

ತಿರುವನಂತಪುರಂ: ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿಯ ವರದಿ ಬಂದ ಬಳಿಕ ಚಿತ್ರರಂಗದಲ್ಲಿನ ಲೈಂಗಿಕ ಕಿರುಕುಳದ ಒಂದೊಂದೆ ಪ್ರಕರಣಗಳು ಹೊರಬರುತ್ತಿವೆ. ನಟಿಯೊಬ್ಬರ ದೂರಿನ ಹಿನ್ನೆಲೆಯಲ್ಲಿ ನಟ ಜಯಸೂರ್ಯ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ನಟ ಜಯಸೂರ್ಯ ವಿರುದ್ಧ 354, 354ಎ(ಎ1)(ಐ) 354ಡಿ ಐಪಿಸಿ ಅಡಿಯಲ್ಲಿ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಪ್ರಕರಣ ದಾಖಲಿಸಲಾಗಿದೆ. ತಿರುವನಂತಪುರದಲ್ಲಿ ಎಫ್‌ಐಆರ್ ದಾಖಲಾಗಿದ್ದು, ತೋಡುಪುಳ ಪೊಲೀಸ್ ಠಾಣೆಗೆ ವರ್ಗಾಯಿಸುವುದಾಗಿ ಪೊಲೀಸರು ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ.
ನಟಿಯೊಬ್ಬರು ತೊಡುಪುಳದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುವ ವೇಳೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ನಟನ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿರುವ ಘಟನೆ ಅಲ್ಲೇ ನಡೆದಿರುವುದರಿಂದ ಪ್ರಕರಣವನ್ನು ತೊಡುಪುಳ ಪೊಲೀಸರಿಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.
ವಿಶೇಷ ತನಿಖಾ ತಂಡ (ಎಸ್‌ಐಟಿ) ನಿನ್ನೆ ಆಗಸ್ಟ್ 29 ರಂದು ದೂರುದಾರನ ಹೇಳಿಕೆಯನ್ನು ದಾಖಲಿಸಿಕೊಂಡಿದೆ. 2008ರಲ್ಲಿ ರಾಜ್ಯ ಸಚಿವಾಲಯದ ಕಟ್ಟಡದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿರುವುದಾಗಿ ನಟಿ ತಿಳಿಸಿದ್ದಾರೆ. ಇದು ಮಲಯಾಳಂ ನಟನ ವಿರುದ್ಧ ದಾಖಲಾಗಿರುವ ಎರಡನೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್)ಆಗಿದೆ. ಈ ಹಿಂದೆ ನಟಿ ಮಿನು ಮುನೀರ್ ನಟನ ವಿರುದ್ಧ ದೂರು ದಾಖಲಿಸಿದ್ದರು. ಆಗಸ್ಟ್ 28 ರಂದು ಎಫ್‌ಐಆರ್ ದಾಖಲಾಗಿತ್ತು.
ಹೇಮಾ ಸಮಿತಿಯ ವರದಿಯನ್ನು ಬಹಿರಂಗಗೊಳಿಸಿದ ನಂತರ ನಟ ಮೋಹನ್ ಲಾಲ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರೆ. ಇತರ ಸದಸ್ಯರು ಜಂಟಿಯಾಗಿ ರಾಜೀನಾಮೆ ಸಲ್ಲಿಸಿದರು.(ಏಜೆನ್ಸೀಸ್)