

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಜ್ಞಾನಭಾರತಿಯಲ್ಲಿ ಸ್ಕೈ ಡೆಕ್ (ಆಕಾಶ ಗೋಪುರ) ನಿರ್ಮಿಸುವ ಪ್ರಸ್ತಾಪಕ್ಕೆ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಇದೀಗ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹೊಸ ಜಾಗದ ಹುಡುಕಾಡ ಆರಂಭವಾಗಿದೆ.
ದೇಶದಲ್ಲೇ ಅತೀ ಎತ್ತರದ ವೀಕ್ಷಣಾ ಸ್ಥಳ ನಿರ್ಮಿಸುವ ಹೆಬ್ಬಯಕೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಕೈ ಡೆಕ್ ಅನ್ನು ಮಾಡಿಯೇ ತೀರಬೇಕೆಂಬ ಹೆಬ್ಬಯಕೆಯಿಂದಾಗಿ ಹೊಸ ಜಾಗವನ್ನು ಅಂತಿಗೊಳಿಸಲು ಸಿದ್ಧತೆ ನಡೆದಿದೆ. ಈಗಾಗಲೇ ಸ್ಕೈ ಡೆಕ್ ಪ್ರಾಜೆಕ್ಟ್ ನಿರ್ಮಿಸಲು ಸರ್ಕಾರ ಒಪ್ಪಿಗೆ ನೀಡಿದ್ದರೂ, ಜಾಗ ಅಂತಿಮಗೊಂಡಿಲ್ಲ. ತಾಂತ್ರಿಕ ಕಾರಣ ಒಡ್ಡಿ ಜಾಗ ಗುರುತಿಸುವಿಕೆ ವರ್ಷದಿಂದ ನಡದೇ ಇದೆ.
ಬಿಡಿಎ ಅಧಿಕಾರಿಗಳಿಗೆ ಸೂಚನೆ:
ಉದ್ದೇಶಿತ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ಬಿಡಿಎ ಅಭಿವೃದ್ಧಿಪಡಿಸುತ್ತಿದೆ. ಸುಮಾರು 4 ಸಾವಿರ ಎಕರೆ ವಿಸ್ತೀರ್ಣದಲ್ಲಿ ವಿವಿಧ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಪೂರ್ಣಗೊಳ್ಳುವ ವಿಶ್ವಾಸವನ್ನು ಪ್ರಾಧಿಕಾರ ಹೊಂದಿದೆ. ನಾಗರಿಕರು ಹಾಗೂ ವಾಣಿಜ್ಯ ಉದ್ದೇಶಿತ ಮೂಲೆ ನಿವೇಶನಗಳ ಹೊರತಾಗಿ ಲೇಔಟ್‌ನಲ್ಲಿ ಐದಾರು ಕಡೆಗಳಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ವಿಶಾಲ ಜಾಗ ಗುರುತಿಸಲಾಗಿದೆ. ಈ ಜಾಗವು ಮೈಸೂರು ರಸ್ತೆಯಿಂದ ಆರಂಭಿಸಿ ಮಾಗಡಿ ರಸ್ತೆವರೆಗಿನ ವಿವಿಧ ಭಾಗಗಳಲ್ಲಿ ಹರಡಿಕೊಂಡಿವೆ. ಇವುಗಳಲ್ಲಿ 25 ಎಕರೆ ವಿಸ್ತೀರ್ಣದ ಜಮೀನನ್ನು ಸ್ಕೈ ಡೆಕ್ ಯೋಜನೆಗೆ ಬಳಸಿಕೊಳ್ಳುವ ಕುರಿತು ಡಿಸಿಎಂ ಅವರು ಇತ್ತೀಚಿಗೆ ಬಿಡಿಎ ಅಧಿಕಾರಿಗಳಿಗೆ ಸೂಚಿಸಿದ್ದರು. ಇದನ್ನಾಧರಿಸಿ ಪ್ರಾಧಿಕಾರದ ಅಧಿಕಾರಿ ವರ್ಗ ಜಾಗ ಪರಿಶೀಲನೆಗೆ ಮುಂದಾಗಿದ್ದು, ಒಮದೆರಡು ಸ್ಥಳಗಳನ್ನು ಆಯ್ಕೆ ಮಾಡಿವೆ. ಇದನ್ನು ಇನ್ನಷ್ಟೇ ಅಂತಿಮಗೊಳಿಸಿ ನಗರಾಭಿವೃದ್ಧಿ ಇಲಾಖೆಯಿಂದ ಒಪ್ಪಿಗೆ ಪಡೆದುಕೊಳ್ಳಬೇಕಿದೆ.
ಎತ್ತರದ್ದೇ ಸಮಸ್ಯೆ:
ಆಕಾಶ ಗೋಪುರವು ಬರೋಬರಿ 250 ಮೀಟರ್ ಎತ್ತರ ಇರಲಿದೆ. ಇದರ ಮೇಲಿಂದ ಮಹಾನಗರದ ವಿಹಂಗಮ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಪ್ರೇಕ್ಷಣೀಯ ಸ್ಥಳದ ಜತೆಗೆ ವಾಣಿಜ್ಯ ಚಟುವಟಿಕೆಗೂ ಅವಕಾಶ ಇರಲಿದೆ. ಹಾಗಾಗಿ ಪ್ರಾಜೆಕ್ಟ್ ಜಾರಿಗೆ 25 ಎಕರೆ ಅಗತ್ಯವಿದೆ. ಜತೆಗೆ ಸ್ಕೈ ಡೆಕ್ ಎತ್ತರ 250 ಮೀ. ಇದ್ದು, ವಿಮಾನ ಹಾರಾಟ ಹಾಗೂ ಇತರ ಸುರಕ್ಷತಾ ದೃಷ್ಟಿಯಿಂದ ನಗರದಾಚೆ ಸ್ಥಾಪಿಸಬೇಕು ಎಂಬ ಸಲಹೆ ಕೇಳಿಬಂದಿದೆ.
ಯೋಜನೆ ಘೋಷಣೆಯಾದಾಗ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ ಬಳಿಯಿರುವ ಎನ್‌ಜಿಇಎಫ್ ಕಾರ್ಖಾನೆ ಜಾಗವನ್ನು ಆಯ್ಕೆ ಮಾಡಲಾಗಿತ್ತು. ಇದು ನಗರದ ಮಧ್ಯದಲ್ಲಿ ಇರುವುದರಿಂದ ವಿಮಾನ ಹಾರಾಟಕ್ಕೆ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ಎಚ್‌ಎಎಲ್ ಆಕ್ಷೇಪ ವ್ಯಕ್ತಪಡಿಸಿತ್ತು. ಹಾಗಾಗಿ ಯಶವಂತಪುರ ಸಮೀಪದ ಕೆಎಸ್‌ಡಿಎಲ್/ಮೈಸೂರು ಲ್ಯಾಂಪ್ಸ್ ಜಾಗವನ್ನು ಗುರುತಿಸಲು ಹೊರಟಾಗ ಇದೇ ಕಾರಣದಿಂದ ಸ್ಥಳ ಆಯ್ಕೆ ಕಗ್ಗಂಟಾಯಿತು. ಆಗ ನಗರದಾಚೆ ನಿರ್ಮಿಸುವ ಉದ್ದೇಶದಿಂದ ಹೆಮ್ಮಿಗೆಪುರ ಬಳಿಯ ನೈಸ್ ಜಾಗವನ್ನು ಗುರುತಿಸಲಾಯಿತು. ಈ ಭಾಗದಲ್ಲಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಸ್ಥಾಪನೆ ಆಗಲಿರುವ ಕಾರಣ ಸುರಕ್ಷತೆ ಕಾರಣ ಯೋಜನೆಗೆ ಒಪ್ಪಿಗೆ ಸಿಗಲಿಲ್ಲ.
ಇದಾದ ಬಳಿಕ ಬೆಂಗಳೂರು ವಿವಿ ಕ್ಯಾಂಪಸ್ ಜ್ಞಾನಭಾರತಿಯಲ್ಲಿ ಸ್ಕೈ ಡೆಕ್‌ಗಾಗಿ 25 ಎಕರೆ ಜಾಗ ನೀಡುವಂತೆ ಬಿಬಿಎಂಪಿಯು ಕುಲಪತಿಯವರಿಗೆ ಮನವಿ ಮಾಡಿತು. ಆದರೆ, ಶೈಕ್ಷಣಿಕ ಸ್ಥಳದಲ್ಲಿ ವಾಣಿಜ್ಯ ಉದ್ದೇಶ ಹೊಂದಿರುವ ಆಕಾಶ ಗೋಪುರ ನಿರ್ಮಿಸುವುದರಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅಡ್ಡಿಯಾಗಲಿದೆ ಎಂಬ ಆಕ್ಷೇಪ ಕೇಳಿಬಂತು. ಜತೆಗೆ ಪ್ರಸ್ತಾವಿತ ಸ್ಥಳವು ಕ್ಯಾಂಪಸ್‌ನ ದಕ್ಷಿಣ ಭಾಗವಾದ ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಆಯಾಕಟ್ಟಿನ ಜಾಗವನ್ನು ಬಿಟ್ಟುಕೊಡಲು ವಿವಿ ಮೀನಮೇಷ ಎಣಿಸಿತು. ವಿವಿಯ ವಿದ್ಯಾರ್ಥಿಗಳು ಹಾಗೂ ಪರಿಸರವಾದಿಗಳು ಜೀವ ವೈವಿಧ್ಯತೆಯ ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂಬ ಹುಯಿಲೆಬ್ಬಿಸಿದ ಕಾರಣ ಆ ಸ್ಥಳವನ್ನು ನೀಡಲು ಉನ್ನತ ಶಿಕ್ಷಣ ಇಲಾಖೆಯೂ ಕೈಚೆಲ್ಲಿತು. ಇವೆಲ್ಲದರ ಪರಿಣಾಮ ಈಗ ಕೆಂಪೇಗೌಡ ಲೇಔಟ್‌ನ ಕೊಮ್ಮಘಟ್ಟ ಅಥವಾ ಇನ್ನೊಂದು ಸ್ಥಳದಲ್ಲಿ ಆಕಾಶ ಗೋಪುರ ಸ್ಥಾಪಿಸಲು ಡಿಸಿಎಂ ಅಧಿಕಾರಿಗಳಿಗೆ ಸೂಚಿಸಿರುವುದು ಜಾಗದ ಮಂಜುರಾತಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ.