ನೇತೃತ್ವದಲ್ಲಿ ಟ್ರ್ಯಾಪ್ ಮಾಡಿದ್ದು ಇನ್ಸ್‌ಪೆಕ್ಟರ್‌ಗಳಾದ ಎಚ್.ಎಸ್.ಸುರೇಶ್, ಪ್ರಕಾಶ್, ಸಿಬ್ಬಂದಿ ಯೋಗೇಶ್, ಟೀಕಪ್ಪ, ಸುರೇಂದ್ರ, ಎಂ.ಮಂಜುನಾಥ್, ಪ್ರಶಾಂತ್ ಕುಮಾರ್, ಚೆನ್ನೇಶ್, ಅರುಣ್‌ಕುಮಾರ್, ದೇವರಾಜ್, ಪ್ರಕಾಶ್, ಆದರ್ಶ, ಎನ್.ಪುಟ್ಟಮ್ಮ, ಅಂಜಲಿ, ಗಂಗಾಧರ, ಪ್ರದೀಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net