ಎಸ್ಸಿಪಿ, ಟಿಎಸ್ಪಿ ಹಣ ದುರುಪಯೋಗ

bjp protest
ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
Published on

ಕೋಲಾರ: ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಕಾಂಗ್ರೆಸ್​ ಸರ್ಕಾರವು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ನಚಿಕೇತನ ನಿಲಯ ಆವರಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಡಾ.ಬಿ.ಆರ್​.ಅಂಬೇಡ್ಕರ್​ ಪುತ್ಥಳಿಗೆ ಮಲಾರ್ಪಣೆ ಮಾಡಿ, ನಂತರ ಮೆಕ್ಕೆ ವೃತ್ತ, ಅಮ್ಮವಾರಿಪೇಟೆ ವೃತ್ತ, ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ವೃತ್ತದತನಕ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮೆರವಣಿಗೆಯಲ್ಲಿ ಕಾರ್ಯಕರ್ತರು ನಮ್ಮ ಹಣ ನಮ್ಮ ಹಕ್ಕು ಎಂದು ಘೋಷಣೆ ಹಾಕಿದರು. ಮೂರು ನಾಮ ಹಾಕಿದ್ದ ಚೆಂಬು, ಮಡಿಕೆಗಳನ್ನು ಪ್ರದರ್ಶಿಸಿದರು. ದಲಿತ ವಿರೋಧಿ ಕಾಂಗ್ರೆಸ್​ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಮಾ.7ರಂದು ಬಜೆಟ್​ ಮಂಡನೆಯಾಗಲಿದೆ, ಏನು ಮಾಡುತ್ತೀರಿ ಎಂದು ಕಾಯುತ್ತೇವೆ. ದಲಿತರಿಗೆ ನ್ಯಾಯ ಒದಗಿಸಬೇಕು. ಮತ್ತೆ ದಲಿತರ ಅನುದಾನ ದುರ್ಬಳಕೆ ಮಾಡುವುದಿಲ್ಲವೆಂದು ಘೋಷಿಸಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್​ ಶಾಸಕರು ತಮ್ಮ ಕ್ಷೇತ್ರದ ದಲಿತರಿಗೆ ಒಂದಾದರೂ ಮನೆ ಕೊಟ್ಟಿದ್ದಾರಾ?, ಜಿಲ್ಲಾಮಟ್ಟದ ಆಶ್ರಯ ಸಭೆ ನಡೆಸಿದ್ದಾರಾ?, ಭೂಮಿ ಕೊಡಲು ಈ ಸರ್ಕಾರಕ್ಕೆ ಯೋಗ್ಯತೆ ಇದೆಯೇ?, ನಾಚಿಕೆ, ಮಾನ ಮರ್ಯಾದೆ ಇದೆಯೇ ?, ಕೇವಲ ಅಧಿಕಾರ ಹಿಡಿಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್​ ಅಧಿಕಾರದಲ್ಲಿ ಇರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಕಾಂಗ್ರೆಸ್​ ಸರ್ಕಾರಕ್ಕೆ ಅಧಿಕಾರಕ್ಕೆ ಬಂದಾಗಿನಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ, ಕಾಲೋನಿಗಳ ಅಭಿವೃದ್ಧಿಯಾಗಿಲ್ಲ. ಗ್ಯಾರೆಂಟಿಗಳಿಗೆ ಹಣ ಹೊಂದಿಸಲಾಗದೆ ತೆವಳುತ್ತ ಸಾಗುತ್ತಿದೆ ಎಂದು ದೂರಿದರು.

ಕಳೆದ ಎರಡು ವರ್ಷಗಳಲ್ಲಿ ದಲಿತರ ಸಾವಿರಾರು ಕೋಟಿಯನ್ನು ರಾಜ್ಯ ಸರ್ಕಾರ ಲೂಟಿ ಮಾಡಿದೆ. ದಲಿತರ, ಹಿಂದುಳಿದವರ, ಬಡವರ ಸಮಾಧಿ ಮೇಲೆ ಕಾಂಗ್ರೆಸ್​ ಸರ್ಕಾರ ನಡೆಯುತ್ತಿದೆ. ಗ್ಯಾರಂಟಿ ನೀಡಿ, ಆದರೆ, ದಲಿತರಿಗೆ ಮೋಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್​ ರೆಡ್ಡಿ, ರಾಜ್ಯ ಮುಖಂಡ ಸಂದೀಪ್​, ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಶಾಸಕರಾದ ವೆಂಕಟಮುನಿಯಪ್ಪ, ಮುನಿಸ್ವಾಮಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್​, ಮುಖಂಡರಾದ ಎಸ್​.ಬಿ.ಮುನಿವೆಂಕಟಪ್ಪ, ಡಾ.ಕೆ.ಎನ್​.ವೇಣುಗೋಪಾಲ್​, ಸತ್ಯನಾರಾಯಣರಾವ್​, ಕೆಂಬೋಡಿ ನಾರಾಯಣಸ್ವಾಮಿ, ಹೂವಳ್ಳಿ ಪ್ರಕಾಶ್​, ವೆಂಕಟಚಲಾಪತಿ, ಸುಬ್ಬು, ರಾಜೇಶ್​ ಸಿಂಗ್​ ಉಪಸ್ಥಿತರಿದ್ದರು.

* ದಲಿತರ ಹಣ ಲೂಟಿ ಮಾಡಿದ್ದೇ ಸಾಧನೆ

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಕಳೆದಿದ್ದು, ಸರ್ಕಾರದ ನಿಜ ಬಣ್ಣ ಬಯಲಾಗಿದೆ. ಇದಕ್ಕೆ ದಲಿತ ಸಂಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿರುವುದೇ ಸಾ, ದಲಿತರ ಹೆಸರಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ದಲಿತರಿಗೆ ಮೋಸ ಮಾಡಿದೆ ಎಂದು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಆರೋಪಿಸಿದರು. ಸಿಎಂ ಸೇರಿ ಸಚಿವರು ವೇದಿಕೆಗಳಲ್ಲಿ, ಮಾಧ್ಯಮಗಳ ಮುಂದೆ ಅಂಬೇಡ್ಕರ್​ ಜಪ ಮಾಡುತ್ತಾರೆ. ಆದರೆ ಅವರಿಗೆ ದಲಿತ ಪರ ಕಾಳಜಿಯಿಲ್ಲ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ದಲಿತರ ಅಭಿವೃದ್ಧಿಗೆ 34 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್​.ಸಿ.ಮಹದೇವಪ್ಪ ಹೇಳುತ್ತಾರೆ. ಆದರೆ, ಹೆಚ್ಚಿನ ಹಣವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿದ್ದಾರೆ ಎಂದು ದೂರಿದರು.

* ಹಣ ಲಪಟಾಯಿಸಿದ ಕೀರ್ತಿ ಕಾಂಗ್ರೆಸ್​ಗೆ

ರಾಜ್ಯದಲ್ಲಿ ಅಧಿಕಾರದ ನಡೆಸಿದ ಯಾವುದೇ ರಾಜಕೀಯ ಪಕ್ಷಗಳು ದಲಿತ ಅನುದಾನವನ್ನು ದುರುಪಯೋಗಪಡಿಸಿಕೊಂಡ ಇತಿಹಾಸವಿಲ್ಲ. ಶೋಷಿತ ಸಮುದಾಯಗಳ ಹಣ ಲಪಟಾಯಿಸಿದ ಕೀರ್ತಿ ಕಾಂಗ್ರೆಸ್​ಗೆ ಸಲ್ಲುತ್ತದೆ ಎಂದು ಮಾಜಿ ಸಂಸದ ಎಸ್​.ಮುನಿಸ್ವಾಮಿ ವ್ಯಂಗ್ಯವಾಡಿದರು. ದಲಿತರ ಕೇರಿ ರಸ್ತೆ ಮಾಡಲು, ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಎಸ್ಸಿ, ಎಸ್ಟಿ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕುತ್ತೇವೆ, ನೈತಿಕ ಹೊಣೆ ಹೊತ್ತು ಸಮಾಜ ಕಲ್ಯಾಣ ಸಚಿವ ಡಾ.ಎಚ್​.ಸಿ.ಮಹದೇವಪ್ಪ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net