ಗುಜರಿ ಮಾರಾಟ, ಕೇಂದ್ರಕ್ಕೆ ಕೋಟಿಗಟ್ಟಲೇ ಆದಾಯ! ಸಿಕ್ಕ ಲಾಭದ ಸಂಖ್ಯೆ ಕೇಳಿದ್ರೆ ಹುಬ್ಬೇರುತ್ತೆ | Scrap Sales

ಗುಜರಿ ಮಾರಾಟ, ಕೇಂದ್ರಕ್ಕೆ ಕೋಟಿಗಟ್ಟಲೇ ಆದಾಯ! ಸಿಕ್ಕ ಲಾಭದ ಸಂಖ್ಯೆ ಕೇಳಿದ್ರೆ ಹುಬ್ಬೇರುತ್ತೆ | Scrap Sales
Published on

ನವದೆಹಲಿ: ಕಳೆದ ತಿಂಗಳಷ್ಟೇ ನಡೆದ ಬೃಹತ್ ಸ್ವಚ್ಛತಾ ಅಭಿಯಾನದ ಸಮಯದಲ್ಲಿ ಸ್ಕ್ರ್ಯಾಪ್ (Scrap Sales) ಮಾರಾಟ ಮಾಡಿದ ಕೇಂದ್ರ ಸರ್ಕಾರವು, ಬರೋಬ್ಬರಿ 800 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ. ಅಸಲಿಗೆ, ಇದು ಚಂದ್ರಯಾನ-3ರ ಬಜೆಟ್ ಮೀರಿದೆ ಎಂಬುದೇ ಸದ್ಯ ಹಲವರ ಅಚ್ಚರಿಗೆ ಕಾರಣವಾಗಿದೆ.

4,100 ಕೋಟಿ ರೂ.!

ಇಸ್ರೋ ನಡೆಸಿದ 'ಚಂದ್ರಯಾನ-3' ಮಿಷನ್​ಗೆ ಕೇಂದ್ರವು 615 ಕೋಟಿ ರೂ. ಖರ್ಚು ಮಾಡಿತು. ಈ ಯೋಜನೆ ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು. ಚಂದ್ರಯಾನ ಮಿಷನ್​ಗೆ ಖರ್ಚು ಮಾಡಿದ ಹಣಕ್ಕಿಂತ ಡಬಲ್​ ಹಣವು ಇದೀಗ ಸ್ಕ್ರ್ಯಾಪ್​ ಮಾರಾಟದಿಂದ ಕೇಂದ್ರ ಸರ್ಕಾರದ ಖಜಾನೆಗೆ ಸೇರಿರುವುದು ಗಮನಾರ್ಹ. 2021ರಲ್ಲಿ ವಾರ್ಷಿಕ ಅಭಿಯಾನ ಆರಂಭವಾದಾಗಿನಿಂದ, ಈ ವರ್ಷದ ಅಂಕಿಅಂಶಗಳು ಗುಜುರಿ ಮಾರಾಟದಿಂದ ಸರ್ಕಾರದ ಒಟ್ಟು ಗಳಿಕೆಯನ್ನು ಸುಮಾರು 4,100 ಕೋಟಿ ರೂ.ಗೆ ತಂದು ನಿಲ್ಲಿಸಿದೆ ಎಂದು ವರದಿ ಉಲ್ಲೇಖಿಸಿದೆ.

'ನ್ಯೂಸ್​ 18' ವರದಿ ಪ್ರಕಾರ, ಅ.2ರಿಂದ ಅ.31ರ ನಡುವೆ ನಡೆದ ಈ ವರ್ಷದ ಅಭಿಯಾನದಲ್ಲಿ, ಇದುವರೆಗೆ ಗರಿಷ್ಠ 232 ಲಕ್ಷ ಚದರದಡಿ ಕಚೇರಿ ಸ್ಥಳವನ್ನು ಮುಕ್ತಗೊಳಿಸಲಾಯಿತು ಮತ್ತು ಅತ್ಯಧಿಕ ಸಂಖ್ಯೆಯ 29 ಲಕ್ಷ ಭೌತಿಕ ಫೈಲ್‌ಗಳನ್ನು ಕಿತ್ತು ಬಿಸಾಡಲಾಯಿತು. ಇದು ಸುಮಾರು 11.58 ಲಕ್ಷ ಕಚೇರಿ ಸ್ಥಳಗಳನ್ನು ಒಳಗೊಂಡಂತೆ, ಅತಿದೊಡ್ಡ ನಿರ್ಮೂಲನೆ ಆಗಿದೆ.

ಮೂವರು ಸಚಿವರ ಉಸ್ತುವಾರಿ

ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ (DAR & PG) ಆಶ್ರಯದಲ್ಲಿ, ವಿದೇಶಗಳ ಕಾರ್ಯಾಚರಣೆಗಳು ಸೇರಿ ಒಟ್ಟು 84 ಸಚಿವಾಲಯ ಮತ್ತು ಇಲಾಖೆಗಳಲ್ಲಿ ಪರಿಣಾಮಕಾರಿ ಅಂತರ-ಸಚಿವಾಲಯ ಸಮನ್ವಯವನ್ನು ಸಾಧಿಸಲಾಗಿದೆ. ಮೂವರು ಹಿರಿಯ ಸಚಿವರಾದ ಮನ್ಸುಖ್ ಮಾಂಡವೀಯ, ಕೆ. ರಾಮ್ ಮೋಹನ್ ನಾಯ್ಡು ಮತ್ತು ಡಾ. ಜಿತೇಂದ್ರ ಸಿಂಗ್ ಅವರು ಇಡೀ ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಂಡರು.

ಈ ವರ್ಷ, ವಿವಿಧ ಸಚಿವಾಲಯಗಳ ಕ್ಯಾಬಿನೆಟ್ ಮಂತ್ರಿಗಳು ಮತ್ತು ರಾಜ್ಯ ಮಂತ್ರಿಗಳು ಅಭಿಯಾನವನ್ನು ಪರಿಶೀಲಿಸಿದ್ದು, ಸಿಬ್ಬಂದಿಯೊಂದಿಗೆ ನಿಯಮಿತ ಚರ್ಚೆಗಳನ್ನು ನಡೆಸಿದ್ದಾರೆ. ಮತ್ತು ಸಾರ್ವಜನಿಕ ಕುಂದುಕೊರತೆಗಳ ಬಾಕಿ ಇರುವಿಕೆಯನ್ನು ಕಡಿತಗೊಳಿಸುವ ಕುರಿತು ಸಚಿವರ ಪರಿಶೀಲನಾ ಸಭೆಯನ್ನು ನಡೆಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net