ವೃದ್ಧಾಪ್ಯದಲ್ಲಿ ಮಕ್ಕಳಿಂದಲೇ ತಿರಸ್ಕಾರ

Bombay HC
Published on

ಮುಂಬೈ: ಅವಿಭಕ್ತ ಕುಟುಂಬ ವ್ಯವಸ್ಥೆ ದುರ್ಬಲಗೊಂಡಿರುವ ಈ ಕಾಲದಲ್ಲಿ ವೃದ್ಧಾಪ್ಯದಲ್ಲಿ ಇರುವವರು ತಮ್ಮ ಮಕ್ಕಳಿಂದಲೇ ತಿರಸ್ಕಾರಕ್ಕೆ ಒಳಗಾಗಿದ್ದಾರೆ ಎಂದು ಬೇಸರ ಹೊರಹಾಕಿರುವ ಬಾಂಬೆ ಹೈಕೋರ್ಟ್, ತನ್ನ ತಾಯಿಯ ಮನೆಯಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ ಪುತ್ರ ಹಾಗೂ ಆತನ ಪತ್ನಿಯನ್ನು ಮನೆ ಖಾಲಿ ಮಾಡ ಬೇಕೆಂದು ಪ್ರಕರಣವೊಂದರಲ್ಲಿ ಆದೇಶ ನೀಡಿದೆ. ಅವಿಭಕ್ತ ಕುಟುಂಬ ವ್ಯವಸ್ಥೆ ಕಡಿಮೆ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯ ವೃದ್ಧರನ್ನು ಅವರ ಕುಟುಂಬಗಳು ನೋಡಿಕೊಳ್ಳುತ್ತಿಲ್ಲ. ಇದರಿಂದ ಅನೇಕ ವೃದ್ಧರು, ವಿಶೇಷವಾಗಿ ವಿಧವೆಯರು ತಮ್ಮ ಬದುಕಿನ ಸಂಧ್ಯಾಕಾಲವನ್ನು ಅನಿವಾರ್ಯವಾಗಿ ಏಕಾಂಗಿತನ ದಿಂದ ಕಳೆಯುತ್ತಿದ್ದು, ಭಾವನಾತ್ಮಕ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.

ಭೌತಿಕ ಮತ್ತು ಆರ್ಥಿಕ ಬೆಂಬಲದ ಕೊರತೆಯೂ ಅವರನ್ನು ಕಾಡುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಉಪವಿಭಾಗಾಧಿಕಾರಿ ಮತ್ತು ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿ ಅಧ್ಯಕ್ಷರು 2021ರಲ್ಲಿ ಮುಲುಂಡ್​ನಲ್ಲಿರುವ ವೃದ್ಧ ತಾಯಿ ಲಕ್ಷ್ಮಿ ಚಂದನಶಿವೆ ಅವರಿಗೆ ಸೇರಿದ ನಿವಾಸ ಖಾಲಿ ಮಾಡಬೇಕೆಂದು ಅರ್ಜಿದಾರ, ಪುತ್ರ ದಿನೇಶ್ ಚಂದನ್​ಶಿವೆಗೆ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ದಿನೇಶ್ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ದಿನೇಶ್ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್, 15 ದಿನದೊಳಗೆ ಮನೆ ಖಾಲಿ ಮಾಡುವಂತೆ ಸೂಚಿಸಿದೆ.

ಜೀವನದಲ್ಲಿ ಭೌತಿಕ ವಸ್ತುಗಳಾಚೆಯೂ ಬದುಕಿದೆ. ವೃದ್ಧಪೋಷಕರ ಸಂಪತ್ತು, ಹಣ ಅವಲಂಬಿಸದೆ ಸಾಧನೆ ಮಾಡುವ ಮಕ್ಕಳ ಬಗ್ಗೆ ಪೋಷಕರು ಹೆಮ್ಮೆಪಡುತ್ತಾರೆ. ಮಾನವನ ದುರಾಸೆಯು ತಳವಿಲ್ಲದ ಹಳ್ಳವಾಗಿದ್ದು, ಈ ಸಮಾಜ ಆದರ್ಶಪ್ರಾಯ ವಾಗಿಲ್ಲ ಎನ್ನುವುದಕ್ಕೆ ಇಂತಹ ಹತ್ತಾರು ದಾವೆಗಳು ನಮ್ಮ ಮುಂದಿರುವುದೇ ಸಾಕ್ಷಿ ಎಂದು ಕೋರ್ಟ್ ಅಸಮಾಧಾನ ಹೊರಹಾಕಿತು.

ಮಗ-ಸೊಸೆ ಠಿಕಾಣಿ: ಪತಿಯ ನಿಧನದ ನಂತರ 2015ರಲ್ಲಿ ಮಗ-ಸೊಸೆ ಮನೆಗೆ ಬಂದಿದ್ದರು. ಆದರೆ ಮನೆ ಖಾಲಿ ಮಾಡಲು ಒಪ್ಪದೆ ಇಲ್ಲೇ ಉಳಿದುಕೊಂಡರು. ನನಗೆ ಕಿರುಕುಳ ನೀಡಿ ಮನೆ ಬಿಟ್ಟು ಹೋಗುವಂತೆ ಒತ್ತಾಯಿಸಿದರು. ನಂತರ ಥಾಣೆಯಲ್ಲಿರುವ ತನ್ನ ಹಿರಿಯ ಮಗನೊಂದಿಗೆ ವಾಸ್ತವ್ಯ ಹೂಡಿದೆ ಎಂದು ಲಕ್ಷ್ಮಿ ಚಂದನಶಿವೆ ಕೋರ್ಟ್​ಗೆ ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net