ಕಾಲೇಜುಗಳಲ್ಲಿ ಬಹು ಬೇಡಿಕೆಯ ಕೋರ್ಸ್‌ಗಳ ಸೀಟುಗಳು ಉಳಿಕೆ: ಸೀಟ್ ಬ್ಲಾಕಿಂಗ್ ದಂಧೆ ಬಗ್ಗೆ ಶಂಕೆ

CET KEA 2
Published on

ಬೆಂಗಳೂರು: ಸಿಇಟಿ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿದ್ದು, ನಗರದ ಟಾಪ್ ಕಾಲೇಜುಗಳಲ್ಲಿ ಬಹು ಬೇಡಿಕೆಯ ಕೋರ್ಸ್‌ಗಳ ಸೀಟುಗಳು ಉಳಿಕೆಯಾಗಿರುವುದು ಸೀಟ್ ಬ್ಲಾಕಿಂಗ್ ದಂಧೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ.


ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕಚೇರಿಗೆ ಶುಕ್ರವಾರ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಖುದ್ದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ವಿಚಾರಿಸಿದರು.


ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಟಾಪ್ ಕಾಲೇಜುಗಳಾದ ಆರ್.ವಿ. ಇಂಜಿನಿಯರಿಂಗ್, ಎಂ.ಎಸ್.ರಾಮಯ್ಯ, ದಯಾನಂದ ಸಾಗರ್, ಪಿಇಎಸ್ ವಿಶ್ವವಿದ್ಯಾಲಯ ಸೇರಿ ಕೆಲವು ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಆ್ಯಂಡ್ ಸಿವಿಲ್ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆದ ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ಸೀಟು ತೊರೆದಿದ್ದಾರೆ. ಇದರಿಂದ ಪ್ರತಿ ಕಾಲೇಜಿನಲ್ಲಿ ಕನಿಷ್ಠ 10-30 ಸೀಟುಗಳು ಉಳಿಕೆಯಾಗಿವೆ. ಸೀಟು ತೊರೆದಿರುವುದಕ್ಕೆ ವಿದ್ಯಾರ್ಥಿಗಳಿಂದ ಕಾರಣ ಕೇಳಿದಾಗ, ಅವರು ನೀಡುವ ಕಾರಣ ಅನುಮಾನ ಹುಟ್ಟಿಸುವಂತಿದೆ. ಇದರ ಹಿಂದೆ ಕಾಣದ ಕೈಗಳು ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಚಿವರು ಸೀಟು ತೊರೆದ ಅಭ್ಯರ್ಥಿಗಳ ಮೇಲೆ ನಿಗಾವಹಿಸಲಾಗುವುದು ಎಂದರು.


ಈ ಬಾರಿ ಸರ್ಕಾರಿ ಮತ್ತು ಮ್ಯಾನೇಜ್‌ಮೆಂಟ್ ಸೇರಿ ಲಭ್ಯವಿದ್ದ 93 ಸಾವಿರ ಸೀಟುಗಳ ಪೈಕಿ 10 ಸಾವಿರ ಸೀಟುಗಳಿಗೆ ಯಾರೂ ಆಪ್ಷನ್ ಸಲ್ಲಿಸಿಲ್ಲ. 2,700 ಸೀಟುಗಳು ಉಳಿಕೆಯಾಗಿದೆ. ಈ ರೀತಿ ಉಳಿಕೆಯಾಗುವ ಸೀಟುಗಳನ್ನು ಭರ್ತಿ ಮಾಡುವುದಕ್ಕಾಗಿಯೇ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಧಿಯವರೆಗೆ ಕೌನ್ಸೆಲಿಂಗ್ ನಡೆಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಕೆಇಎ ಮೊಬೈಲ್ ಆ್ಯಪ್ ಆಧಾರಿತ ಅರ್ಜಿ ಭರ್ತಿಯನ್ನು ಜಾರಿಗೆ ತರಲು ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಮಾಡುವ ತಪ್ಪುಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.


ಮುಚ್ಚಿದ ಕಾಲೇಜಿಗೆ ಸೀಟು ಹಂಚಿಕೆ:
ಶಿಕಾರಿಪುರದ ವಿದ್ಯಾರ್ಥಿವೊಬ್ಬನಿಗೆ ಬಿ.ಎಸ್ಸಿ. ನರ್ಸಿಂಗ್ ಕೋರ್ಸ್‌ಗೆ ಕುಂದಾಪುರದಲ್ಲಿರುವ ಕಾಲೇಜುವೊಂದರಲ್ಲಿ ಸೀಟು ಹಂಚಿಕೆಯಾಗಿದ್ದು, ಕಾಲೇಜಿಗೆ ಪ್ರವೇಶ ಪಡೆಯಲು ಹೋದಾಗ ಅದು 3 ವರ್ಷದಿಂದ ಮುಚ್ಚಿರುವುದು ಕಂಡು ಬಂದಿದೆ. ಈ ಅಭ್ಯರ್ಥಿ ಸಚಿವರ ಮುಂದೆ ಸಮಸ್ಯೆ ಹಂಚಿಕೊಂಡಿದ್ದು, ಇದಕ್ಕೆ ಸ್ಪಂದಿಸಿದ ಸಚಿವರು ರಾಜೀವ್ ಗಾಂಧಿ ವಿವಿ ಕುಲಪತಿಗಳ ಜತೆಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಕಾಲೇಜುಗಳ ಸ್ಥಿತಿ ಗತಿ ಪರಿಶೀಲಿಸಿ ಸೀಟ್ ಮ್ಯಾಟ್ರಿಕ್ಸ್ ಸಲ್ಲಿಸುವಂತೆ ವಿವಿಗೆ ಸೂಚಿಸಿದರು.


ಮತ್ತೊಬ್ಬರು ತಮ್ಮ ಮಗಳಿಗೆ ಕಾಲೇಜು ಒಂದರಲ್ಲಿ ಸಿಕ್ಕಿರುವ ಸೀಟನ್ನು ಬೇರೆ ಕಾಲೇಜಿಗೆ ವರ್ಗಾಯಿಸಿಕೊಡುವಂತೆ ಮನವಿ ಮಾಡಿದರು. ಸ್ಥಳದಲ್ಲೇ ಕಣ್ಣೀರು ಹಾಕಿದರು. ಆದರೆ, ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲದೇ ಇರುವುದರಿಂದ ಸಾಧ್ಯವಿಲ್ಲವೆಂದು ಕಳುಹಿಸಲಾಯಿತು.

ಕೆಇಎಗೆ ಸಿಇಟಿ ಮಾತ್ರವಲ್ಲ, ಹಲವಾರು ಇಲಾಖೆಯ ಹುದ್ದೆಗಳ ಭರ್ತಿಯ ಕೆಲಸ ಕೂಡ ನಿರ್ವಹಣೆ ಮಾಡಬೇಕಿರುವುದರಿಂದ ಮುಂದಿನ ದಿನಗಳಲ್ಲಿ 35 ಕೋಟಿ ರೂ.ವೆಚ್ಚದಲ್ಲಿ ಕೆಇಎ ಕಟ್ಟಡ ಉನ್ನತೀಕರಿಸಲಾಗುವುದು.

  • ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net