ಕಳೆದ ವಾರಾಂತ್ಯದಲ್ಲಿ ಬ್ರಿಕ್ಸ್ ರಾಷ್ಟ್ರಗಳ 18ನೇ ವಾರ್ಷಿಕ ಸಮ್ಮೇಳನ ದೆಹಲಿಯಲ್ಲಿ ನಡೆಯಿತಷ್ಟೆ. ಇದರಲ್ಲಿ 11 ಸದಸ್ಯ ರಾಷ್ಟ್ರಗಳು, 10 ಪಾಲುದಾರ ದೇಶಗಳು, ಕೆಲವು ಜಾಗತಿಕ& ಪ್ರಾದೇಶಿಕ ಸಂಘಟನೆಗಳೂ ಭಾಗವಹಿಸಿದ್ದವು. ಪರಸ್ಪರ ಅಪನಂಬಿಕೆಯಿಂದ ಸದ್ಯಕ್ಕಂತೂ ಹೊರಬರಲಾಗದ ಭಾರತ& ಚೀನಾ, ಇಂದು ಪರಸ್ಪರ ವಿರೋಧಿ ಪಾಳಯದಲ್ಲಿರುವ 3 ಪಶ್ಚಿಮ ಏಷ್ಯನ್ ರಾಷ್ಟ್ರಗಳು ವೈಮನಸ್ಯ ಬದಿಗಿಟ್ಟು ಒಂದೆಡೆ ಕಲೆತದ್ದು, 45 ಪುಟಗಳ, 18000 ಪದಗಳ ಸಂಯುಕ್ತ ಹೇಳಿಕೆ ಹೊರಡಿಸಲು ಸಾಧ್ಯವಾದದ್ದು ಈ ಸಮ್ಮೇಳನದ ಹೆಗ್ಗಳಿಕೆ. ಇದು ನರೇಂದ್ರ ಮೋದಿ ಸರ್ಕಾರದ ರಾಜತಾಂತ್ರಿಕ ಯಶಸ್ಸು. ಚೀನಿ ಅಧ್ಯಕ್ಷ ಷಿ ಜಿನ್ಪಿಂಗ್ 400ರಷ್ಟು ಚೀನಿ ಆರ್ಥಿಕ, ವೈಜ್ಞಾನಿಕ, ತಾಂತ್ರಿಕ, ಸಂಪರ್ಕ ಕ್ಷೇತ್ರಗಳ ಮುಂದಾಳುಗಳಿದ್ದ ಬೃಹತ್ ನಿಯೋಗದೊಂದಿಗೆ ಹಾಜರಾದದ್ದು ಜಾಗತಿಕವಾಗಿ ಗಮನ ಸೆಳೆದ ಅಂಶ. ಇಂತಹ ಸಮ್ಮೇಳನಗಳು ಏಕಾಏಕಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವುದಿಲ್ಲ. ಅಂತಹ ನಿರೀಕ್ಷೆಯೂ ಈ ರಾಷ್ಟ್ರಗಳಿಗೆ ಇರುವುದಿಲ್ಲ. ಮಹತ್ತರ ತಿರುವುಗಳು ಸಂಭವಿಸುವುದು ಸಮರಗಳ ಅಂತ್ಯದ ನಂತರ ಜರುಗುವ ಸಮಾವೇಶಗಳಲ್ಲಿ. ಇದುವರೆಗಿನ ಯಾವ ಬ್ರಿಕ್ಸ್ ಶೃಂಗಸಭೆಯೂ ಅಂತಹ ಹಿನ್ನೆಲೆಯಲ್ಲಿ ನಡೆದಿಲ್ಲ. ಹೀಗಾಗಿ ದೆಹಲಿ ಸಮ್ಮೇಳನ ಸದಸ್ಯ ರಾಷ್ಟ್ರಗಳ ಸಂಪರ್ಕದ ಮುಂದುವರಿಕೆಯಷ್ಟೇ. ಆದಾಗ್ಯೂ ಇದು ಇತರ ಸಮ್ಮೇಳನಗಳಿಗಿಂತ ಗಮನಾರ್ಹವಾಗಿತ್ತು ಎನ್ನುವುದರ ಉದಾಹರಣೆಗಳನ್ನು ಮೇಲೆಯೇ ಕೊಟ್ಟಿದ್ದೇನೆ.