

ಉಡುಪಿ: ಕರೊನಾ ವೈರಸ್ ಸೋಂಕು ತಡೆಗಟ್ಟುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬಹುತೇಕ ಎಲ್ಲ ಕಡೆ ಸೆಕ್ಷನ್ 144 ಜಾರಿಯಾಗಿದೆ.
ಮಂಗಳೂರಿನಲ್ಲಿ ವ್ಯಕ್ತಿಯೋರ್ವರಲ್ಲಿ ಕರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಕೂಡ ಹೈ ಅಲರ್ಟ್ ಇದೆ. ಆದರೆ ಉಡುಪಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಕೆಲವು ವ್ಯಾಪಾರಿಗಳು ಅಂಗಡಿ ತೆರೆದಿದ್ದರು. ಇದನ್ನು ನೋಡಿದ ನಗರಸಭೆ ಆಯುಕ್ತರು ಕೆಂಡಾಮಂಡಲರಾದ ಘಟನೆ ನಡೆಯಿತು.
ಮಾತಿಗೂ ಬಗ್ಗದೆ ಅಂಗಡಿ ತೆರೆದು ಕುಳಿತಿದ್ದವರನ್ನು ನೋಡಿದ ನಗರಸಭೆ ಆಯುಕ್ತ ಆನಂದ್ ಕಲ್ಲೋಲಿಕರ್, ಅಂಗಡಿ ಮುಚ್ಚದಿದ್ದರೆ ಲೈಸನ್ಸ್ ರದ್ದು ಮಾಡುತ್ತೇನೆ ಎಂದು ಹೆದರಿಸಿದರು. ಅದನ್ನು ಕೇಳಿ ವ್ಯಾಪಾರಿಗಳು ಬೇಗಬೇಗ ಅಂಗಡಿಗಳನ್ನು ಮುಚ್ಚಿದ್ದಾರೆ.
ದಿನನಿತ್ಯದ ವಸ್ತುಗಳನ್ನು ಮಾರುವ ಅಂಗಡಿಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಅಂಗಡಿಗಳು ತೆರೆದಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಕಮಿಷನರ್ ಖಡಕ್ ಎಚ್ಚರಿಕೆ
ಲಾಕ್ಡೌನ್ ಆಗಿರುವ ಮಂಗಳೂರಿನಲ್ಲಿ ಯಾರಾದರೂ ಅನಗತ್ಯವಾಗಿ ರಸ್ತೆ ಮೇಲೆ ಓಡಾಡಿದರೆ ಬಂಧಿಸುವುದಾಗಿ ನಗರ ಪೊಲೀಸ್ ಕಮಿಷನರ್ ಡಾ. ಪಿ.ಎಸ್. ಹರ್ಷ ಎಚ್ಚರಿಕೆ ನೀಡಿದ್ದಾರೆ.
ಮನೆಯಲ್ಲೇ ಇದ್ದು ಸರ್ಕಾರದ ಕಾನೂನನ್ನು ಪಾಲಿಸಬೇಕು. ಜಿಲ್ಲಾಧಿಕಾರಿಗಳ ಸೂಚನೆಯನ್ನು ಕೇಳಬೇಕು. ಅದು ಬಿಟ್ಟು ರಸ್ತೆಗೆ ಇಳಿದರೆ ಐಪಿಸಿ ಸೆಕ್ಷನ್ 188, 269, 270ರಡಿ ಪ್ರಕರಣ ದಾಖಲಿಸುತ್ತೇವೆ ಎಂದಿದ್ದಾರೆ. ಜನರು ಅಗತ್ಯ ವಸ್ತುಗಳನ್ನು ಹೊರತುಪಡಿಸಿ, ಇನ್ಯಾವುದೇ ಕಾರಣಕ್ಕೂ ಮನೆಯಿಂದ ಹೊರಬೀಳಬಾರದು ಎಂದಿದ್ದಾರೆ.