

ಬೆಂಗಳೂರು: ಬಾಲ್ಯ ವಿವಾಹ ತಡೆಗಟ್ಟುವುದು ಮತ್ತು ನಿಗಾವಹಿಸುವ ಜವಾಬ್ದಾರಿಯನ್ನು ಸೀ ಶಕ್ತಿ ಸಂಘದ ಸದಸ್ಯರ ಹೆಗಲಿಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯವನ್ನು ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಮುಕ್ತ ಮಾಡುವ ಸಲುವಾಗಿ 2025- 26ನೇ ಸಾಲಿನಲ್ಲಿ ಕ್ರಿಯಾ ಯೋಜನೆಗಳನ್ನು ರೂಪಿಸಿದೆ. ಬಾಲ್ಯ ವಿವಾಹ ನಿಷೇಧಾಧಿಕಾರಿಗಳಾದ ಪಿಡಿಒ, ಗ್ರಾಮ ಆಡಳಿತಾಧಿಕಾರಿ, ಮುಖ್ಯಶಿಕ್ಷಕರ ಜತೆಗೆ ಸೀಶಕ್ತಿ ಸಂಘದ ಸದಸ್ಯರನ್ನು ಸೇರಿಸಿ ವಿಶೇಷ ನಿಗಾ ಗುಂಪುಗಳನ್ನು ರಚಿಸಲು ನಿರ್ಧರಿಸಿದೆ. ಇದರಿಂದ ಸೀ ಶಕ್ತಿ ಸಂಘದಲ್ಲಿ ಜಾಗೃತಿ ಮೂಡಲಿದೆ ಜತೆಗೆ ತಮ್ಮ ಗ್ರಾಮದಲ್ಲಿ ನಡೆಯುವ ಬಾಲ್ಯ ವಿವಾಹದ ಮೇಲೆ ನಿಗಾವಹಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಅನುಕೂಲವಾಗಲಿದೆ. ಇದಲ್ಲದೆ, ಶಾಲಾ-ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಲು ಸಹಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಕ್ರಿಯಾ ಯೋಜನೆ ರೂಪಿಸಿದೆ.
ಇತ್ತೀಚೆಗೆ ಅಪ್ರಾಪ್ತರ ಮದುವೆ ನಿಶ್ಚಿತಾರ್ಥವೂ ಶಿಕ್ಷಾರ್ಹ ಅಪರಾಧ ಎಂದು ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಮಾಹಿತಿ ಸಂಗ್ರಹಿಸಲು ಅಭಿವೃದ್ಧಿಪಡಿಸಿರುವ ‘ಸುರಕ್ಷಿಣಿ’ ತಂತ್ರಾಂಶಕ್ಕೆ ಅಪ್ರಾಪ್ತರ ನಿಶ್ಚಿತಾರ್ಥ ಸಂಬಂಧಿಸಿದ ದೂರು ಅಪ್‌ಲೋಡ್ ಮಾಡಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲಾ, ತಾಲೂಕು, ಗ್ರಾಪಂ ಮಟ್ಟದಲ್ಲಿ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ನಿಗಾವಹಿಸಲು ತರಬೇತಿ ನೀಡಲಾಗುತ್ತದೆ. ಬಾಲಕಿಯರಿಗೆ ಕೌಶಲ ಅಭಿವೃದ್ಧಿ ತರಬೇತಿ, ಶಾಲಾ ಮತ್ತು ಗ್ರಾಪಂಗಳಲ್ಲಿ ಅರಿವು/ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಮಕ್ಕಳ ಸಹಾಯವಾಣಿ 1098 ಕುರಿತು ಶಾಲಾ-ಕಾಲೇಜು ಮತ್ತು ಸಾರ್ವಜನಿಕರ ಸ್ಥಳಗಳಲ್ಲಿ ವ್ಯಾಪಕ ಪ್ರಚಾರ ಮಾಡುವುದು ಮತ್ತು ಶಾಲೆ ಬಿಟ್ಟ ಮಕ್ಕಳ ಬಗ್ಗೆ ತುರ್ತಾಗಿ ವರದಿ ಸಿದ್ಧಪಡಿಸಬೇಕು. ಅಂತಹ ಮಕ್ಕಳನ್ನು ವಾಪಸ್ ಶಾಲೆಗೆ ಕರೆತರುವ ಪ್ರಯತ್ನಗಳು ನಡೆಯಬೇಕು.
ಮದುವೆ ನಿಶ್ಚಿತಾರ್ಥದ ಬಗ್ಗೆ ದೂರು ನೀಡಬಹುದು. ನಿಶ್ಚಿತಾರ್ಥ ಮಾಡಿಸಿದವರು ಮತ್ತು ಎರಡೂ ಮನೆ ಪಾಲಕರು ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಎಚ್ಚರಿಕೆ ನೀಡಿದೆ.
ಸಂತ್ರಸ್ತ ಬಾಲಕಿಯರಿಗೆ ಮತ್ತು ಸಂಕಷ್ಟದಲ್ಲಿರುವ ಮಕ್ಕಳನ್ನು ಗುರುತಿಸಿ ಇಲಾಖೆ ವತಿಯಿಂದ ಅಗತ್ಯ ಸೌಕರ್ಯ ಒದಗಿಸಬೇಕು. ಬಾಲ ಮಂದಿರಗಳಲ್ಲಿ ವಸತಿ ನೀಡಿ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಬೇಕಾಗಿದೆ. ಬಾಲ್ಯ ವಿವಾಹಮುಕ್ತ ಗ್ರಾಪಂ ಗುರುತಿಸಿ ಪುರಸ್ಕಾರ ನೀಡಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.
685 ಬಾಲ ಗರ್ಭಿಣಿಯರು
ರಾಜ್ಯದಲ್ಲಿ 2024-25ನೇ ಸಾಲಿನಲ್ಲಿ 3,489 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಅದೇ ರೀತಿಯಾಗಿ 685 ಬಾಲ ಗರ್ಭಿಣಿಯರ ಕೇಸ್ ಪತ್ತೆಯಾಗಿದ್ದು, ದಾಖಲಾಗದ ಪ್ರಕರಣಗಳು ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇರಲಿವೆ. ಆದರಿಂದ ದೌರ್ಜನ್ಯದಿಂದ ಬಾಲಕಿಯರನ್ನು ರಕ್ಷಣೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.