

ಹರಿದ್ವಾರ: ಬಿಸಿಲಿನ ಶಾಖದಿಂದ ಬಳಲಿದ್ದ ಉತ್ತರ ಭಾರತದಾದ್ಯಂತ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಉತ್ತರಾಖಂಡದಲ್ಲೂ ಭಾರೀ ಮಳೆಯಾಗುತ್ತಿದ್ದು, ಗಂಗಾ ನದಿಯ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದ್ದು, ನದಿ ಪಾತ್ರದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಎಚ್ಚರಿಕೆಯ ಹೊರತಾಗಿಯೂ ಅಪಾಯವನ್ನು ಲೆಕ್ಕಿಸದೆ ಜನರು ನೀರಿಗಳಿಯುತ್ತಿದ್ದು, ಅಪಾಯವನ್ನು ತಮ್ಮ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಇದರ ನಡುವೆಯೇ ಕನ್ವರ್ ಯಾತ್ರಾರ್ಥಿಯೋರ್ವ ನದಿಯಲ್ಲಿ ಸ್ನಾನ ಮಾಡಲು ಹೋಗಿ ಮುಳುಗಿದ್ದು, ಆತನನ್ನು SDRF ಜವಾನ್ ಒಬ್ಬರು ನೀರಿಗೆ ಇಳಿದು ಆತನನ್ನು ಕಾಪಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹರಿದ್ವಾರದ ಕಾಂಗ್ರಾ ಘಾಟ್‌ನಲ್ಲಿ ಸ್ನಾನ ಮಾಡುತ್ತಿದ್ದಾಗ, ದೆಹಲಿಯಿಂದ ಬಂದ ಕನ್ವರ್ ಯಾತ್ರಾರ್ಥಿಯೊಬ್ಬರು ಗಂಗಾನದಿಯ ಬಲವಾದ ಪ್ರವಾಹದಲ್ಲಿ ಮುಳುಗಿದರು. ಇದನ್ನು ಗಮನಿಸಿದ SDRF ಜವಾನ್ ಆಶಿಕ್ ಅಲಿ ಕೂಡಲೇ ನೀರಿಗೆ ಧುಮುಕಿ ಆ ಯುವಕನನ್ನು ರಕ್ಷಿಸಿದ್ದಾರೆ. ಬಳಿಕ ದಡಕ್ಕೆ ಕರೆದುಕೊಂಡು ಬಂದು ಆತನನ್ನು ಉಪಚರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇತ್ತ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದು ಭಾರತ ಮತ್ತು ಭಾರತದ ಸಂಸ್ಕೃತಿ. ಇಲ್ಲಿ ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಸಹೋದರರಂತೆ ಬದುಕುತ್ತಾರೆ. ನೀವು ಇದನ್ನು ನೀವು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಒಬ್ಬ ಮುಸ್ಲಿಂ ಸಹೋದರ ತನ್ನ ಪ್ರಾಣವನ್ನು ಪಣಕ್ಕಿಟ್ಟು ಈ ಶಿವ ಭಕ್ತನನ್ನು ಉಳಿಸಿದ್ದಾನೆ ಎಂದು ನೆಟ್ಟಿಗರು ಜವಾನ್ನ ಸಾಹಸವನ್ನು ಮೆಚ್ಚಿ ಕಮೆಂಟ್ ಹಾಕುತ್ತಿದ್ದಾರೆ.